ಆದವಾನಿಯ ನವಾಬ ಬಸಾಲತ್ ಜಂಗ್ ತುಂಬಾ ಕ್ರೂರಿಯಾಗಿದ್ದ. ಧರ್ಮಾಂಧನೂ, ಮದ್ಯವ್ಯಸನಿಯೂ, ಅಫೀಮಿನ ದಾಸನೂ ಆಗಿದ್ದ ಅವನು ದುರಾಡಳಿತಕ್ಕೆ ಹೆಸರಾಗಿದ್ದ. ಸದಾ ರಾಣೀವಾಸದವರ ಜೊತೆ ಕಾಲಕಳೆಯುತ್ತಾ ಆಡಳಿತವನ್ನು ನಿರ್ಲಕ್ಷಿಸಿದ್ದ. ಅವನು ತನ್ನ ದಿವಾನ ತಿಮ್ಮಣ್ಣನೆಂಬುವನನ್ನು ತುಂಬಾ ನಂಬಿದ್ದ. ಹೆಚ್ಚುಕಡಿಮೆ ಎಲ್ಲ ಆಡಳಿತದ ಜವಾಬ್ದಾರಿ ಅವನ ಕೈಯಲ್ಲೇ ಇತ್ತು. ಬಸಾಲತ್ ಜಂಗನ ದುರಾಚಾರಗಳಿಗೆ ತಿಮ್ಮಣ್ಣ ಅಂಕುಶದಂತಿದ್ದು ಸಮರ್ಥವಾಗಿ ಆಡಳಿತವನ್ನು ನೋಡಿಕೊಳ್ಳುತ್ತಿದ್ದ. ದಿವಾನರ ದಕ್ಷ ಆಡಳಿತ ಮತ್ತು ಬಿಗಿಯಾದ ಆಡಳಿತ ವ್ಯವಸ್ಥೆಯಿಂದ ಶತ್ರುಗಳು ಆದವಾನಿಯ ಮೇಲೆ ದಾಳಿ ಮಾಡಲು ಅಂಜುತ್ತಿದ್ದರು. ಇಂತಹ ಸ್ವಾಮಿನಿಷ್ಠ ದಿವಾನರ ಮಗನನ್ನೇ ನವಾಬನು ಜಾತಿಕೆಡಿಸಿದ. ಆದರೂ, ತಿಮ್ಮಣ್ಣನಿಗೆ ನವಾಬನ ಮೇಲೆ ಸೇಡು ತೀರಿಸಿಕೊಳ್ಳುವ ಅನೇಕ ಅವಕಾಶಗಳಿದ್ದರೂ ಅವನು ಹಾಗೆ ಮಾಡಲಿಲ್ಲ. ಮರಾಠರ ಪೇಶ್ವೆಗಳು ಎಷ್ಟೇ ಪ್ರಯತ್ನ ಮಾಡಿದರೂ ತಿಮ್ಮಣ್ಣಯ್ಯನ ನಿಷ್ಠೆಯನ್ನು ಸಡಿಲಿಸಲಾಗಲಿಲ್ಲ. ದಿವಾನ ತಿಮ್ಮಣ್ಣಯ್ಯ ಇಷ್ಟೆಲ್ಲ ಸಾಧನೆ ಮಾಡಿದರೂ ಅವನಲ್ಲಿ ವೈರಾಗ್ಯ ಭಾವನೆ ಮನೆಮಾಡಿತ್ತು. ರಾಜ್ಯದ ಜವಾಬ್ದಾರಿ, ಅಧಿಕಾರ ಇವೆಲ್ಲ ಕ್ಷಣಿಕ ಮತ್ತು ಲೌಕಿಕ ಎಂದೆನಿಸಿತ್ತು. ಹಿಂದೆ ತಿಮ್ಮಣ್ಣನ ತಂದೆ ದಿವಾನರಾಗಿದ್ದ ಸಮಯದಲ್ಲಿ ಒಮ್ಮೆ ವಿಜಯದಾಸರು ಕಾಶಿ ಯಾತ್ರೆ ಮುಗಿಸಿಕೊಂಡು ಚೀಕಲಪರಿಗೆ ಮರಳುವ ಸಮಯದಲ್ಲಿ ಆದವಾನಿಗೂ ಬಂದಿದ್ದರು. ಆಗಿನ್ನೂ ಬಾಲಕನಾಗಿದ್ದ ತಿಮ್ಮಣ್ಣನನ್ನು ನೋಡಿ ಆತ ದೈವಾಂಶ ಸಂಭೂತನೆಂದು ಭವಿಷ್ಯ ನುಡಿದಿದ್ದರು. ಮತ್ತೊಮ್ಮೆ ವಿಜಯದಾಸರು ಆದವಾನಿಗೆ ಬಂದು ತಿಮ್ಮಣ್ಣನಾಯಕನ ಆತಿಥ್ಯವನ್ನು ಪಡೆದು ಅಲ್ಲಿಯೇ ವಿಶ್ರಮಿಸುತ್ತಿರುವಾಗ ದಾಸರನ್ನು ಭೇಟಿಯಾಗಿ ತನ್ನ ಮನಸ್ಸಿನ ಸ್ಥಿತಿಯನ್ನೂ, ಲೌಕಿಕ ಜೀವನದ ಬಗೆಗಿನ ನಿರಾಸಕ್ತಿಯನ್ನೂ ವ್ಯಕ್ತಪಡಿಸಿದರು. ಅಲ್ಲದೆ, ತಮ್ಮನ್ನು ಅವರ ಶಿಷ್ಯನನ್ನಾಗಿ ಸ್ವೀಕರಿಸಿ, ತನಗೆ ವೇಣುಗೋಪಾಲ ವಿಠಲಾಂಕಿತವನ್ನು ದಯಪಾಲಿಸಬೇಕೆಂದು ಬೇಡಿಕೊಂಡರು. ಅವರಿಗೆ ತನ್ನ ಮಗ ಮತಭ್ರಷ್ಟನಾದುದು ಮತ್ತು ನವಾಬನ ದುರಭ್ಯಾಸಗಳು ಬೇಸರನ್ನುಂಟುಮಾಡಿದ್ದವು. ಒಂದರೆಕ್ಷಣ ವಿಜಯದಾಸರು ಕಣ್ಮುಚ್ಚಿ ಕುಳಿತು ಭಗವಂತನನ್ನು ಧ್ಯಾನಿಸಿದರು. ನಂತರ ತಿಮ್ಮಣ್ಣನನ್ನು ದಿಟ್ಟಿಸಿ ನೋಡುತ್ತಾ ಹೇಳಿದರು, ತಿಮ್ಮಣ್ಣಾ, ನೀನು ಅಧಿಕಾರದಲ್ಲಿದ್ದು ಮಾಡುವ ಸೇವೆ ಬಹಳವಾಗಿರುವುದರಿಂದ ನೀನು ಹರಿದಾಸನಾಗುವುದಕ್ಕೆ ಶ್ರೀಹರಿಯ ಅಪ್ಪಣೆಯಿಲ್ಲ. ಆದರೆ ಅನುಗ್ರಹವಿದೆ ಎಂದು ತಿಳಿಸಿದರಲ್ಲದೆ, ಜನಸೇವೆಯಲ್ಲಿಯೇ ಜನಾರ್ಧನನನ್ನು ಕಾಣಲು ಆದೇಶವಿತ್ತು ಆಶೀರ್ವದಿಸಿದರು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com