ಅಟ್ಲಾಂಟಿಕ್ ಸಾಗರದ ಇಂಗ್ಲಿಷ್ ಕಾಲುವೆ ಪ್ರತಿಯೊಬ್ಬ ಈಜುಗಾರನ ಪಾಲಿಗೆ ಒಂದು ಸವಾಲು. 46 ಕಿಲೋಮೀಟರ್ ದೂರವನ್ನು ಈಜುವುದು ಸುಲಭಸಾಧ್ಯವಲ್ಲ. ಏಕೆಂದರೆ ಮುಖಕ್ಕೆ ಅಪ್ಪಳಿಸುವ ಬೃಹತ್ ತೆರೆಗಳು, ಹತ್ತು ಡಿಗ್ರಿ ಸೆಲ್ಸಿಯಸ್ಗೆ ಇಳಿದು ಬಿಡುವ ತಾಪಮಾನ, ಚರ್ಮವನ್ನು ತುರಿಸುವಂತೆ ಮಾಡುವ ಜೆಲ್ಲಿ ಮೀನುಗಳು. ಇಷ್ಟೆಲ್ಲ ಅನಾನುಕೂಲತೆಗಳ ನಡುವೆ ಅಸಾಮಾನ್ಯ ಈಜು ಪರಿಣಿತರಿಗೇ ಅಲ್ಲಿ ಈಜುವುದು ಒಂದು ಸವಾಲಾಗಿತ್ತು.
ಇಂತಹ ಸಾಹಸ ಕಾರ್ಯವನ್ನು ಕೈಗೊಂಡ ಕೋಲ್ಕತ್ತಾದ ಮಸೂದುರ್ ರೆಹಮಾನ್ ಒಬ್ಬ ಅಂಗವಿಕಲ. ಒಂಬತ್ತು ವರ್ಷದವನಾಗಿದ್ದಾಗಲೇ ತನ್ನೆರಡೂ ಕಾಲುಗಳನ್ನು ರೈಲ್ವೆ ಕ್ರಾಸಿಂಗ್ ಮಾಡುವಾಗ ರೈಲಿಗೆ ಸಿಕ್ಕಿ ಕಳೆದುಕೊಂಡಿದ್ದ ಮಸೂದ್ ಪ್ರಸಿದ್ಧ ಈಜು ತರಬೇತುಗಾರ ಪೀಯೂಷ್ ಬರೂವಾ ಅವರಲ್ಲಿ ಶ್ರಮದಿಂದ ಮತ್ತು ನಿಷ್ಠೆಯಿಂದ ಈಜು ಕಲಿತ. ಒಂದೆರಡು ಈಜು ಸ್ಪರ್ಧೆಗಳಲ್ಲಿ ಬಹುಮಾನಗಳನ್ನೂ ಗಳಿಸಿದ. ಇಂಗ್ಲಿಷ್ ಕಾಲುವೆಯನ್ನು ಯಶಸ್ವಿಯಾಗಿ ಈಜಿ ಪ್ರಸಿದ್ಧರಾಗಿದ್ದ ಹೆಸರಾಂತ ಈಜುಗಾರ್ತಿ ಬುಲಾ ಚೌಧರಿಯ ಮಾರ್ಗದರ್ಶನ ಇವನಿಗೆ ತುಂಬಾ ನೆರವಾಯಿತು. ಜಗನ್ನಾಥ ಪುರಿಯಲ್ಲಿ ಸಮುದ್ರದಲ್ಲಿ ಈಜು ಅಭ್ಯಾಸಕ್ಕೆ ಮುಂದಾದ. ಲಂಡನ್ ಸ್ವಿಮಿಂಗ್ ಕ್ಲಬ್ ಅನ್ನು ಸಂಪರ್ಕಿಸಿ ಹೆಚ್ಚಿನ ತರಬೇತಿ ಪಡೆಯಲು 1997ರಲ್ಲಿ ಇಂಗ್ಲೆಂಡಿಗೆ ತೆರಳಿದ. ಕ್ರೀಡಾ ಇಲಾಖೆ ಅವನಿಗೆ ಸಾಧ್ಯವಾದ ಎಲ್ಲ ನೆರವನ್ನೂ ನೀಡಿ ಪ್ರೋತ್ಸಾಹಿಸಿತು. ಇಂಗ್ಲಿಷ್ ಕಾಲುವೆಯಲ್ಲಿ ಕೆಲವು ವಾರ ಈಜಿ ಅನುಭವ ಗಳಿಸಿದ ಮೇಲೆ, ಬೀಚೊಂದರಲ್ಲಿ ಪ್ರತಿನಿತ್ಯ ಹಲವಾರು ಗಂಟೆಗಳ ತರಬೇತಿ ಪಡೆದ. ಇವನನ್ನು ಉತ್ತೇಜಿಸಲೆಂದೇ 200 ಕಿಲೋಮೀಟರ್ ದೂರದಿಂದ ಪ್ರತಿನಿತ್ಯ ಬರುತ್ತಿದ್ದವರು, ಕ್ರಿಕೆಟ್ ಪಟು ಸೌರವ್ ಗಂಗೂಲಿಯವರ ಚಿಕ್ಕಪ್ಪ ನಿತಿನ್ ಗಂಗೂಲಿ! ಎಲ್ಲರ ಪ್ರೋತ್ಸಾಹ ಮತ್ತು ನೆರವಿನಿಂದ ಕಠಿಣ ಅಭ್ಯಾಸ ಮಾಡಿದ ಮಸೂದನಿಗೆ ತಾನು ಖಂಡಿತಾ ಆ ಕಾಲುವೆಯನ್ನು ಈಜಿಯೇ ಬಿಡುತ್ತೇನೆಂಬ ಆತ್ಮ ವಿಶ್ವಾಸ ಮೂಡಿತು. ಅದೇ ವರ್ಷದ ಜುಲೈ ಎಂಟು ಮಸೂದನ ಜೀವನದಲ್ಲಿ ಮರೆಯಲಾಗದ ದಿನ. ಅಂದು ಮಸೂದ್ ಇಂಗ್ಲಿಷ್ ಕಾಲುವೆಯನ್ನು ದಾಟುವವನಿದ್ದ. ಅವನ ಜೊತೆಗೆ ಕಣ್ಗಾವಲು ದೋಣಿಯಲ್ಲಿ ಪೈಲಟ್ ಜೊತೆ ವೀರೇಂದ್ರದತ್ತ ಮತ್ತು ನಿತೀಶ್ ಗಂಗೂಲಿ ಸಹ ಇದ್ದರು. ಮಸೂದ್ 12 ಗಂಟೆ 23 ನಿಮಿಷಗಳವರೆಗೆ ಬಿಡದೇ ಈಜಿ ಫ್ರಾನ್ಸಿನ ಕೇಪ್ ಗ್ರೀಜಿಗೆ ಬಂದಾಗ ಅವನನ್ನು ಎದುರುಗೊಳ್ಳಲು ವಿಶ್ವದ ಪ್ರಸಿದ್ಧ ಟಿ.ವಿ. ಮಾಧ್ಯಮಗಳು ಮತ್ತು ಪತ್ರಿಕೆಯವರು ಕಾತರದಿಂದ ಕಾಯುತ್ತಿದ್ದರು. ಕೊನೆಯ ಕ್ಷಣಗಳಂತೂ ತುಂಬಾ ಅಪಾಯಕಾರಿಯಾಗಿದ್ದವು. ಒಂದು ಅಡಿ ಈಜಲು ಐದು ನಿಮಿಷವಾದರೂ ಬೇಕಾಗಿತ್ತು. ಕಾರಣ ರಕ್ಕಸ ಗಾತ್ರದ ಅಲೆಗಳು ಪ್ರಾಣಾಪಾಯವನ್ನುಂಟು ಮಾಡುವಂತಿದ್ದವು . ದಿನಬೆಳಗಾಗುವುದರ ಒಳಗೆ ಮಸೂದ್ ಜಗತ್ಪ್ರಸಿದ್ಧಿ ಗಳಿಸಿದ. ಇಂಗ್ಲಿಷ್ ಕಾಲುವೆಯನ್ನು ಈಜಿದ ಮೊದಲ ಅಂಗವಿಕಲ ಈಜುಗಾರನೆಂಬ ಖ್ಯಾತಿಯನ್ನೂ ಪಡೆದ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com