ಯಾವತ್ತೂ ಸಂಚರಿಸುವುದೇ ಇದರ ಚರಿತಾರ್ಥ ಮತ್ತು ಅದರಲ್ಲೇ ಅಡಗಿದೆ ಇದರ ಚರಿತೆ
ಚಾಲಕನ ಮನದಂತೆಯೇ ಇದರ ಗಮನ
ಸುದೃಢ ರಸ್ತೆಯೊಂದಿದ್ದರೆ ಚಕ್ರದ ಬಗ್ಗೆ ಚಕಾರ ಎತ್ತುವ ಪ್ರಸಂಗವೇ ಇರುವುದಿಲ್ಲ
ರಸ್ತೆ ಮಸ್ತಾಗಿದ್ದರೆ ಸಾಕು ನಮ್ಮನ್ನು ಸುಸ್ತಾಗದಂತೆ ತಲುಪಿಸುವುದು
ಇದೊಂಥರಾ ಸ್ಪೋಕ್ಸ್ಪರ್ಸನ್ ಅಂದರೆ ತಪ್ಪಿಲ್ಲ
ನಿಂತರೆ ನಿಂತಲ್ಲೇ ನಿಲ್ಲುವುದು
ಗಾಡಿ ಓಡಲು ಕೆಳಗಡೆ ಇಡಲಾಗುವ ಸಾಧನ
ಅದೆಷ್ಟೋ ಚಾಲಕ ನಿರ್ವಾಹಕರ ಜೀವನ ಇದರ ಮೇಲೇ ನಿರ್ಧಾರ
ಚಾಲಕ ಚಾಲಾಕಿಯಾಗಿದ್ದರೆ ಚಕ್ರದ ಆಯುಷ್ಯ ಹೆಚ್ಚು
ಚಕ್ರ ಪ್ರಗತಿಯ ಸಂಕೇತವೇನೋ ಹೌದು, ಆದರೆ ದಾರಿ ತಪ್ಪಿದರೆ ಗುಂಡಿ ಗ್ಯಾರಂಟಿ
ಚಕ್ರವನ್ನೇ ಆಸನವನ್ನಾಗಿಸಿಕೊಂಡರೆ ಅದನ್ನು ಚಕ್ರಾಸನ ಎನ್ನಬಹುದು
ಮಾರ್ಗ ಚೆನ್ನಾಗಿರದಿದ್ದರೆ ಮರುಗುವುದು ತಪ್ಪುವುದಿಲ್ಲ
ಇದಕ್ಕೂ ಗಾಳಿಯೇ ಆಹಾರ
ಭ್ರಮಣಶೀಲ ಜಗತ್ತಿನಲ್ಲಿನ ಭ್ರಮರ
ತಾನು ಸುತ್ತುತ್ತಾ ಜನರನ್ನೂ ಸುತ್ತಿಸುವ ಪ್ರಜಾ ಸುತ್ತಾತ್ಮಕ ವ್ಯವಸ್ಥೆಯ ಮೂಲಭೂತ ಅಂಗ
ವಿಶ್ವನಾಥ ಸುಂಕಸಾಳ
vishwasunkasal@yahoo.com