ಮೊದಲು ಜ್ಞಾನ ಭಂಡಾರವನ್ನು ಸುಡಿ

Updated on: 

ಜ್ಯೂಲಿಯಸ್ ಸೀಸರ್ ಕ್ರಿ.ಪೂ.49 ರಿಂದ 44 ರವರೆಗೆ ರೋಮನ್ ಅಧಿಪತಿಯಾಗಿದ್ದ. ರೋಮನ್ ಸಾಮ್ರಾಜ್ಯದ ವಿಸ್ತರಣೆಗಾಗಿ ದೊಡ್ಡ ದಂಡಯಾತ್ರೆಯನ್ನೇ ಕೈಗೊಂಡ. ಲ್ಯಾಟಿನ್‌ನಲ್ಲಿ ಗ್ರಂಥ ರಚನೆ ಮಾಡಿದ ಸುಜ್ಞಾನಿಯೂ ಅವನಾಗಿದ್ದ. ಅವನು ಒಮ್ಮೆ ಈಜಿಪ್ತ್ ಮೇಲೆ ದಂಡಯಾತ್ರೆ ಹೊರಟಾಗ ದಾರಿಯಲ್ಲಿ ಅಲೆಕ್ಸಾಂಡ್ರಿಯಾ ನಗರದ ಮೇಲೆ ದಾಳಿ ಮಾಡಿದ. ಅಲೆಕ್ಸಾಂಡರ್‌ನಿಂದ ಸ್ಥಾಪಿತವಾಗಿದ್ದ ಆ ನಗರ ಆಗಿನ ಕಾಲಕ್ಕೆ ಹೆಚ್ಚು ಅಭಿವೃದ್ಧಿ ಸಾಧಿಸಿತ್ತು. ಅದು ಜ್ಞಾನ ಮತ್ತು ಮೇಧಾಶಕ್ತಿಗೆ ಹೆಸರಾಗಿತ್ತು. ಅಲ್ಲಿನ ಜನ ಅಧ್ಯಯನ ಶೀಲರಾಗಿದ್ದು, ಸಾಕಷ್ಟು ವಿದ್ವಾಂಸರು ಅಲ್ಲಿ ನೆಲೆಸಿದ್ದರು. ಆ ನಗರದ ಜನರೆಲ್ಲ ಸುಖ ಮತ್ತು ನೆಮ್ಮದಿಯಿಂದ ಜೀವಿಸುತ್ತಿದ್ದರು. ಅಲ್ಲಿದ್ದ ಒಂದು ಪ್ರಾಚೀನ ಬೃಹತ್ ಪುಸ್ತಕಭಂಡಾರದಲ್ಲಿ ಸಾವಿರಾರು ಅಮೂಲ್ಯವಾದ ಗ್ರಂಥಗಳಿದ್ದವು. ಅದು ವಿಶ್ವದ ಪ್ರಮುಖ ಪುರಾತನ ಗ್ರಂಥಾಲಯಗಳಲ್ಲಿ ಒಂದಾಗಿತ್ತು. ರೋಮನ್ ತತ್ವಜ್ಞಾನಿ ಸೆನೇಕಾ ಅಭಿಪ್ರಾಯ ಪಡುವಂತೆ ಅಲ್ಲಿ 40 ಸಾವಿರಕ್ಕೂ ಹೆಚ್ಚು ಗ್ರಂಥಗಳು ಇದ್ದವೆಂದು ತಿಳಿದು ಬರುತ್ತದೆ. ವಿಶ್ವದ ಅನೇಕ ಕಡೆಗಳಿಂದ ವಿದ್ವಾಂಸರು ಬಂದು ಅಧ್ಯಯನ ಮಾಡುತ್ತಿದ್ದುದರಿಂದ ಆ ನಗರಕ್ಕೆ ವಿಶೇಷ ವರ್ಚಸ್ಸು ಮತ್ತು ತೇಜಸ್ಸು ಪ್ರಾಪ್ತವಾಗಿತ್ತು.
ಅಲ್ಲಿ ಸಾಹಿತ್ಯ ಚರ್ಚೆ ಮತ್ತು ಸಂವಾದಗಳು ಆಗಾಗ್ಗೆ ನಡೆಯುತ್ತಿದ್ದು ಜನ ತುಂಬ ಆಸಕ್ತಿಯಿಂದ ಭಾಗವಹಿಸುತ್ತಿದ್ದರು. ಸೀಸರನ ಸೈನಿಕರು ಅಲೆಕ್ಸಾಂಡ್ರಿಯಾವನ್ನು ವಶಪಡಿಸಿಕೊಂಡ ಮೇಲೆ ಅಲ್ಲಿನ ಸಂಪತ್ತು ಅವರ ಮನಸೆಳೆಯಿತು. ಅಗಾಧ ಸಂಪತ್ತನ್ನು ಹೊಂದಿದ್ದ ಆ ನಗರ ಸೈನಿಕರೆಲ್ಲರಿಗೂ ಆಕರ್ಷಣೆಯ ತಾಣವಾಗಿತ್ತು. ಅವರೆಲ್ಲ ಒಟ್ಟಾಗಿ ಸೀಸರನ ಬಳಿ ಹೋಗಿ ನಗರವನ್ನು ಲೂಟಿಮಾಡಲು ಅನುಮತಿ ಬೇಡಿದರು. ಅಲೆಕ್ಸಾಂಡ್ರಿಯಾವನ್ನು ಸುಲಿಗೆ ಮಾಡಿ ಧ್ವಂಸ ಮಾಡುವ ಉದ್ದೇಶ ಅವರದಾಗಿತ್ತು. ಸೀಸರನು ಸೈನಿಕರ ಮಾತನ್ನು ನಿಧಾನವಾಗಿ ಆಲಿಸಿ ಸೈನಿಕರಿಗೆ ಹೇಳಿದನು, "ಇಲ್ಲಿನ ಜನ ಬೌದ್ಧಿಕವಾಗಿ ಎಲ್ಲರನ್ನೂ ಮೀರಿಸುವವರೇ ಆಗಿದ್ದಾರೆ. ಅವರ ಅಗಾಧ ಪಾಂಡಿತ್ಯಕ್ಕೆ ಮೂಲ ಕಾರಣ ಅಲ್ಲಿರುವ ಅತ್ಯದ್ಭುತ ಪುಸ್ತಕ ಭಂಡಾರ. ಹೀಗಾಗಿ ಅದನ್ನು ನಾಶ ಪಡಿಸಿದರೆ, ಅವರ ಜ್ಞಾನದ ಮೂಲವನ್ನೇ ಚಿವುಟಿ ಹಾಕಿದಂತಾಗುತ್ತದೆ. ಆದ್ದರಿಂದ ಮೊದಲು ಆ ಪುಸ್ತಕ ಭಂಡಾರಕ್ಕೆ ಬೆಂಕಿ ಇಡಿ' ಎಂದು ಆಜ್ಞೆ ಮಾಡಿದ. ಅವನ ಆದೇಶದಂತೆ ಸೈನಿಕರು ನಗರವನ್ನು ಲೂಟಿ ಮಾಡುವ ಮುನ್ನ ಆ ಅಮೂಲ್ಯವಾದ ಪುಸ್ತಕ ಭಂಡಾರಕ್ಕೆ ಬೆಂಕಿ ಇಟ್ಟರು. ಸತತ ಏಳು ದಿನಗಳ ಕಾಲ ಉರಿದ ಆ ಜ್ಞಾನ ಭಂಡಾರ ನಾಶವಾದದ್ದು ಮಾತ್ರ ತುಂಬಲಾಗದ ನಷ್ಟವಾಗಿ ಅನೇಕ ಅಮೂಲ್ಯವಾದ ಗ್ರಂಥಗಳು ಹೇಳ ಹೆಸರಿಲ್ಲದಂತೆ ಆದವು. ಇದೊಂದು ಸಂಸ್ಕೃತಿ ಮತ್ತು ಜ್ಞಾನದ ನಾಶವೆಂದೇ ಇತಿಹಾಸದಲ್ಲಿ ಬಣ್ಣಿಸಲಾಗಿದೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com