ನಾನು ಸ್ಥಾಪಿಸುತ್ತಿರುವುದು ಈಳವರ ಶಿವನನ್ನು

Updated on: 

ನಾರಾಯಣ ಗುರು ಮಹಾರಾಜರು ನಮ್ಮ ದೇಶದ ವಿಭೂತಿ ಪುರುಷರಲ್ಲಿ ಒಬ್ಬರಾಗಿದ್ದಾರೆ. ಸಮಾಜದಲ್ಲಿ ಮೇಲುಕೀಳೆಂಬಬೇಧಭಾವ ತಾಂಡವಾಡುತ್ತಿದ್ದ ಸಮಯದಲ್ಲಿ ಕೇರಳದಲ್ಲಿ, ಅದೂ ಈಳವ ಜನಾಂಗದಲ್ಲಿ ನಾರಾಯಣಗುರುಗಳ ಅವತಾರವಾಯಿತು. ಆಗಿನ ಕಾಲದಲ್ಲಿ ಈಳವರು ಹೆಚ್ಚಾಗಿ ಮದ್ಯವನ್ನಿಳಿಸಿ ಮಾರಾಟಮಾಡುವ ವೃತ್ತಿಯನ್ನು ಅವಲಂಬಿಸಿದ್ದರು. ಆದರೆ ನಾರಾಯಣ ಗುರುಗಳ ಹಿರಿಯರು ವ್ಯವಸಾಯ, ಜೋತಿಷ್ಯ ಮತ್ತು ವೈದ್ಯವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದರು. ಚಿಕ್ಕಂದಿನಿಂದಲೂ ಮೇಧಾವಿಯಾಗಿದ್ದ ಬಾಲಕ ನಾರಾಯಣ ಸಂಸ್ಕೃತ, ಮಲಯಾಳಂ ಮತ್ತು ತಮಿಳು ಭಾಷೆಗಳನ್ನು ಕಲಿತು ಪಾರಂಗತನಾಗಿದ್ದ. ತಮ್ಮ ಜನಾಂಗ ಸಮಾಜದಲ್ಲಿ ಅತ್ಯಂತ ಹೀನ ಪರಿಸ್ಥಿತಿ ಹೊಂದಿರುವುದನ್ನು ಗಮನಿಸಿ, ಇದಕ್ಕೆ ವಿದ್ಯೆಯೊಂದೇ ಸರಿಯಾದ ಮಾರ್ಗ ಎಂದು ಭಾವಿಸಿದ. ಮುಂದೆ ಸನ್ಯಾಸಾಶ್ರಮ ಪಡೆದು ನಾರಾಯಣ ಗುರುಗಳಾದರು. ಅಂದಿನ ಕಾಲದಲ್ಲಿ ತಮ್ಮ ಜನಾಂಗದವರಿಗೆ ದೇವಾಲಯಗಳಲ್ಲಿ ಪ್ರವೇಶ ನಿರಾಕರಿಸುತ್ತಿರುವುದನ್ನು ನೋಡಿದ ಗುರುಗಳು ತುಂಬಾ ನೊಂದುಕೊಂಡರು. ಅವರಿಗಾಗಿ ತಾವೇ ಶಿವದೇವಾಲಯವನ್ನು ಸ್ಥಾಪಿಸತೊಡಗಿದರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬ ದಿವ್ಯವಾಣಿಯನ್ನು ಮೊಳಗಿಸಿದರು. ಕೇರಳದಲ್ಲಿ ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಶ್ರಮಿಸಿದರಲ್ಲದೆ, ಸಂಘರ್ಷರಹಿತ ಕ್ರಾಂತಿ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ. ನಾರಾಯಣಗುರುಗಳು ನೆಯ್ಯಾರ್ ನದಿ ದಂಡೆಯ ಮೇಲಿದ್ದ ಅರುವಿಪ್ಪಂ ಎಂಬ ಹಳ್ಳಿಗೆ ಬಂದು ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರುಹೋದರು. ಅಲ್ಲಿಯೇ ಕೆಲಕಾಲ ತಂಗಿ ತಪಸ್ಸನ್ನಾಚರಿಸಿದರು. ಅವರ ತೇಜೋಮಯ ವ್ಯಕ್ತಿತ್ವಕ್ಕೆ ಮಾರುಹೋದ ಜನ ಅವರ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಬರಲಾರಂಭಿಸಿದರು. ಆಧ್ಯಾತ್ಮ ಜ್ಞಾನವನ್ನು ಉಣಿಸುತ್ತಿದ್ದ ನಾರಾಯಣ ಗುರುಗಳಿಗೆ ಹಿಂದುಳಿದ ಬಡವರ್ಗದವರಿಗಾಗಿ ಒಂದು ದೇವಾಲಯ ನಿರ್ಮಿಸಬೇಕೆಂಬ ಒಲವು ಮೂಡಿತು. ಏಕೆಂದರೆ ಅವರ್ಯಾರಿಗೂ ಮೇಲ್ವರ್ಗದವರು ದೇವಾಲಯದ ಒಳಗೆ ಪ್ರವೇಶ ನೀಡುತ್ತಿರಲಿಲ್ಲ. ಅದಕ್ಕಾಗಿ  ಶಿವರಾತ್ರಿಯ ಒಂದು ದಿನ ಅಲ್ಲಿಯೇ ನದಿ ತೀರದಲ್ಲಿ ಒಂದು ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿಯೇ ಬಿಟ್ಟರು. ಈ ಲಿಂಗ ಪ್ರತಿಷ್ಠಾಪನೆ ಆಗಿನ ಕಾಲಕ್ಕೊಂದು ಕ್ರಾಂತಿಕಾರಕ ಘಟನೆಯಾಗಿತ್ತು. ಅದನ್ನು ವಿರೋಧಿಸಿದ ನಂಬೂದರಿಗಳು, ಬ್ರಾಹ್ಮಣರ ಹೊರತಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸುವ ಅಧಿಕಾರ ಯಾರಿಗೂ ಇಲ್ಲ ಎಂದು ವಿರೋಧಿಸಿದರು. ಆಗ ಶಾಂತಮೂರ್ತಿ ನಾರಾಯಣ ಗುರುಗಳು ಅಂಜದೆ, ತಾವು ಪ್ರತಿಷ್ಠಾಪಿಸಿದ್ದು ಬ್ರಾಹ್ಮಣರ ಶಿವನನ್ನಲ್ಲ, ಈಳವರ ಶಿವನನ್ನು. ಅದಕ್ಕೆ ಅಧಿಕಾರವೇಕೆ? ಎಂದು ಮರುಪ್ರಶ್ನಿಸಿದರು. ಮುಖಭಂಗವಾದ ನಂಬೂದರಿಗಳು ಸುಮ್ಮನೆ ಹಿಂದಿರುಗಬೇಕಾಯಿತು. ಕ್ರಮೇಣ ಆ ದೇವಾಲಯ ಎಲ್ಲರ ಶ್ರದ್ಧಾಕೇಂದ್ರವಾಗಿ ಕಂಗೊಳಿಸಿತು.  

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com