ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಪಂಡಿತ ನಿಷ್ಕಾಮೇಶ್ವರಂ ಎಂಬುವರು ತರಗತಿ ಶಿಕ್ಷಕರಾಗಿದ್ದರು. ಅವರು ತರಗತಿಯ ಎಲ್ಲ ಮಕ್ಕಳನ್ನೂ ಒಂದು ದಿನ ಜಾತ್ರೆಗೆ ಕರೆದೊಯ್ಯಬೇಕೆಂಬ ಕಾರ್ಯಕ್ರಮವನ್ನಿಟ್ಟುಕೊಂಡಿದ್ದರು. ಆದ್ದರಿಂದ ಎಲ್ಲ ವಿದ್ಯಾರ್ಥಿಗಳೂ ಕನಿಷ್ಠ ಒಂದಾಣೆಯನ್ನಾದರೂ ತರಬೇಕೆಂದು ಆದೇಶಿಸಿದ್ದರು. ಮರುದಿನ ಎಲ್ಲ ಮಕ್ಕಳೂ ಉತ್ಸಾಹದಿಂದ ಜಾತ್ರೆಗೆ ಹೊರಡಲು ಸಿದ್ಧವಾಗಿ ಬಂದಿದ್ದರು. ಶಾಸ್ತ್ರಿಯವರು ಮಾತ್ರ ತಾವು ಬರುವುದಿಲ್ಲವೆಂದು ಹಠಹಿಡಿದರು. ಅವರ ಬಳಿ ಶಿಕ್ಷಕರಿಗೆ ನೀಡಲು ಒಂದಾಣೆ ಇರಲಿಲ್ಲ, ಬದಲಾಗಿ ಅವರ ಜೇಬಿನಲ್ಲಿ ಕೇವಲ ಮೂರುಕಾಸು ಇತ್ತು. ಶಿಕ್ಷಕರು ಶಾಸ್ತ್ರಿಯವರ ಪರಿಸ್ಥಿತಿ ತಿಳಿದು ಮರುಗಿದರು. ಆದರೂ ಅವರನ್ನು ಬಲವಂತವಾಗಿ ಜಾತ್ರೆಗೆ ಕರೆದುಕೊಂಡು ಹೋಗಿ ವಾಪಸ್ಸು ಬರುವಾಗ ತಮ್ಮ ಮನೆಗೂ ಕರೆದೊಯ್ದರು. ತಮ್ಮ ಪತ್ನಿಯನ್ನು ಕರೆದು ಬಾಲಕ ಲಾಲಬಹಾದ್ದೂರನನ್ನು ಪರಿಚಯಿಸಿ, "ಇಂದಿನಿಂದ ನಮಗೆ ಮೂರಲ್ಲ ನಾಲ್ಕು ಮಕ್ಕಳು. ತಿಳಿಯಿತೆ?" ಎಂದು ಹೇಳಿದರು.
ಅಂದಿನಿಂದ ಪ್ರತಿನಿತ್ಯ ಶಾಸ್ತ್ರಿಯವರು ಶಾಲೆಯಿಂದ ಮರಳುವಾಗ ನಿಷ್ಕಾಮೇಶ್ವರರ ಮನೆಗೆ ಬಂದೇ ಹೋಗಬೇಕೆಂದು ಪತಿ-ಪತ್ನಿಯರಿಬ್ಬರೂ ತಾಕೀತು ಮಾಡಿದರು. ಹಬ್ಬ ಹರಿದಿನಗಳಲ್ಲಂತೂ ತಪ್ಪಿಸುವಂತಿರಲಿಲ್ಲ. ಬಂದಾಗಲೆಲ್ಲ ಪೊಗದಸ್ತಾಗಿ ಊಟೋಪಚಾರಗಳು ನಡೆಯುತ್ತಿದ್ದವು. ಪ್ರೀತಿಯ ಮಳೆಗರೆಯುತ್ತಿದ್ದ ಪಂಡಿತ ದಂಪತಿಗಳಿಗೆ ಶಾಸ್ತ್ರಿಯವರ ಮೇಲೆ ಪುತ್ರವಾತ್ಸಲ್ಯವಿತ್ತು. ಮೊದಲೇ ಸಂಕೋಚ ಪ್ರವೃತ್ತಿಯ ಲಾಲ್ಬಹಾದ್ದೂರ್ ತಪ್ಪಿಸಿಕೊಳ್ಳಲು ಪ್ರಾರಂಭಿಸಿದರು. ಅವರ ಮನಸ್ಥಿತಿಯನ್ನು ಅರಿತ ಪಂಡಿತರು ಪ್ರತಿ ದಿನ ತಮ್ಮ ಮನೆಗೆ ಬಂದು ಮಕ್ಕಳಿಗೆ ಪಾಠ ಹೇಳಿಕೊಡಬೇಕೆಂದು ಫರ್ಮಾನು ಹೊರಡಿಸಿದರು. ಇದರಿಂದ ಪ್ರತಿನಿತ್ಯ ಪಂಡಿತರ ಮನೆಗೆ ಕಡ್ಡಾಯವಾಗಿ ಭೇಟಿಕೊಡಲೇಬೇಕಾಯಿತು. ತಿಂಗಳಾಂತ್ಯದಲ್ಲಿ ಟ್ಯೂಷನ್ ಫೀ ಕೊಡಲು ಹೋದರೆ ಅದನ್ನು ಸ್ವೀಕರಿಸಲು ಶಾಸ್ತ್ರಿಯವರು ಸುತರಾಂ ಒಪ್ಪಲಿಲ್ಲ. ಕೊನೆಗೆ ಪಂಡಿತರ ಪತ್ನಿ ಭಾಭೋ ಅದಕ್ಕೂ ಒಂದು ಉಪಾಯ ಮಾಡಿದರು. ಕೋಣೆಯ ನಾಲ್ಕೂ ಮೂಲೆಯಲ್ಲಿ ಒಂದೊಂದು ಮುಚ್ಚಿದ ಕುಡಿಕೆಗಳನ್ನಿಟ್ಟು, ಅದಕ್ಕೆ ಎಲ್ಲ ಮಕ್ಕಳೂ ತಮ್ಮಲ್ಲಿದ್ದ ಪುಡಿಕಾಸನ್ನು ಅದರಲ್ಲಿ ಹಾಕಬೇಕೆಂದು ತಿಳಿಸಿದರು. ತಿಂಗಳಾದ ನಂತರ ಶಾಸ್ತ್ರಿಯವರ ಕುಡಿಕೆಯನ್ನು ತೆರದು ನೋಡಿದಾಗ ಅವರು ಹಾಕುತ್ತಿದ್ದ ಪುಡಿಕಾಸಿನ ಜೊತೆ ರುಪಾಯಿ ನೋಟುಗಳೂ ಇದ್ದುದು ಅವರ ಗಮನಕ್ಕೆ ಬಂತು. ಇದು ತಮ್ಮ ಗುರುಗಳ ಕೆಲಸವೆಂದೇ ತಿಳಿದು ಅದನ್ನು ಪಡೆಯಲು ನಿರಾಕರಿಸಿದರಲ್ಲದೆ, ಹಾಗೆ ತಮ್ಮ ವಿನಃ ಬೇರೆಯವರು ಹಣಹಾಕುವುದನ್ನು ವಿರೋಧಿಸಿದರು. ಆದರೂ ಈ ಕ್ರಮ ಮುಂದುವರೆದು, ಕೊನೆಗೆ ಅದು ಒಂಬೈನೂರು ರುಪಾಯಿಗೆ ಮುಟ್ಟಿತು! ಶಾಸ್ತ್ರಿಯವರ ಸಹೋದರಿ ಸುಂದರಿದೇವಿಯ ವಿವಾಹದ ಖರ್ಚಿಗಾಗಿ ಈ ಹಣವನ್ನು ಬಳಸಬೇಕೆಂದು ಗುರುಗಳು ಎಷ್ಟೇ ಹೇಳಿದರೂ, ಶಾಸ್ತ್ರಿಯವರು ಮಾತ್ರ ಅದಕ್ಕೆ ಒಪ್ಪದೆ ಇದು ತಮ್ಮ ಆತ್ಮಾಭಿಮಾನದ ಪ್ರಶ್ನೆ ಎಂದು ತಿರಸ್ಕರಿಸಿದರು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com