ಪರಿಷತ್ತನ್ನು ಕಟ್ಟಿದವರ ಸ್ಮರಣೆ

Updated on: 

ಇಂದು ಕನ್ನಡ ಸಾಹಿತ್ಯ ಪರಿಷತ್ತು ಹೆಮ್ಮರವಾಗಿ ಬೆಳೆದು, ಬೃಹತ್ ಕಟ್ಟಡ, ಸರ್ಕಾರದ ಧಾರಾಳ ಅನುದಾನ, ವೈಭವೋಪೇತ ಸಮ್ಮೇಳನಗಳು ಎಲ್ಲವೂ ನಡೆಯುತ್ತಿದೆ. ಅಧಿಕಾರಕ್ಕಾಗಿ ಪೈಪೋಟಿ ನಡೆಯುತ್ತದೆ. ಆದರೆ ಹಿಂದೆ ಪರಿಷತ್ತಿನ ಪರಿಸ್ಥಿತಿ ಹೇಗಿತ್ತು. ಅದಕ್ಕೆ ಶ್ರಮಿಸಿದವರ ಸ್ಮರಣೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಪರಿಷತ್ತನ್ನು ಕಟ್ಟಿದ ಮಹನೀಯರುಗಳಲ್ಲಿ ಒಬ್ಬರು ಎಂ.ಆರ್.ಶ್ರೀನಿವಾಸ ಮೂರ್ತಿಗಳು. ಅವರ ತಂದೆ ಆಗಿನ ಕಾಲಕ್ಕೆ ಅಮಲ್ದಾರರಾಗಿದ್ದರೂ ಕರ್ತವ್ಯ ನಿಷ್ಠೆಯನ್ನು ಮೆರೆದವರು. ಶ್ರೀಯವರು ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಅದರ ಹಣಕಾಸಿನ ಸ್ಥಿತಿ ದಯನೀಯವಾಗಿತ್ತು. ಸರಿರಾತ್ರಿಯವರೆಗೂ ಪರಿಷತ್ತಿನ ಕಾರ್ಯಾಲಯದಲ್ಲಿ ಒಬ್ಬರೇ ಕುಳಿತು ಅಂದಿನ ಕಾಗದವನ್ನು ಅಂದೇ ವಿಲೇವಾರಿ ಮಾಡಿ ಮನೆಗೆ ತೆರಳುತ್ತಿದ್ದರು. ನಿಘಂಟಿನ ಸಂಪಾದಕ ಮಂಡಳಿಯ ಸದಸ್ಯರಿಗೆ ಪ್ರಯಾಣದ ವೆಚ್ಚವನ್ನು ಕೊಡಲಾಗದೆ ಸಭೆಯನ್ನು ತಿಂಗಳುಗಟ್ಟಲೆ ಕರೆಯದೆ ಇದ್ದುದುಂಟು. ಸರ್ಕಾರ ವಾರ್ಷಿಕ ಅನುದಾನವನ್ನು ಮೂರುಸಾವಿರದಿಂದ ಹನ್ನೆರಡು ಸಾವಿರಕ್ಕೆ ಹೆಚ್ಚಿಸಿಕೊಳ್ಳಲು ಸಮರ್ಥರಾದರು. ಒಮ್ಮೆ ಆಗಿನ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನು ಪರಿಷತ್ತಿಗೆ ಕರೆಸಿ, ಕಷ್ಟಗಳನ್ನು ನಿವೇದಿಸಿ, ಒಂದು ಸಭೆಯನ್ನು ಏರ್ಪಡಿಸಿ ಸಹಾಯ ಬೇಡಿದರು. ಸಭೆಯಲ್ಲಿ ನಿಘಂಟಿನ ಯೋಜನೆಗೆ ಹನುಮಂತಯ್ಯನವರು ಒಂದು ಲಕ್ಷ ರುಪಾಯಿಗಳ ಅನುದಾನವನ್ನು ಘೋಷಿಸಿದಾಗ ಎಲ್ಲರಿಗೂ ಆಶ್ಚರ್ಯ. ಏಕೆಂದರೆ ಆಗಿನ ಕಾಲದಲ್ಲಿ ಐವತ್ತು ರುಪಾಯಿಗೆ ಬೆಂಗಳೂರಿನಲ್ಲಿ ಒಳ್ಳೆಯ ಬಾಡಿಗೆ ಮನೆ ಸಿಗುತ್ತಿದ್ದ ಕಾಲದಲ್ಲಿ ಒಂದು ಲಕ್ಷ ರುಪಾಯಿ ಅತಿದೊಡ್ಡ ಮೊತ್ತವಾಗಿತ್ತು. ಅಲ್ಲದೆ ಪಠ್ಯಪುಸ್ತಕಗಳನ್ನು ಮುದ್ರಿಸುವ ಕೆಲಸವನ್ನೂ ಪರಿಷತ್ತಿಗೆ ವಹಿಸಿ, ಪರಿಷತ್ತು ಆರ್ಥಿಕವಾಗಿ ಚೇತರಿಸಿಕೊಳ್ಳಲು ನೆರವಾದರು. ಹೀಗೆ ಪರಿಷತ್ತಿನ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ ಶ್ರೀಯವರ ವೈಯಕ್ತಿಕ ಸ್ಥಿತಿ ಉತ್ತಮವಾಗಿರಲಿಲ್ಲ. ದೊಡ್ಡ ಕುಟುಂಬ, ಬರುತ್ತಿದ್ದ ಒಂದು ನೂರಾ ಎಂಟು ರುಪಾಯಿ ನಿವೃತ್ತಿವೇತನದಲ್ಲಿ ಜೀವನ ನಡೆಸಲೇಬೇಕಾದ ಅನಿವಾರ್ಯತೆ. ಅವರು ಹೊರಹೋಗುವಾಗ ಇದ್ದ ಒಂದೇ ಒಂದು ಹರಿದು ಹೋದ ಶಲ್ಯವನ್ನು ಕಾಣದಂತೆ ಹರಕು ಮುಚ್ಚುವಂತೆ ಮಡಿಸಿ, ಹೊಲಿದು ಹಾಕಿಕೊಳ್ಳುತ್ತಿದ್ದರು. ಆದರೆ ಪರಿಷತ್ತಿನ ಕಾರ್ಯದಲ್ಲಿ ಅತ್ಯಂತ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿದ್ದರು. ಪರಿಷತ್ತಿನ ಹಣದಲ್ಲಿ ಒಂದು ಗುಟುಕು ಕಾಫಿಯನ್ನೂ ಕುಡಿಯದಷ್ಟು ಪ್ರಾಮಾಣಿಕತೆ ಮೆರೆಯುತ್ತಿದ್ದರು. ತಿಂಗಳ ಕೊನೆಯಲ್ಲಿ ಎರಡು ಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿತ್ತು. ಬರುವ ನಿವೃತ್ತಿವೇತನ ಅವರ ಸಂಸಾರ ನಡೆಸಲು ಸಾಲುತ್ತಿರಲಿಲ್ಲ. ಇಷ್ಟೆಲ್ಲ ಕಷ್ಟನಷ್ಟಗಳನ್ನು ಅನುಭವಿಸಿದರೂ ಪರಿಷತ್ತಿನ ಅಧ್ಯಕ್ಷರಾಗಿ ಅವರ ನಿಷ್ಠೆ, ಪ್ರಮಾಣಿಕತೆ, ಪಾರದರ್ಶಕ ಲೆಕ್ಕಪತ್ರಗಳು, ಅವರನ್ನು ಉನ್ನತ ಮಟ್ಟಕ್ಕೇರಿಸಿದ್ದವು. ಈ ಆದರ್ಶಗಳು ಇಂದಿನ ಪದಾಧಿಕಾರಿಗಳಿಗೆ ಆದರ್ಶವಾಗಬೇಕಿದೆ. ಒಮ್ಮೆ ಒಬ್ಬರು ಪರಿಷತ್ತಿನಲ್ಲಿ ಅವ್ಯವಹಾರ ನಡೆಸುವ ವಿಷಯ ತಿಳಿದಾಗ ಅವರನ್ನು ದೂರವಿಟ್ಟರು. ಆಗಲೂ ಅವರು ಹೇಳಿದ್ದಿಷ್ಟೆ "ನೋಡಿ ಹೀಗಾಗಬಾರದಿತ್ತು. ನನ್ನ ಕರ್ಮ. ಇಂತಹವರನ್ನು ದೂರವಿಡಬೇಕಾಯಿತು."

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com