ಹಣವೆಂಬ ಜೀವಸತ್ವ ಕಡಿಮೆಯಾದಾಗ ತೆಗೆದುಕೊಳ್ಳುವ ವಿಟಮಿನ್
ಪ್ರಾಣಿಗಳೆಲ್ಲರ ಪ್ರಾಣಧಾರಣಕ್ಕೆ ಪೂರ್ವಜನ್ಮದ ಋಣವೇ ಕಾರಣ
ಋಣಾನುಬಂಧಕ್ಕೆ ಅನುಸಾರವಾಗಿಯೇ ಪಶು ಪತ್ನಿ ಸುತ ಆಲಯ ಮತ್ತು ಇವೆಲ್ಲವುಗಳ ಲಯ
ಕಡೆಗೆ ಕೊಡುವೆನೆಂದು ಹೇಳಿ ಕೊಂಡುಕೊಂಡ ಕಡ
ತನ್ನ ಬಳಿ ಇರುವುದು ಸಾಲದಿದ್ದಾಗ ಮೊರೆ ಹೋಗುವ ಸಾಲ
ಹುಟ್ಟಿದವರೆಲ್ಲರೂ ಋಣಿಗಳಾಗಿಯೇ ಹುಟ್ಟುತ್ತಾರೆ ಆದರೆ ಕೆಲವರು ಅದನ್ನು ಕೊನೆಯವರೆಗೂ ತೀರಿಸುವ ಮನಸ್ಸೇ ಮಾಡುವುದಿಲ್ಲ
ಋಣ ವಿಮೋಚನೆಯಿಂದಲೇ ಮುಕ್ತಿಯ ಪ್ರಾಪ್ತಿ
ಕರುಣದಿಂದ ಕೊಟ್ಟದ್ದನ್ನು ತೆಗೆದುಕೊಂಡಾಗ ಋಣ ಹುಟ್ಟುತ್ತದೆ
ಯೋಚಿಸದೇ ಯಾಚಿಸುವವಗೆ ಮೈತುಂಬಾ ಋಣವೇ ಮೆತ್ತಿಕೊಳ್ಳುವುದು
ನಾವು ತೀರಿದರೂ ಋಣ ತೀರುವುದಿಲ್ಲ. ಆದರೆ ಋಣ ತೀರಿದರೆ ನಾವು ತೀರುತ್ತೇವೆ
ಹಣಕ್ಕೂ ಋಣಕ್ಕೂ ವಿರುದ್ಧಮುಖೀ ಸಂಬಂಧ
ಕೂತು ಉಣ್ಣುವವಗೆ ಕುಡಿಕೆ ತುಂಬಾ ಋಣ
ರಣರಂಗದಲ್ಲಿ ಕಾದು ಗೆಲ್ಲಬಹುದು. ಋಣರಂಗದಲ್ಲಿ ಗೆಲ್ಲಲಾಗದು
ನಿನಗೆ ಯಾವತ್ತೂ ಋಣಿಯಾಗಿರುತ್ತೇನೆ ಎಂಬ ಮಾತಿನ ಅರ್ಥ ನಾನು ನಿನ್ನ ಸಾಲವನ್ನು ತೀರಿಸುವುದೇ ಇಲ್ಲ ಎಂದು
ಋಣವೆಂಬುದು ಹಂಗು. ದೊಡ್ಡವರ ಹಂಗಿಗೆ ಹ್ಯಾಂಗ್ ಆದರೆ ಜೀವದ ಹಂಗನ್ನೇ ತೊರೆಯಬೇಕಾಗುತ್ತದೆ
ವಿಶ್ವನಾಥ ಸುಂಕಸಾಳ
vishwasunkasal@yahoo.com