ತಿರುವಾಂಕೂರ್ ಸಂಸ್ಥಾನದ ಒಂದು ಹಳ್ಳಿಯಲ್ಲಿ ತೋಡಿ ರಾಘವಯ್ಯರ್ ಎಂಬ ಪ್ರಸಿದ್ಧ ಸಂಗೀತಗಾರರಿದ್ದರು. ರಾಘವಯ್ಯರ್ ಪಾಲಘಾಟ್ ಪರಮೇಶ್ವರ ಭಾಗವತರ ಬಳಿ ಸಂಗೀತಾಭ್ಯಾಸಕ್ಕೆ ನಿಂತರು. ಅಯ್ಯರ್ರವರ ಆಸಕ್ತಿ ಮತ್ತು ಚುರುಕುತನ ನೋಡಿ ಭಾಗವತರು ತಮ್ಮೆಲ್ಲ ವಿದ್ಯೆಯನ್ನು ಧಾರೆ ಎರೆದರು. ಆದರೇನಂತೆ, ಎಲ್ಲಿಯೂ ಅವರಿಗೆ ಕಾರ್ಯಕ್ರಮ ದೊರಕದೆ ಒಂದಾಣೆ ಒಂದೂವರೆ ಆಣೆಗೂ ಸಂಗೀತ ಕಾರ್ಯಕ್ರಮ ನೀಡಲಾರಂಭಿಸಿದರು. ಇದೂ ಜಿಗುಪ್ಸೆಯಾಗಿ ಕೊನೆಗೆ ಕೊಯಮತ್ತೂರಿಗೆ ಹೋಗಿ ನೆಲೆಸಿದ ರಾಘವಯ್ಯರ್ ಅಲ್ಲಿ ತಮ್ಮ ಸಂಗೀತ ವಿದ್ಯೆಯನ್ನು ಮುಂದುವರೆಸಿದರು. ಒಮ್ಮೆ ಕೊಯಮತ್ತೂರಿಗೆ ರಾಘವಯ್ಯರ್ ಅವರ ಗುರುಗಳಾದ ಪರಮೇಶ್ವರ ಭಾಗವತರು ಸಂಗೀತ ಕಚೇರಿ ನೀಡಲು ಬಂದಿದ್ದರು. ಭಿಕ್ಷಾಂಡರ್ ಕೋವಿಲ್ ಸುಬ್ಬರಾಯರು ಎಂಬ ಸಂಗೀತ ವಿದ್ವಾಂಸರೂ ಸಹ ಅಲ್ಲಿಗೆ ಬಂದಿದ್ದರು. ಅವರು ಭಾಗವತರಿಗೆ ಸವಾಲೊಂದನ್ನೆಸೆದು ತಾನ, ಪಲ್ಲವಿಯನ್ನು ತಮ್ಮ ಸಮಾನಕ್ಕೆ ಹಾಡಲು ಹೇಳಿದರು. ಅದಕ್ಕೆ ಭಾಗವತರು ಒಪ್ಪಿದರೂ ಸಹ ಅವರ ವೃದ್ಧಾಪ್ಯ ಅವರ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದೆಂದು ಅವರ ಅಭಿಮಾನಿಗಳು ಸಮ್ಮತಿಸಲಿಲ್ಲ. ಅಲ್ಲದೆ ಸುಬ್ಬರಾಯರು ಆ ಕಾಲಕ್ಕೆ ಪ್ರಸಿದ್ಧ ಸಂಗೀತಗಾರರಾಗಿದ್ದು, ಅವರ ಸಮಕ್ಕೆ ಯಾರಿಗೂ ಹಾಡಲಾಗುವುದಿಲ್ಲ ಎನ್ನುವ ಪ್ರತೀತಿ ಇತ್ತು. ಈ ಸುದ್ದಿ ರಾಘವಯ್ಯರ್ ಅವರ ಕಿವಿಗೂ ತಲುಪಿ ಅವರು ತರಾತುರಿಯಿಂದ ಆ ಸ್ಥಳಕ್ಕೆ ಬಂದರು. ಅವರು ಬಂದವರೇ ತಮ್ಮ ಗುರುಗಳಿಗೆ ನಮಸ್ಕರಿಸಿ, ಸುಬ್ಬರಾಯರಿಗೆ, "ಮೊದಲು ಶಿಷ್ಯನನ್ನು ಜಯಿಸಿ ನಂತರ ಗುರುವನ್ನು ಕೆಣಕಬೇಕು" ಎಂದು ತಿಳಿಸಿದರು. ಹಾಗೂ ತಾವು ಅವರ ಸವಾಲಿಗೆ ತಕ್ಕ ಉತ್ತರ ನೀಡುವುದಾಗಿ ಮರು ಸವಾಲೆಸೆದರು. ಇದರಿಂದ ಅವರಿಬ್ಬರ ನಡುವೆ ಸ್ಪರ್ಧೆ ಏರ್ಪಾಡಾಯಿತು. ಸುಬ್ಬರಾಯರು ತಮ್ಮ ಚಾತುರ್ಯವನ್ನೆಲ್ಲ ಉಪಯೋಗಿಸಿದರೂ ಜಯಿಸಲಾರದೆ ಸೋತುಹೋದರು. ಸೋಲನ್ನೊಪ್ಪಿಕೊಂಡ ಸುಬ್ಬರಾಯರು ತಮ್ಮ ಬಿರುದು ಬಾವಲಿಗಳನ್ನೆಲ್ಲಾ ರಾಘವಯ್ಯರ್ ಅವರಿಗೆ ಒಪ್ಪಿಸಿದ್ದಲ್ಲದೆ, ಮತ್ತೆಂದೂ ಕೊಯಮತ್ತೂರಿಗೆ ಕಾಲಿಡುವುದಿಲ್ಲವೆಂದು ಹೊರಟುಹೋದರು. ಭಾಗವತರಂತೂ ತಮ್ಮ ಶಿಷ್ಯನ ಪ್ರತಿಭೆ ಮತ್ತು ಗಳಿಸಿದ ಜಯದಿಂದ ತುಂಬಾ ಸಂತೋಷಗೊಂಡು ಅವರನ್ನು ಮನಸಾರೆ ಹರಸಿದರು. ಮುಂದೆ ಮಹಾರಾಜ ರಾಮವರ್ಮನ ಆಸ್ಥಾನ ಕಲಾವಿದರಾದ ರಾಘವಯ್ಯರ್ ರಾಜನ ಅವಕೃಪೆಗೆ ಪಾತ್ರರಾಗಿ ಹೊರದೂಡಲ್ಪಟ್ಟರು. ಕೆಲವು ದಿನಗಳ ನಂತರ ರಾಜನ ಆಸ್ಥಾನಕ್ಕೆ ಬಂದ ಮಹಾವೈದ್ಯನಾಥ ಭಾಗವತರ್ರವರು ತಮ್ಮ ಸಮಾನಕ್ಕೆ ಹಾಡುವವರು ರಾಜನ ಆಸ್ಥಾನದಲ್ಲಿ ಯಾರಿದ್ದಾರೆ ಎಂದು ಅಹಂಕಾರದ ಮಾತನಾಡಿದಾಗ ಭಾಗವತರ ಸಲಹೆಯಂತೆ ರಾಘವಯ್ಯರ್ ಅವರನ್ನು ಕರೆಸಿ, ಮನ್ನಿಸಿ ಅವರನ್ನು ಮಹಾವೈದ್ಯನಾಥ ಭಾಗವತರ್ರೊಡನೆ ಹಾಡಲು ತಿಳಿಸಲಾಯಿತು. ಮೂರು ದಿನವಾದರೂ ಯಾರೂ ಸೋಲೊಪ್ಪದ ಕಾರಣ ಇಬ್ಬರೂ ವಿದ್ವಾಂಸರಿಗೆ ತಲಾ ಸಾವಿರದೈನೂರು ರುಪಾಯಿಗಳನ್ನು ನೀಡಿ ಗೌರವಿಸಲಾಯಿತು.
-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com