ಇಲ್ಲಿ ನೆರೆದಿರುವ ಎಲ್ಲರೂ ದಂಡ ತೆರಬೇಕು

ನ್ಯೂಯಾರ್ಕ್ ನಗರದ 99ನೇ ಮೇಯರ್ ಆಗಿದ್ದವರು ಹೆನ್ರಿ ಲಾ ಗ್ವಾರ್ಡಿಯಾ. ರೂಸೆವೆಲ್ಟ್‌ನ ಬೆಂಬಲಿಗರಾದ ಗ್ವಾರ್ಡಿಯಾ 1934 ರಿಂದ..
Updated on: 

ನ್ಯೂಯಾರ್ಕ್ ನಗರದ 99ನೇ ಮೇಯರ್ ಆಗಿದ್ದವರು ಹೆನ್ರಿ ಲಾ ಗ್ವಾರ್ಡಿಯಾ. ರೂಸೆವೆಲ್ಟ್‌ನ ಬೆಂಬಲಿಗರಾದ ಗ್ವಾರ್ಡಿಯಾ 1934 ರಿಂದ 1945 ರವರೆಗೆ ನ್ಯೂಯಾರ್ಕ್‌ನ ಮೇಯರ್ ಆಗಿ ಸೇವೆ ಸಲ್ಲಿಸಿದರು. ಸರ್ಕಾರದಿಂದ ಹೆಚ್ಚಿನ ಅನುದಾನ ಪಡೆದು ನ್ಯೂಯಾರ್ಕ್ ನಗರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದರು. ಅವರ ಸೇವೆಯನ್ನು ಗುರುತಿಸಿ ನ್ಯೂಯಾರ್ಕ್ ನಗರದ ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ. ಒಮ್ಮೆ ಅವರು ನ್ಯಾಯಾಧೀಶರ ಕಾರ್ಯ ನಿರ್ವಹಿಸುವಾಗ ಒಂದು ವಿಲಕ್ಷಣ ಮೊಕದ್ದಮೆಯ ವಿಚಾರಣೆಗೆ ಬಂತು. ಒಬ್ಬ ಹಣ್ಣು ಹಣ್ಣು ಮುದುಕಿ ಬೇಕರಿಯಿಂದ ಒಂದು ಪೌಂಡ್ ಬ್ರೆಡ್ ಕದ್ದು ಸಿಕ್ಕಿಬಿದ್ದುದರಿಂದ ಅವಳನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಕಟಕಟೆಯಲ್ಲಿ ನಿಂತ ಆ ಬಡ ಮುದುಕಿ ಹೆದರಿಕೆ ಮತ್ತು ಬಳಲಿಕೆಯಿಂದಾಗಿ ನಡುಗುತ್ತಿದ್ದಳು.
ವಿಚಾರಣೆ ಪ್ರಾರಂಭವಾಯಿತು. ತನ್ನ ವಿಧವೆ ಮಗಳು ಮತ್ತು ಅವಳ ಎರಡು ಪುಟ್ಟ ಮಕ್ಕಳು ತನ್ನೊಡನೆ ಇರುವುದಾಗಿಯೂ, ಮಗು ಅನಾರೋಗ್ಯದಿಂದ ನರಳುತ್ತಿದ್ದು ಮಕ್ಕಳು ಹಸಿವಿನಿಂದ ಕಂಗೆಟ್ಟಿದ್ದುದರಿಂದ ತನಗೇನೂ ತೋಚದೆ ಒಂದು ಪೌಂಡು ಬ್ರೆಡ್ ಕದ್ದಿದ್ದು ನಿಜವೆಂದೂ, ತಾನು ಬಡತನ ಮತ್ತು ಅಸಹಾಯಕತೆಯಿಂದ ಆ ಕೃತ್ಯ ಮಾಡಿದ್ದರಿಂದ ಕ್ಷಮಿಸಬೇಕೆಂದು ಆಕೆ ವಿನಂತಿಸಿದಳು. ಆದರೆ ಬ್ರೆಡ್ ಅಂಗಡಿ ಮಾಲೀಕ ಆಕೆಗೆ ಕ್ಷಮಾದಾನ ನೀಡಿದಲ್ಲಿ ಒಂದು ಕೆಟ್ಟ ಸಂಪ್ರದಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದಾದ್ದರಿಂದ ಆಕೆಗೆ ಶಿಕ್ಷೆ ವಿಧಿಸಬೇಕೆಂದು ವಾದಿಸಿದ. ಎರಡೂ ಕಡೆಯ ವಾದ ವಿವಾದಗಳನ್ನು ಕೇಳಿದ ಗ್ವಾರ್ಡಿಯಾ ಒಂದು ಮಹತ್ತರವಾದ ತೀರ್ಪು ನೀಡಿದರು. ಅದೆಂದರೆ, ಬ್ರೆಡ್ ಕಳ್ಳತನ ಮಾಡಿದ್ದಕ್ಕಾಗಿ ಹತ್ತು ಡಾಲರ್ ದಂಡವನ್ನು ನೀಡಬೇಕೆಂಬುದು. ತನ್ನ ಬಳಿ ಹತ್ತು ಡಾಲರ್ ಇದ್ದಿದ್ದರೆ ತಾನೇಕೆ ಕಳ್ಳತನ ಮಾಡುತ್ತಿದ್ದೆ, ತಾನು ಕದಿಯಲು ಕಾರಣವಾದ ಪರಿಸ್ಥಿತಿಗೆ ಸಮಾಜವೇ ಹೊಣೆ ಎಂದು ಆ ಮುದುಕಿ ಪ್ರತಿಪಾದಿಸಿದಳು. ಆಗ ಗ್ವಾರ್ಡಿಯಾ ತಾನೇ ಹತ್ತು ಡಾಲರ್ ಹಣವನ್ನು ದಂಡವಾಗಿ ನೀಡಿ ಹೀಗೆ ಹೇಳಿದ. " ಮುದುಕಿ ಬಡತನದಿಂದಾಗಿ ಕೇವಲ ಒಂದು ಪೌಂಡ್ ಬ್ರೆಡ್ ಕಳ್ಳತನ ಮಾಡುವ ಸ್ಥಿತಿಗೆ ತಲುಪಿರುವುದು ಇಡೀ ಸಮಾಜ ತಲೆತಗ್ಗಿಸುವ ವಿಷಯವಾಗಿದ್ದು, ನ್ಯಾಯಾಲಯದಲ್ಲಿ ನೆರೆದಿದ್ದ ಎಲ್ಲರ ಜವಾಬ್ದಾರಿಯೂ ಇಲ್ಲಿದೆ" ಎಂದು ಹೇಳಿ ಅಲ್ಲಿ ಸೇರಿದ್ದ ಎಲ್ಲರಿಗೂ ಅರ್ಧ ಡಾಲರ್ ದಂಡವಿಧಿಸಿದರು. ತಾವೂ ಅರ್ಧ ಡಾಲರ್ ಹಣವನ್ನು ದಂಡ ರೂಪವಾಗಿ ನೀಡಿದ್ದಲ್ಲದೆ, ಅಲ್ಲಿದ್ದ ಬ್ರೆಡ್ ಅಂಗಡಿ ಮಾಲೀಕನೂ ಸೇರಿದಂತೆ ಎಲ್ಲರಿಂದಲೂ ದಂಡ ವಸೂಲಿ ಮಾಡಿ ಸಂಗ್ರಹವಾದ ಸುಮಾರು ಐವತ್ತು ಡಾಲರಿನಷ್ಟು ಹಣವನ್ನು ಆ ಮುದುಕಿಗೆ ಪರಿಹಾರವಾಗಿ ಕೊಟ್ಟು ಕಳುಹಿಸಲಾಯಿತು. ದುಃಖದಿಂದ ಬಂದ ಆ ಮುದುಕಿ ತೆರಳುವಾಗ ಸಂತೋಷದಿಂದ ತೆರಳಿದ್ದು ಎಲ್ಲರಿಗೂ ನೆಮ್ಮದಿ ತಂದಿತ್ತು.


 -ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com