ಇದು ನಿಜವಾದ ಸಮಾಜಸೇವೆ

Updated on: 

ಅಮೆರಿಕದ ನೀಗ್ರೋ ಜನಾಂಗಕ್ಕೆ ಸೇರಿದ್ದ ಜಾರ್ಜ್ ವಾಷಿಂಗ್ಟನ್ ಕಾರ್ವರ್, ರಸಾಯನಶಾಸ್ತ್ರದ ದೊಡ್ಡ ವಿಜ್ಞಾನಿ. ದಕ್ಷಿಣ ಅಮೆರಿಕದ ರಾಜ್ಯಗಳ ಆರ್ಥಿಕ ಸುಧಾರಣೆಗಾಗಿ ಹೋರಾಡಿದ ಆತನ ತಂದೆತಾಯಿಗಳು ಗುಲಾಮರಾಗಿದ್ದರು. ಸ್ವತಃ ಗುಲಾಮ ಪದ್ಧತಿಯ ಅನಿಷ್ಟಗಳನ್ನು ಅನುಭವಿಸಿದ್ದ ಕಾರ್ವರ್, ಮಣ್ಣಿನ ಸುಧಾರಣೆ, ಬೆಳೆಗಳ ವೈವಿಧ್ಯ ಇವುಗಳ ಬಗ್ಗೆ ಅಪಾರ ಆಸಕ್ತಿ ಹೊಂದಿ ಕೃಷಿಕ್ಷೇತ್ರದಲ್ಲಿ ತುಂಬ ಕೆಲಸ ಮಾಡಿದ. ಅವನ ನಿಸ್ವಾರ್ಥ ಸೇವೆಯನ್ನು ಗುರುತಿಸಿದ ಜನ ಅವನ ಜನ್ಮ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಎಂದು ಸರ್ಕಾರ ಘೋಷಿಸುವಂತೆ ಮಾಡಿದ್ದಾರೆ. ಗುಲಾಮನಾಗಿ ಜನಿಸಿ, ಅಪ್ರತಿಮ ವಿಜ್ಞಾನಿಯಾಗಿ ಬೆಳೆದ ಕಾರ್ವರ್ ಇತರರಿಗೆ ಮಾರ್ಗದರ್ಶಿಯಾಗಿದ್ದಾನೆ. ಮಹಾತ್ಮಗಾಂಧಿಯವರಿಗೆ ಆಹಾರ ಕ್ರಮವೊಂದನ್ನು ರೂಪಿಸಿಕೊಟ್ಟಿದ್ದು ಕಾರ್ವರ್‌ನ ಹೆಗ್ಗಳಿಕೆಯಲ್ಲೊಂದು. ಲಂಡನ್ನಿನ ರಾಯಲ್ ಸೊಸೈಟಿಯ ಫೆಲೋಷಿಪ್, ಸ್ಪಿಂಗಾರ್ಕ ಪದಕ ವಿಜೇತನಾಗಿದ್ದ ಕಾರ್ವರ್ ಅನೇಕ ಸಂಘ ಸಂಸ್ಥೆಯವರಿಂದ ನೀಡಲ್ಪಟ್ಟ ಹಲವಾರು ಪ್ರಶಸ್ತಿಗಳಿಗೆ ಭಾಜನನಾಗಿದ್ದ. ತನ್ನ ಸೇವೆಗೆ ಯಾವ ಪ್ರತಿಫಲವನ್ನೂ ಪಡೆಯದೆ ಬೇರೆಯವರ ಸಂತಸದಲ್ಲಿ ತನ್ನ ಸಂತಸವನ್ನು ಕಂಡುಕೊಂಡ ಉದಾರಿ. ಎಷ್ಟೋವೇಳೆ ತನ್ನ ವೇತನದ ಚೆಕ್ಕನ್ನು ಪಡೆಯುತ್ತಿರಲೇ ಇಲ್ಲ. ಪ್ರಸಿದ್ಧ ವಿಜ್ಞಾನಿ ಥಾಮಸ್ ಎ.ಎಡಿಸನ್ ಕಾರ್ವರ್‌ನಿಗೆ ಅತಿ ಹೆಚ್ಚು ವೇತನ ತರುವ ಕೆಲಸಕ್ಕಾಗಿ ಆಹ್ವಾನಿಸಿದಾಗಲೂ ತಾನಿದ್ದಲ್ಲಿಯೇ ನೆಮ್ಮದಿಯಿಂದಿರುವುದಾಗಿಯೂ, ಜನರಿಗೆ ತನ್ನ ಸೇವೆಯ ಅವಶ್ಯಕತೆಯಿದೆಯೆಂದೂ ಹೇಳಿ ಕಳುಹಿಸಿದ. ಒಮ್ಮೆ ಫ್ಲೋರಿಡಾದ ಶ್ರೀಮಂತ ರೈತನೊಬ್ಬನ ಕಡಲೆಕಾಯಿ ಹೊಲಕ್ಕೆ ಯಾವುದೋ ರೋಗಬಂದು ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಾಗ ಆ ಗಿಡಗಳನ್ನು ಪರೀಕ್ಷಿಸಿ, ರೋಗನಿವಾರಣೆಗೆ ಕೈಗೊಳ್ಳಬೇಕಾದ ಕ್ರಮಗಳನ್ನು ತಿಳಿಸಿದ. ಇದರಿಂದ ಬಂದ ಆಪತ್ತು ನಿವಾರಣೆಯಾಗಿ ಆ ರೈತ ಕಾರ್ವರ್‌ನಿಗೆ ಒಂದು ನೂರು ಡಾಲರಿನ ಚೆಕ್ ಕಳುಹಿಸಿದ. ಆದರೆ ಮರುಟಪಾಲಿಗೇ ಕಾರ್ವರ್ ಆ ಚೆಕ್ಕನ್ನು ವಾಪಸ್ಸು ಕಳಿಸಿ, ಕಡಲೇ ಕಾಯಿ ಬೆಳೆಸುವುದಕ್ಕೆ ದೇವರು ಯಾವ ಸಂಭಾವನೆಯನ್ನೂ ಪಡೆಯುವುದಿಲ್ಲ ಎಂದು ತಿಳಿಸಿದ. ಕಡಲೇ ಕಾಯಿ ಎಣ್ಣೆ ಉಪಯೋಗಿಸಿ ಪಾರ್ಶ್ವವಾಯವಿನಿಂದ ಪೀಡಿತರಾದ ಹಲವರನ್ನು ಗುಣಪಡಿಸಿದ. ಆ ಚಿಕಿತ್ಸಾ ಪದ್ಧತಿ ಅದೆಷ್ಟು ಪ್ರಸಿದ್ಧಿ ಪಡೆಯಿತೆಂದರೆ, 1930 ರಲ್ಲಿ ಕಾರ್ವರ್ ಪೆನಾಲ್ ಕಂಪನಿ ಎಂಬ ಕಂಪನಿ ಪ್ರಾರಂಭವಾಗಿ ಅನೇಕ ಔಷಧಿಗಳನ್ನು ತಯಾರುಮಾಡಲು ಉಪಕ್ರಮಿಸಿತು. ಆದರೆ ಈ ಉದ್ಯಮದಿಂದ ಕಾರ್ವರ್ ದೂರವೇ ಉಳಿದ. ತನ್ನ ಔಷಧಕ್ಕೆ ಯಾವ ಸ್ವಾಮ್ಯವನ್ನೂ ಪಡೆಯಲಿಲ್ಲ. ಹಣವನ್ನೂ, ಪ್ರಸಿದ್ಧಿಯನ್ನು ಎಂದೂ ಬಯಸದ ಕಾರ್ವರ್ ಜೀವನದ ಸಾಮಾನ್ಯ ಕೆಲಸಗಳನ್ನೇ ನೀವು ಅಸಾಧಾರಣ ರೀತಿಯಲ್ಲಿ ಮಾಡತೊಡಗಿದಾಗ ನೀವು ಜಗತ್ತಿನ ಗಮನ ಸೆಳೆಯಲು ಶಕ್ತರಾಗುತ್ತೀರಿ ಎಂದು ಹೇಳುತ್ತಿದ್ದ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com