ಡಾ.ನಾಗಲೋಟಿಮಠ ಅವರ ಹೆಸರು ವೈದ್ಯಕೀಯ ಲೋಕದಲ್ಲಿ ಪ್ರಸಿದ್ಧಿ ಪಡೆದಿದೆ. ಅವರೊಬ್ಬ ಹೃದಯವಂತ ವೈದ್ಯರಷ್ಟೇ ಅಲ್ಲ, ಪ್ರತಿಭೆಯ ಖನಿಯೇ ಆಗಿದ್ದರು. ಬಡತನದ ಬೇಗೆಯಲ್ಲಿ ಬೆಂದುಬಂದ ಅಪರಂಜಿಯಾಗಿದ್ದರು. 1959ರಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಮೊದಲ ರ್ಯಾಂಕ್ಗಳಿಸಿ ಚಿನ್ನದ ಪದಕ ಗಳಿಸಿದರು. ನಂತರ ಚಿನ್ನದ ಪದಕದೊಂದಿಗೆ ಎಂ.ಬಿ.ಬಿ.ಎಸ್. ಪದವಿಯನ್ನೂ ಪಡೆದರು. ಅಲ್ಲದೆ ವ್ಯೆದ್ಯಕೀಯ ಶಾಸ್ತ್ರದ ಅತ್ಯುನ್ನತ ಪದವಿಗಳನ್ನು ಗಳಿಸಿ ಯಶಸ್ವಿ ವ್ಯೆದ್ಯರಾದರು. ಇಷ್ಟೆಲ್ಲ ಪ್ರತಿಭಾವಂತರಾದರೂ ಅತಿ ಸರಳಜೀವನ ನಡೆಸುತ್ತಿದ್ದರು. ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ 42ಕ್ಕೂ ಹೆಚ್ಚು ಕೃತಿಗಳು ಇವರ ಲೇಖನಿಯಿಂದ ಹೊರಬಂದಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪುರಸ್ಕಾರ ಇವರಿಗೆ ಸಿಕ್ಕಿವೆ. ದೇಶದ ಅನೇಕ ವಿಶ್ವವಿದ್ಯಾನಿಲಯಗಳ ಗೌರವ ಪ್ರಾಧ್ಯಾಪಕರಾಗಿಯೂ ಸಹ ಸೇವೆ ಸಲ್ಲಿಸಿದ್ದರು. ಬೆಳಗಾವಿಯ ಜೆ.ಎನ್.ಎಂ.ಸಿಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ, ಕಿಮ್ಸ್ನಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಅವರು ಬೆಳಗಾವಿಯಲ್ಲಿ ಪ್ರಾರಂಭಿಸಿದ ವಿಜ್ಞಾನ ಕೇಂದ್ರಕ್ಕೆ ಸಾಮಾನ್ಯ ಜನರಿಂದ ಹರಿದು ಬಂದ ಪುಡಿಕಾಸನ್ನೇ ಬಳಸಿದ್ದರು. ಅವರು ಯಾವಾಗಲೂ ಹೇಳುತ್ತಿದ್ದುದು ಹೀಗೆ, "ಈ ಸಮಾಜಕ್ಕೆ ಏನರ ಉಪಯೋಗ ಆಗ್ತಿದ್ರ ಅದು ಬಡವರಿಂದ ಮಾತ್ರ".
ಕಾಯಕವೇ ಕೈಲಾಸ ಎಂದು ನಂಬಿ ಬದುಕಿದ ಸದಾಶಿವಯ್ಯ ನಾಗಲೋಟಿಮಠರವರ ಮೇಲೆ ಪ್ರಭಾವಬೀರಿದ ವ್ಯಕ್ತಿಗಳೆಂದರೆ ಅವರ ತಂದೆ ತಾಯಿಯರು. ಕೂಲಿನಾಲಿ ಮಾಡಿ ಮಗನ ಭವಿಷ್ಯಕ್ಕೆ ಜೀವತೇಯ್ದ ಅವರ ಪರಿಶ್ರಮ ನಾಗಲೋಟಿಮಠ ಅವರ ಮೇಲೆ ಅಗಾಧ ಪ್ರಭಾವ ಬೀರಿತ್ತು. ಬಡತನದಿಂದ ಬೇಸತ್ತಿದ್ದ ಅವರಿಗೆ ಮಗನ ವಿದ್ಯಾಭ್ಯಾಸಕ್ಕಾಗಿ ತಮ್ಮ ಹಳ್ಳಿಯಿಂದ ಗದಗಿಗೆ ಸಂಸಾರ ಸಮೇತರಾಗಿ ಸುಮಾರು 80 ಕಿ.ಮೀ.ನಡೆದೇ ಬಂದರು. ಅವರು ಪ್ರೌಢಶಾಲೆಯಲ್ಲಿ ಕಲಿಯುವಾಗ ಶಿಕ್ಷಕರಾಗಿದ್ದ ಕುಲಕರ್ಣಿಯವರಿಗೆ ತಮ್ಮ ಶಿಷ್ಯನ ಮೇಲೆ ಅಪಾರ ಪ್ರೀತಿ. ತಮ್ಮ ಬಿಡುವಿನ ವೇಳೆಯಲ್ಲಿ ಮನೆಪಾಠ ಮಾಡಿ ತಿದ್ದಿ ತೀಡಿದರು. ಮೆಟ್ರಿಕ್ನಲ್ಲಿ ಚಿನ್ನದ ಪದಕ ಗಳಿಸಿದಾಗ ಗುರುಗಳ ಆಶೀರ್ವಾದ ಪಡೆಯಲೋಸುಗ ಬಾಲಕ ಸದೂ ತನ್ನ ತಂದೆಯ ಜೊತೆ ಬಂದು ತಮ್ಮ ಮನೆಯಲ್ಲಿದ್ದ ಏಕೈಕ ಸಂಪತ್ತಾದ ಎರಡು ತೊಲೆ ಚಿನ್ನವನ್ನು ಗುರುಗಳ ಪಾದದ ಬಳಿ ಇಟ್ಟು ಭಕ್ತಿಯಿಂದ ನಮಸ್ಕರಿಸಿ ಗುರುಕಾಣಿಕೆ ಸ್ವೀಕರಿಸಲು ಕೋರಿದ. ಕುಲಕರ್ಣಿ ಮಾಸ್ತರರು ಆ ಚಿನ್ನವನ್ನು ದೂರತಳ್ಳಿ ಬಾಲಕನನ್ನ ಅಪ್ಪಿಕೊಂಡು ನೀನೇ ಒಂದು ಚಿನ್ನದ ಗಟ್ಟಿ, ನಿನ್ನ ಮುಂದೆ ಇದಕ್ಕೆಲ್ಲಿದೆ ಕಿಮ್ಮತ್ತು ಎಂದುಬಿಟ್ಟರು. ಇದನ್ನು ನೆನೆದಾಗಲೆಲ್ಲ ಡಾ.ನಾಗಲೋಟಿಮಠರ ಕಣ್ಣಾಲಿಗಳು ತುಂಬಿ ಬರುತ್ತಿದ್ದವು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com