ಒಂದು ವಿಶ್ವವಿದ್ಯಾಲಯದ ಕಥೆ

Updated on: 

ಡಾ. ರಸೆಲ್ ಹರ್ಮನ್ ಕಾನ್ವೆಲ್ ಅಮೆರಿಕದ ಫಿಲಿಡೆಲ್ಫಿಯಾದ ಒಬ್ಬ ಧರ್ಮಪ್ರಚಾರಕರಾಗಿದ್ದರು. ಯೇಲ್ ವಿಶ್ವವಿದ್ಯಾಲಯದ ಪದವೀಧರರಾದ ಅವರು ಫಿಲಿಡೆಲ್ಫಿಯಾದ ಚರ್ಚ್ ಒಂದರಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಭಾನುವಾರದ ಶಾಲೆಯೊಂದನ್ನು ಬಡ ಮಕ್ಕಳಿಗಾಗಿ ನಡೆಸುತ್ತಿದ್ದರು. ಅವರ ಕೃತಿ ' ಎಕರ್ಸ್ ಆಫ್ ಡೈಮಂಡ್ಸ್' ತುಂಬ ಪ್ರಸಿದ್ಧವಾದ ಕೃತಿ. ಒಮ್ಮೆ ಅವರ ಭಾನುವಾರದ ಶಾಲೆಯ ಹೊರಗೆ ಒಬ್ಬ ಬಡ ಬಾಲಕಿ, ತೇಪೆಹಾಕಿದ ಉಡುಪನ್ನು ಧರಿಸಿ ನಿಂತಿದ್ದಳು. ಅವಳು ದುಃಖಿತಳಾಗಿ ನಿಂತಿದ್ದನ್ನು ನೋಡಿದ ಕಾನ್ವೆಲ್ ವಿಚಾರಿಸಿದಾಗ ತಾನೂ ಭಾನುವಾರದ ಶಾಲೆಗೆ ಬರಲು ಇಷ್ಟವಿರುವುದಾಗಿಯೂ, ಆದರೆ ಒಳಗೆ ಜಾಗ ಭರ್ತಿಯಾಗಿರುವುದರಿಂದ ಪ್ರವೇಶಿಲಾಗುತ್ತಿಲ್ಲವೆಂದು ಹೇಳಿದಳು. ಆಗ ಕಾನ್ವೆಲ್ ಅವಳನ್ನು ಸಮಾಧಾನಪಡಿಸಿ, ಒಳಗೆ ಕರೆದೊಯ್ದರು. ಈ ಸಂಗತಿ ನಡೆದು ಒಂದೆರಡು ವರ್ಷಗಳ ನಂತರ ಆ ಬಾಲಕಿ ಡಿಫ್ತೀರಿಯಾದಿಂದ ಮರಣಿಸಿದಳು. ಅವಳ ಅಂತ್ಯಕ್ರಿಯೆ ಕಾನ್ವೆಲ್ಲರ ನೇತೃತ್ವದಲ್ಲಿ ನೆರವೇರಿತು. ಎಲ್ಲ ಕಾರ್ಯಗಳೂ ಮುಗಿದ ಮೇಲೆ ಆ ಬಾಲಕಿಯ ತಾಯಿ ಒಳಗಿನಿಂದ ಒಂದು ಪುಟ್ಟ ಚೀಲವನ್ನು ತೆಗೆದುಕೊಂಡು ಬಂದು, ಅದನ್ನು ತನ್ನ ಮಗಳ ಅಂತಿಮ ಇಚ್ಛೆಯಂತೆ ಕಾನ್ವೆಲ್ಲರಿಗೆ ನೀಡಿದಳು. ಆಶ್ಚರ್ಯಚಿಕಿತರಾದ ಕಾನ್ವೆಲ್ಲರು ಅದನ್ನು ತೆರೆದು ನೋಡಿದಾಗ ಅದರಲ್ಲಿ 57 ಸೆಂಟ್ ನಾಣ್ಯಗಳು ಮತ್ತು ಒಂದು ಚೀಟಿ ಇತ್ತು. ಚೀಟಿಯನ್ನು ಓದುತ್ತಿದ್ದ ಹಾಗೆಯೇ ಕಾನ್ವೆಲ್ಲರ ಕಣ್ಣಿನಿಂದ ನೀರು ಧಾರಾಕಾರವಾಗಿ ಸುರಿಯಿತು. ಅದರಲ್ಲಿ ಹೆಚ್ಚು ಮಕ್ಕಳು ಕುಳಿತುಕೊಳ್ಳಬಹುದಾದ ಸಭಾಂಗಣದ ನಿರ್ಮಾಣಕ್ಕೆ ತನ್ನ ಕಾಣಿಕೆಯಾಗಿ ಆ ಹಣವನ್ನು ಸ್ವೀಕರಿಸಬೇಕೆಂದು ವಿನಂತಿಸಿದ್ದಳು. ಆ ಪುಟ್ಟ ಹೃದಯದಲ್ಲಿದ್ದ ಆಶಯ ಮತ್ತು ಅದಕ್ಕಾಗಿ ಹೊಟ್ಟೆ ಬಟ್ಟೆ ಕಟ್ಟಿ ಕೂಡಿಟ್ಟಿದ್ದ ಹಣ ಅಲ್ಪವಾದರೂ ಅದರ ಹಿಂದಿನ ಆಶಯ ಹಿರಿದಾಗಿತ್ತು. ವಿಷಯ ತಿಳಿದ ಎಲ್ಲರೂ ಆ ಬಾಲಕಿಯ ಉದಾತ್ತ ಧ್ಯೇಯವನ್ನು ನೆನೆದು ಕಣ್ಣೀರಿಟ್ಟರು. ಆ ಬಾಲಕಿಯ ದೇಣಿಗೆಯನ್ನು ಸಭಾಂಗಣ ನಿರ್ಮಿಸಲು ಉಪಯೋಗಿಸುವುದಾಗಿ ಪ್ರಾರ್ಥನಾ ಸಭೆಯಲ್ಲಿ ಘೋಷಿಸಿದಾಗ ಅಲ್ಲಿ ಸೇರಿದ್ದ ಅನೇಕರು ತಮ್ಮ ದೇಣಿಗೆಯನ್ನು ಯಥಾಶಕ್ತಿ ನೀಡಿ ಪ್ರೋತ್ಸಾಹಿಸಿದರು. ಆ ಬಾಲಕಿಯ ಸಹಾಯ ಮತ್ತು ಆಶಯವನ್ನು ಪತ್ರಿಕೆಯೊಂದು ಪ್ರಕಟಿಸಿದಾಗ ಒಬ್ಬ ಶ್ರೀಮಂತ, ಸಭಾಂಗಣಕ್ಕಾಗಿ ತನ್ನ ವಿಶಾಲವಾದ ಜಾಗವನ್ನು ಮಾರಲು ಆಸಕ್ತಿ ತೋರಿಸಿದ. ಆದರೆ ಅವನು ಕೇಳುವಷ್ಟು ಹಣಅವರಲ್ಲಿ ಇದ್ದರೆ ತಾನೆ? ಆದರೆ ಆ ಶ್ರೀಮಂತ ಬಾಲಕಿಯ ಐವತ್ತೇಳು ಸೆಂಟ್ಗಳಿಗೆ ತನ್ನ ಭೂಮಿಯನ್ನು ಮಾರಲು ಸಿದ್ಧವಿರುವುದಾಗಿ ಘೋಷಿಸಿದಾಗ ಅನೇಕರು ಉತ್ತೇಜನಗೊಂಡು ದೇಣಿಗೆಯ ಸುರಿಮಳೆಯನ್ನೇ ಸುರಿಸಿದರು. ಇದರಿಂದ ಅಲ್ಲಿ ಸುಮಾರು ಮೂರು ಸಾವಿರದಷ್ಟು ಜನರು ಕುಳಿತುಕೊಳ್ಳಬಹುದಾದ ಒಂದು ಕಟ್ಟಡವನ್ನು ನಿರ್ಮಿಸಲಾಯಿತು. ಇಂತಹ ಭವ್ಯ ಕಟ್ಟಡಕ್ಕೆ ಮೊದಲ ದೇಣಿಗೆ ನೀಡಿ ನಿರ್ಮಾಣಕ್ಕೆ ಚಾಲನೆ ನೀಡಿದ ಆ ಬಾಲಕಿಯ ಭಾವಚಿತ್ರವನ್ನಿಂದು ಅಲ್ಲಿ ಕಾಣಬಹುದಾಗಿದೆ. ಮುಂದೆ ಅದೇ ಪ್ರಸಿದ್ಧ ಟೆಂಪಲ್ ವಿಶ್ವವಿದ್ಯಾಲಯವಾಗಿ ರೂಪುಗೊಂಡು ಹೆಸರು ಗಳಿಸಿದೆ. ಈ ಘಟನೆ ನಡೆದದ್ದು 1884ರಲ್ಲಿ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com