ಗಣಿಗಾರಿಕೆ ಸ್ಥಿತಿಗತಿ

ರಾಜ್ಯದಲ್ಲಿ ಗಣಿಗಾರಿಕೆಯ ಪ್ರಸ್ತಾಪ ಎಂದ ಕೂಡಲೇ ಮನಸ್ಸಿನಲ್ಲಿ ಮೂಡುವ ಚಿತ್ರ ಅಕ್ರಮ ಗಣಿಗಾರಿಕೆ, ಲೂಟಿಯ...
Updated on: 

ರಾಜ್ಯದಲ್ಲಿ ಗಣಿಗಾರಿಕೆಯ ಪ್ರಸ್ತಾಪ ಎಂದ ಕೂಡಲೇ ಮನಸ್ಸಿನಲ್ಲಿ ಮೂಡುವ ಚಿತ್ರ ಅಕ್ರಮ ಗಣಿಗಾರಿಕೆ, ಲೂಟಿಯ ವಿಚಾರ. ಆ ವಿಚಾರದ ಪ್ರಸ್ತಾಪವಾದಾಗ ಅನೇಕರ ಮನಸ್ಸಿನಲ್ಲಿ ಆಕ್ರೋಶ ಮೂಡುವುದೂ ಸಹಜ. ಆದರೆ ಮಂಗಳವಾರ ವಿಧಾನ ಮಂಡಲದ ಉಭಯ ಸದನಗಳಲ್ಲೂ ಗಣಿಗಾರಿಕೆಯ ಪ್ರಸ್ತಾಪವಾದರೂ, ಭ್ರಷ್ಟಾಚಾರದ ವಿಚಾರ ದೊಡ್ಡ ರೀತಿಯಲ್ಲಿ ಪ್ರಸ್ತಾಪವಾಗಲಿಲ್ಲ. ಅಗತ್ಯ ಬಿದ್ದರೆ ಆ ವಿಷಯಕ್ಕೇ, ಅಂದರೆ ಭ್ರಷ್ಟಾಚಾರದ ಆರೋಪಗಳು, ತನಿಖೆ ಹಾಗೂ ಇತರ ವಿಚಾರಗಳ ಚರ್ಚೆಗೆ ಒಂದು ವಿಶೇಷ ಅವಕಾಶ ಮಾಡಿಕೊಡಲು ವಿಧಾನ ಪರಿಷತ್ತಿನಲ್ಲಿ ಸರ್ಕಾರ ಒಪ್ಪಿದೆ.
ಉಭಯ ಸದನಗಳಲ್ಲೂ ಮಂಗಳವಾರ ಪ್ರಸ್ತಾಪವಾಗಿದ್ದು, ಈಗ ಮುಚ್ಚಿ ಹೋಗಿರುವ ಗಣಿಗಳಲ್ಲಿ ಇರುವ ಕಬ್ಬಿಣದ ಅದಿರಿನ ಹರಾಜು, ಸುಪ್ರೀಮ್ ಕೋರ್ಟ್ ಒಪ್ಪಿರುವಂತೆ ಹೆಚ್ಚು ಹಾನಿಯಾಗದೇ ಇರುವ ಭ್ರಷ್ಟಾಚಾರದ ಹಾವಳಿ ಇಲ್ಲದ ಗಣಿಗಳಲ್ಲಿ ಅದಿರನ್ನು ತೆಗೆಯಲು ಪರವಾನಗಿ ನೀಡುವ ವಿಚಾರ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿರುವ ಪ್ರಕಾರ ಬಳ್ಳಾರಿ- ತುಮಕೂರು- ಚಿತ್ರದುರ್ಗ ಜಿಲ್ಲೆಗಳಲ್ಲಿ 25 ಗಣಿಗಳಲ್ಲಿ ಅದಿರನ್ನು ತೆಗೆಯುವ ಕೆಲಸ ಆರಂಭವಾಗಬಹುದು.
ಆದರೆ ಐವತ್ತಕ್ಕೂ ಹೆಚ್ಚಿನ ಸಂಖ್ಯೆ ಗಣಿಗಳನ್ನು 'ಸಿ' ವರ್ಗಕ್ಕೆ ಸೇರಿದ್ದು ಎಂದು ಗುರ್ತಿಸಲಾಗುವುದರಿಂದ ಸದ್ಯಕ್ಕೆ ಅಲ್ಲಿ ಅದಿರನ್ನು ತೆಗೆಯುವುದು ಸಾಧ್ಯವಿಲ್ಲ. ಈಗ ಸುಪ್ರೀಮ್ ಕೋರ್ಟ್ ಅನುಮತಿ ನೀಡಿರುವುದಕ್ಕಿಂತ ಹೆಚ್ಚು ಅದಿರು ಬೇಕಾಗಿರುವುದರಿಂದ ಆ ಪ್ರಮಾಣವನ್ನು ಹೆಚ್ಚಿಸಲೇಬೇಕು.
ನಿಜ. ಕರ್ನಾಟಕ- ಗೋವಾಗಳಲ್ಲಿ ನಡೆದ ಬ್ರಹ್ಮಾಂಡ ಸ್ವರೂಪದ ಅಕ್ರಮ- ಅವ್ಯವಹಾರಗಳ ಪರಿಣಾಮ, ಆ ಪ್ರದೇಶದಲ್ಲಿ ಜನಜೀವನದ ಪರಿಸ್ಥಿತಿ ಅಸ್ತವ್ಯಸ್ತವಾಗಿದೆ. ಅಲ್ಲಿನ ಜನರಿಗೆ ಈಗ ಉದ್ಯೋಗವೇ ಇಲ್ಲದಂತಾಗಿದೆ. ಈ ಪರಿಸ್ಥಿತಿಯನ್ನು ಮನಗಂಡೇ ಸುಪ್ರೀಮ್ ಕೋರ್ಟ್ ಗಣಿಗಾರಿಕೆಯ ನಿಷೇಧದ ಆಜ್ಞೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದು. ಆದರೆ ಈಗ ನೀಡಿರುವ ರಿಯಾಯಿತಿ ಸಾಲದು. ಕಬ್ಬಿಣದ ಅದಿರು ಸಿಗದೆ ರಾಜ್ಯದ ಉಕ್ಕಿನ ಕಾರ್ಖಾನೆಗಳು ತತ್ತರಿಸಿವೆ. ಭ್ರಷ್ಟಾಚಾರದ ಆರೋಪಗಳಿಗೆ ಅಬ್ಬರದ ಪ್ರಚಾರ ಸಿಗುವ ಮುನ್ನ ಹಲವಾರು ಕಂಪೆನಿಗಳು, ಅದಿರಿನ ವ್ಯಾಪಾರದ ಸಂಬಂಧದ ಒಪ್ಪಂದಗಳನ್ನು ಮಾಡಿಕೊಂಡಿದ್ದವು. ಅದನ್ನು ಪೂರೈಸುವುದು ಈಗ ಅಸಾಧ್ಯವಾಗಿದೆ.
ನಿಜ. ಈಗ ಕಬ್ಬಿಣದ ಅದಿರಿಗೆ ಹಿಂದೆ ಇದ್ದಷ್ಟು ಬೆಲೆ ಇಲ್ಲ. ವಿದೇಶಗಳಲ್ಲೂ ಬೆಲೆ ಕುಸಿದಿದೆ. ಆದರೂ ಇಂತಹ ದೊಡ್ಡ ಉದ್ಯಮ ಸ್ಥಗಿತವಾದರೆ, ಆರ್ಥಿಕ ವ್ಯವಸ್ಥೆಯ ಮೇಲೆ ಆಗಬಹುದಾದ ಪರಿಣಾಮವೂ ಅಧ್ಯಯನಕ್ಕೆ ಯೋಗ್ಯ. ನಿಜ. ಅಕ್ರಮ ಗಣಿಗಾರಿಕೆಯನ್ನು ಯಾರೂ ಬೆಂಬಲಿಸುವುದಿಲ್ಲ. ಅಕ್ರಮ, ಅವ್ಯವಹಾರಗಳಲ್ಲಿ ಪಾಲುಗೊಂಡವರಿಗೆ ಸೂಕ್ತ ವಿಚಾರಣೆಯ ಅನಂತರ ಶಿಕ್ಷೆಯಾಗಲೇಬೇಕು. ಆದರೆ ರಾಜ್ಯದ ಬೊಕ್ಕಸಕ್ಕೆ ಆ ಉದ್ಯಮದಿಂದ ಬರುತ್ತಿದ್ದ ಆದಾಯವೂ ನಿಂತು ಹೋದರೆ ಆರ್ಥಿಕ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವಾಗುವದು ಸಹಜವೇ.
ಈ ಎಲ್ಲ ವಿಚಾರಗಳನ್ನು ಗಮನಿಸಿ, ರಾಜ್ಯ ಸರ್ಕಾರ ಗಣಿಗಾರಿಕೆಯ ಉದ್ಯಮದ ಪುನಾರಚನೆಗೆ ಒಂದು ವಿಶೇಷವಾದ ವ್ಯವಸ್ಥೆಯನ್ನು ರೂಪಿಸುವ ಚಿಂತನೆ ಮಾಡಬೇಕು. ಸರ್ಕಾರವೇ ಆ ಉದ್ಯಮವನ್ನು ನೇರವಾಗಿ ವಹಿಸಿಕೊಳ್ಳುವುದು ಅಸಾಧ್ಯ. ಮೈಸೂರು ಮಿನರಲ್ಸ್ ಲಿಮಿಟೆಡ್‌ನ ಅನುಭವ ನಿಜಕ್ಕೂ ಕಹಿಯಾದದ್ದು. ಆದರೆ ಕೇಂದ್ರ ಸರ್ಕಾರದ ಸ್ವಾಮ್ಯದ ಗಣಿಗಾರಿಕೆಯ ಉದ್ಯಮಗಳು ಅವ್ಯವಹಾರವನ್ನು ಮೀರಿ ನಿಂತಿರುವ ಉದಾಹರಣೆಯೂ ನಮ್ಮ ಮುಂದಿದೆ.  ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರಡೂ ಸೇರಿ ಖನಿಜ ಶ್ರೀಮಂತ ರಾಜ್ಯದಲ್ಲಿ ಆರೋಗ್ಯಕರ ಗಣಿಗಾರಿಕೆ ಉದ್ಯಮದ ಪುನರುಜ್ಜೀವನಕ್ಕೆ ಮುಂದಾಗಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com