'ತಪ್ಪಾಗ್ತಾ ಇದೆ ತಿದ್ಕೋಳೀ ಸ್ವಾಮಿ' ಎಂಬ ತಲೆಬರಹವಿರುವ ಪತ್ರವನ್ನು ದೊಡ್ಡಬಳ್ಳಾಪುರದಿಂದ ಡಾ.ಕೆ.ಎನ್.ಬಿ. ರಾಜ್ ಕಳುಹಿಸಿದ್ದಾರೆ. 'ಜೂ.13ರ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿನ, 6ನೇ ಪ್ಯಾರಾದಲ್ಲಿ ರವೀಂದ್ರನಾಥ್ರವರು ಪೂರ್ವಾಗ್ರಹ ಎಂಬ ಬಳಕೆಯನ್ನು ಸೂಚಿಸಿರುವುದು ತಪ್ಪು. ಪೂರ್ವಗ್ರಹ ಎಂಬ ಬಳಕೆಯೇ ಸರಿ ಎಂದು ತಮಗೆ ಎಸ್ಎಂಎಸ್ ಕಳುಹಿಸಿದ್ದೆ ಎಂದಿದ್ದಾರೆ. ಸಾಕಷ್ಟು ಓದುಗರು ಎಸ್ಎಂಎಸ್ ಕಳುಹಿಸುತ್ತಾರೆ. ಓದುಗರು ಕಳುಹಿಸಿದ್ದನ್ನೇ ನಾವು ಮೊದಲೇ ಯೋಚನೆ ಮಾಡಿರುವ ಸಾಧ್ಯತೆ ಇದೆ ಎಂದಿದ್ದೀರಿ. ಅಲ್ಲಿಗೆ ನಿಮ್ಮ ಅಭಿಪ್ರಾಯದಲ್ಲಿಯೂ ಗ್ರಹವೇ ಸರಿ ಎಂದಂತಾಯಿತು ಮತ್ತು ದಿಟ್ಟ ನಿಲುವು ಆದಂತಾಯಿತು. ಈ ಗ್ರಹದ ಬಗ್ಗೆ ಕೆಲವು ವರ್ಷಗಳ ಹಿಂದೆಯೇ ಇದೇ ಬಗೆಯ ಚರ್ಚೆಯು ಇದೇ ಅಂಕಣದಲ್ಲಿ ನಡೆದಿತ್ತು. ಆಗಲೂ ಸಹ ಈಗಿನಂತೆ ಇದೇ ನಿಲುವಿಗೆ ಅಂಟಿಕೊಂಡ ಕಾರಣ ಅಂದಿನಿಂದಲೂ ಈ ಗ್ರಹ ಪತ್ರಿಕೆಯಲ್ಲಿ ಪ್ರತ್ಯಕ್ಷವಾಗುತ್ತಿದೆ. ಈಗಿನ ನಿಮ್ಮ ನಿಲುವಿನಿಂದಾಗಿ ಮುಂದೆಯೂ ಸಹ ಈ ಗ್ರಹವು ಪೂರ್ವಗ್ರಹವಾಗಿ ನಿತ್ಯವೂ ಎದುರಾಗುತ್ತದೆ. ಇದು ಸರಿಯಲ್ಲ. ಪೂರ್ವಾಗ್ರಹವೇ, ಸರಿಯಾದ ಪದ. ಪೂರ್ವಗ್ರಹ ಎಂಬುದರ ಅರ್ಥವೇನು? ಯೋಚಿಸಿರಿ. ಇದಕ್ಕನುಗುಣವಾಗಿ ಪಶ್ಚಿಮ ಗ್ರಹ ಎಂಬುದೇನಾದರೂ ಇದೆಯಾ? ಅಥವಾ ನವಗ್ರಹಗಳ ಸಾಲಿನಲ್ಲಿ ಹೊಸ ಗ್ರಹವೇ? ಅಥವಾ ಭೂತ, ಪ್ರೇತ, ಶಾಖಿನಿ, ಡಾಖಿನೀ ಗ್ರಹಗಳಿಗಿಂತಲೂ ದೊಡ್ಡದಾದ ಡಮಾರ್...! ಗ್ರಹವೇ? ಈ ಎಲ್ಲಾ ಪೂರ್ವಾಗ್ರಹಗಳನ್ನು ಓದುವಾಗ ಕುತ್ತಿಗೆಯನ್ನು ಹಿಸುಕಿದಂತಾಗುತ್ತದೆ. ಕಸಿವಿಸಿಯೂ ಆಗುತ್ತದೆ, ಅಪಾರ್ಥವೂ ಆಗುತ್ತದೆ. ಪೂರ್ವಾಗ್ರಹ ಎಂಬುದನ್ನು ಯಾವ ಸಂದರ್ಭಕ್ಕಾಗಿ ಬಳಸಲಾಗುತ್ತದೆ ಎಂದರೆ ಉದಾ- ಆ ವ್ಯಕ್ತಿಯು ಈತನಿಗೇ ಹೀಗೆಯೇ ಮಾಡಬೇಕೆಂದು ಈ ಹಿಂದೆಯೇ ಆಗ್ರಹಪಡಿಸಿದ್ದನು. (ಇಲ್ಲಿ 'ಆ' ಅನ್ನೂ ಹೊರತುಪಡಿಸಿ ಬರೀ ಗ್ರಹ, ಪಡಿಸಿದ್ದನು ಎಂದು ಹೇಳಲಾದೀತೆ. ಅಪಾರ್ಥವಾಗುತ್ತದೆಯಲ್ಲವೇ?) ಆದರೆ, ಈತನು ಇಂದಿಗೂ ಸಹ ಹಾಗೆ ಮಾಡಲಿಲ್ಲ. ಆ ಕಾರಣದಿಂದ ಇಂದು (ಪೂರ್ವ ಹಿಂದಿನ ಆಗ್ರಹ ಒತ್ತಾಯ) ಪೂರ್ವಾಗ್ರಹದ ಭರದಲ್ಲಿ ಈತನ ಕೆನ್ನೆಗೆ ಹೊಡೆದನು. ಈ ಸಂದರ್ಭಕ್ಕೆ ಸದರಿ ಪೂರ್ವಾಗ್ರಹ, ಪದವನ್ನು ಬಳಸಲಾಗುತ್ತಿದೆ. ನನ್ನ ಈ ಬರಹವು ಸಹ ಕೆಲವು ವರ್ಷಗಳಿಂದ ಸಹಿಸಿಕೊಂಡೇ ಓದಿಕೊಳ್ಳುತ್ತಿರುವುದರಿಂದ ನನ್ನ ಪೂರ್ವಾಗ್ರಹದ ಬರಹವೇ ಆಗಿದೆ. ಸೂ: ನೆನಪಿಸಿಕೊಳ್ಳಿ, ಭೋಂ-ಭೋಂ ಬಾಯಿ = ಭೊಂಬಾಯಿ (ವಿ.ಕ.).'
' ಜೂ.8ರ ಪುಟ 5ರಲ್ಲಿ ಗೋಡೆ ಬರಹದಲ್ಲಿ ಕೋಟೇಶ್ವರ ಸೂರ್ಯನಾರಾಯಣರ ಪ್ರತಿಕ್ರಿಯೆಯಲ್ಲಿ ಈ ಕಾನೂನು ಜಾರಿಗೊಳಿಸು ಎಂಬಲ್ಲಿ ಈ ಕಾನೂನು ಜಾರಿಗೊಳಿಸುವ ಅಂತಾಗಬೇಕಿತ್ತು. ಅದರಂತೆ ಸಂಗಪ್ಪ ಗಾಣಿಗೇರ ಇವರ ಗೋಡೆ ಬರಹದಲ್ಲಿ 'ನ ಖಾವೂಂಗಾ, ನ ಖಾನೋ...' ಎಂಬುದು 'ನ ಖಾನೇ' ಅಂತಾಗಬೇಕಾಗಿತ್ತು' ಎಂದಿದ್ದಾರೆ.
ವಿಶ್ವೇಶ್ವರ ಭಟ್