ಉದ್ಯಾನನಗರಿಯ ಕೆಂಪು ತೋಟವೆಂದರೆ ಇನ್ನೂರ ನಲವತ್ತು ಎಕರೆ ವಿಸ್ತೀರ್ಣದ ಬೃಹತ್ ತೋಟ. ಆದರೆ ಅಲ್ಲಿ ನೈಸರ್ಗಿಕವಾಗಿ ಬೆಳೆದ ಬೃಹತ್ ಮರಗಳು, ಅಡ್ಡಾದಿಡ್ಡಿ ಬೆಳೆದ ಹುಲ್ಲುಹಾಸು-ಅಲ್ಲಲ್ಲಿ ಕೃತಕ ವಿನ್ಯಾಸದ ತೋಟದ ಭಾಗಗಳು ಹೊರತುಪಡಿಸಿದರೆ ಇಲಾಖಾ ಕಟ್ಟಡಗಳು ವ್ಯಾಪಾರಿಗಳಿಗಾಗಿ ಷೆಡ್ಗಳು ಹಾಗೂ ಸಾಕಷ್ಟು ತ್ಯಾಜ್ಯಗಳು ಇತ್ಯಾದಿಯಿಂದ ಪ್ರವಾಸಿ ಆಕರ್ಷಣೆಯನ್ನೇ ಕಳೆದುಕೊಂಡಿದೆ. ಯಾವುದೇ ಅಭಿವೃದ್ಧಿ ರಾಷ್ಟ್ರಗಳು ಹೆಚ್ಚು ಖರ್ಚಿಲ್ಲದೇ ಪ್ರವಾಸಿಗರನ್ನು ಆಕರ್ಷಿಸಲು ಸುಂದರ ವಿನ್ಯಾಸದ ಬಟಾನಿಕಲ್ ಗಾರ್ಡನ್ ಸೃಷ್ಟಿಸುವುದು-ಉತ್ತಮ ರಸ್ತೆಗಳೊಂದಿಗೆ ಪ್ರವಾಸಿಗರಿಗೆ ಹಿತಮಿತವಾದ ಸಂತಸವನ್ನು ನೀಡಿ ಆದಾಯವನ್ನು ಪಡೆಯುತ್ತವೆ. ಪ್ರಸ್ತುತ ಕೆಂಪು ತೋಟದ ಗಾಜಿನ ಮನೆಯ ಎದುರು ಭಾಗದ ಅಂದಾಜು ಐವತ್ತು ಎಕರೆ ಪ್ರದೇಶವನ್ನು ಅದ್ಭುತ ವಿನ್ಯಾಸದ ಹೂದೋಟವನ್ನಾಗಿ ಪರಿವರ್ತಿಸುವ ಸಾಧ್ಯತೆಯಿದೆ.
-ಕೋಟೇಶ್ವರ ಸೂರ್ಯನಾರಾಯಣರಾವ್, ಬೆಂಗಳೂರು
ಆನೆ ತಾನು ನಡೆದಿದ್ದೇ ದಾರಿ
ಮುಂಬಯಿ ವಿವಿಧ ಭಾರತಿ ಕೇಂದ್ರ ಕೋರಿಕೆ ಚಿತ್ರಗೀತೆಗಳ ಪ್ರಸಾರದಲ್ಲಿ (ಆಪ್ ಕೀಫ ರಮಾಯಿಷ್-ಮಂಚಾಹೆಗೀತ್) ತನ್ನ ಇಷ್ಟ ಬಂದಂತೆ ನಡೆದುಕೊಳ್ಳುತ್ತಾ ಧೋರಣೆ ಅನುಸರಿಸುತ್ತಿದೆ. ಮೊದಲಿನಿಂದಲೂ ಉತ್ತರ ಭಾರತದ ಶ್ರೋತೃಗಳಿಗೆ ಮನ್ನಣೆ ನೀಡುತ್ತಾ ದಕ್ಷಿಣ ಭಾರತದ ಅದರಲ್ಲೂ ಬೆಂಗಳೂರು ಶ್ರೋತೃಗಳನ್ನು ಕಡೆಗಣಿಸುತ್ತಿರುವ ಮುಂಬಯಿ ವಿವಿಧ ಭಾರತಿ 'ಆನೆ ನಡೆದಿದ್ದೇ ದಾರಿ' ಎಂಬಂತೆ ವರ್ತಿಸುತ್ತಿದೆ. ಇದಕ್ಕೆ ನಿದರ್ಶನ ಹಿಂದಿ ಚಿತ್ರಗೀತೆಗಳ ಪ್ರಸಾರಕ್ಕಾಗಿ ಕೋರಿ ಬರೆಯುವ ನಮ್ಮ ಪತ್ರಗಳನ್ನು (ಆಂಗ್ಲದಲ್ಲಿ ಬರೆದ) ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಈ ಬಗ್ಗೆ ಪತ್ರಾವಳಿ ಎಂಬ ಕಾರ್ಯಕ್ರಮಕ್ಕೆ (ಪತ್ರೋತ್ತರ) ಪತ್ರ ಬರೆದರೂ ಏನೂ ಪ್ರಯೋಜನವಿಲ್ಲ. ಅಲ್ಲಿನ ಅಧಿಕಾರಿಗಳಿಗೆ ಕನ್ನಡ ಭಾಷೆಯ ಗಂಧವೂ ತಿಳಿದಿಲ್ಲ. ಈ ಬಗ್ಗೆ ಗಮನ ಹರಿಸುವವರು ಯಾರೂ ಇಲ್ಲದಿರುವುದು ನಮ್ಮ ದುರಾದೃಷ್ಟವೇ ಸರಿ!
-ಬಿ.ಎಸ್. ರಮೇಶ್, ಬೆಂಗಳೂರು
ದುರ್ಗದಲ್ಲಿಲ್ಲ ಸ್ವಚ್ಛತೆ
ಇತ್ತೀಚೆಗೆ ಚಿತ್ರದುರ್ಗಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ಪ್ರಮುಖ ಪ್ರವಾಸಿ ತಾಣ ಚಿತ್ರದುರ್ಗದ ಕೋಟೆಯನ್ನು ಒಂದು ಸುತ್ತು ಹಾಕಿದೆ. ಇದೊಂದು ಅದ್ಭುತ ಪ್ರವಾಸಿ ತಾಣ. ಆದರೆ ಅನೇಕ ಪ್ರವಾಸಿಗರು ತಿನ್ನಲು ಅವರವರಿಗೆ ಇಷ್ಟವಾದ ತಿಂಡಿ ಪೊಟ್ಟಣಗಳನ್ನು ಹಾಗೂ ಕುಡಿಯಲು ತಂಪು ಪಾನೀಯಗಳನ್ನು ತೆಗೆದುಕೊಂಡು, ಕೋಟೆ ಸುತ್ತುವಾಗ ಎಲ್ಲೆಂದರಲ್ಲಿ ತಿಂಡಿ ತಿಂದು ಖಾಲಿಯಾದ ಪ್ಲಾಸ್ಟಿಕ್ ಪೇಪರ್, ಬಿಸ್ಕೆಟ್ ಕವರ್, ಜ್ಯೂಸ್ ಖಾಲಿ ಬಾಟಲಿಗಳು, ನೀರಿನ ಬಾಟಲಿಗಳನ್ನು ಮಾರ್ಗದ ಕೆಲವು ಕಡೆ ಹಾಗೇ ಎಸೆದು ಹೋಗಿರುವುದನ್ನು ಗಮನಿಸಿದೆ. ಇದೂ ಅಲ್ಲದೆ ಅಕ್ಕ-ತಂಗಿಯರ ಕೊಳದ ಒಳಗೆ ಪ್ರವಾಸಿಗರು ಖಾಲಿ ಪ್ಲಾಸ್ಟಿಕ್ ಬಾಟಲಿಗಳು ಹಾಗೂ ಇತರೆ ತ್ಯಾಜ್ಯಗಳನ್ನು ಹಾಕಿರುವುದನ್ನು ಕಾಣಬಹುದು. ಇದರ ಜೊತೆಗೆ ಅಕ್ಕನ ಕೊಳದ ತುಂಬಾ ನೀರು ಕಾಣದಂತೆ ಹಸಿರು ಬೆಳೆದುಕೊಂಡಿರುವುದನ್ನು ನಾವೆಲ್ಲರೂ ಕಾಣಬಹುದು. ದಯವಿಟ್ಟು ಅತ್ಯುತ್ತಮ ಪ್ರವಾಸಿ ತಾಣವಾದ ಈ ಕೋಟೆಯ ಸ್ವಚ್ಛತೆಯ ಕಡೆ ಸಂಬಂಧಪಟ್ಟ ಇಲಾಖೆಯವರು ಗಮನ ನೀಡಬೇಕು ಹಾಗೂ ಉತ್ತಮವಾದುದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಾಗಬೇಕು. ಪ್ರವಾಸಿ ತಾಣಕ್ಕೆ ಹೋದ ಪ್ರವಾಸಿಗರು ತಾವು ತಿಂದುಂಡು ಮಿಕ್ಕ ತ್ಯಾಜ್ಯವನ್ನು ಪ್ಲಾಸ್ಟಿಕ್ ಕವರ್ನಲ್ಲಿ ಹಾಕಿಕೊಂಡು ಕಸದ ಬುಟ್ಟಿಗಳಿಗೆ ಹಾಕುವುದನ್ನು ರೂಢಿಸಿಕೊಳ್ಳಬೇಕು. ಅಕ್ಕನ ಕೊಳದ ಸ್ವಚ್ಛತೆಯನ್ನು ಕೋಟೆಯ ಸಿಬ್ಬಂದಿಯವರು ಮಾಡಬೇಕು. ಇದರಿಂದ ಹೊರಗಿನಿಂದ ಬಂದ ಪ್ರವಾಸಿಗರು ನಮ್ಮ ಈ ಚಿತ್ರದುರ್ಗದ ಕೋಟೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ಸದಾ ಇರುವಂತೆ ನೋಡಿಕೊಳ್ಳಬೇಕು.
-ಉದಂತ ಶಿವಕುಮಾರ್, ಬೆಂಗಳೂರು
ಕನ್ನಡಪ್ರಭ, ನಂ.1 , ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com