ತಪ್ಪಾಯ್ತು ತಿದ್ಕೋತೀವಿ

ಬಾಗಲಕೋಟೆಯ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಪತ್ರ ಕಳುಹಿಸಿದ್ದಾರೆ. 'ಜೂನ್ 20ರ ಸಂಚಿಕೆಯ ಪುಟ ...
Updated on: 

ಬಾಗಲಕೋಟೆಯ ಇಳಕಲ್ಲದಿಂದ ಶ್ರೀಕಾಂತ ಮುದಗಲ್ಲ ಪತ್ರ ಕಳುಹಿಸಿದ್ದಾರೆ. 'ಜೂನ್ 20ರ ಸಂಚಿಕೆಯ ಪುಟ 6ರಲ್ಲಿ 'ಸಮಕಾಲೀನ' ಅಂಕಣದಲ್ಲಿ 'ಹೆಚ್ಚಿದ ಸಿದ್ದರಾಮಯ್ಯ ಪ್ರತಿಷ್ಠೆ: ಇದು ಶಾಶ್ವತವೇ?' ಎಂಬ ಲೇಖನದ ಕೊನೆಯಲ್ಲಿ ಸಿ.ಎಂ.ಇಬ್ರಾಹಿಂ ಅವರನ್ನು ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ 'ಅಧ್ಯಕ್ಷರನ್ನಾಗಿ' ನೇಮಿಸಲಾಗಿದೆ ಎಂದು ಬರೆಯಲಾಗಿದೆ. ಆದರೆ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಮುಖ್ಯಮಂತ್ರಿಯೇ ಅಧ್ಯಕ್ಷರಾಗಿ ಇರುತ್ತಾರೆ' ಎಂದು ತಿಳಿಸಿದ್ದಾರೆ.
ಉತ್ತರಕನ್ನಡದ ಹೊನ್ನಾವರದಿಂದ ಶಂಕರನಾರಾಯಣ ಭಟ್ ಪತ್ರ ಬರೆದಿದ್ದಾರೆ. 'ಜೂನ್ 20ರ 'ತಪ್ಪಾಯ್ತು ತಿದ್ಕೋತೀವಿ' ಅಂಕಣದಲ್ಲಿ ಮೈಸೂರಿನ ಎಸ್.ರಾಘವೇಂದ್ರ ಅವರು 'ಮಾಲಕಿ' ಶಬ್ದ ಪ್ರಯೋಗದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 'ಮಾಲಕಿ' ಶಬ್ದ ಹೆಚ್ಚಾಗಿ ಭೂಮಿ ಒಡೆತನದ ಸಂದರ್ಭದಲ್ಲಿ ಯಾರೊಬ್ಬರ ಸ್ವಂತ ಜಮೀನು ನಮೂದಿಸುವಾಗ 'ಮಾಲಕಿ ಹಕ್ಕು' ಅಂತ ಬರೆಯಲಾಗುತ್ತದೆ. ಇನ್ನು ಹಿಂದಿಯಲ್ಲಿ ಒಡತಿ ಎಂಬುದನ್ನು 'ಮಾಲಕಿನ್' ಅಂತಾರೆ. ಇಲ್ಲಿ 'ನ್' ಹಾರಿಹೋಗಿರಲು ಸಾಕು. ಕೆಲವೊಮ್ಮೆ ಹಿಂದಿ ಪದಗಳನ್ನು ಕನ್ನಡೀಕರಿಸುವ ಪರಿಪಾಠ ನಮ್ಮಲ್ಲಿದೆ.  ಉದಾ: ನಾಮಕೆವಾಸ್ತಾ, ಏಕೋಬಡಾಭಾಯಿ, ಅಬ್ ಕಿ ಬಾರ್ ಮೋದಿ ಸರ್ಕಾರ್, ಅಬ್ ಕಿ ಬಾರ್ ಮೋದಿ ಸಾರ್ಕ್ ಇತ್ಯಾದಿ. ಹೀಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮಾಲಕಿನ್ ಪ್ರೀತಿ ಜಿಂಟಾ ಅಂತಿದ್ದರೆ ಹೊಸ ಹೊಸ ಪದಗಳಿಗೆ ಆವಿಷ್ಕಾರ ಕೊಡುತ್ತಿರುವ 'ಕನ್ನಡಪ್ರಭ'ದ ಈ ಪ್ರಯೋಗವೂ ಇಷ್ಟವಾಗುತ್ತಿತ್ತೋ, ಏನೋ?' ಎಂದಿದ್ದಾರೆ.
ಮೈಸೂರಿನಿಂದ ಎಚ್.ಜಿ.ಜಗದೀಶ್ ಪತ್ರ ಕಳುಹಿಸಿದ್ದಾರೆ. 'ಜೂನ್ 24ರ ಮುಖಪುಟದಲ್ಲಿ 'ಟ್ವೀಟಿಸಿದ್ದು' ಅಂಕಣದಲ್ಲಿ ಯು.ಪಿ, ಬಿಹಾರದಲ್ಲಿ ಮಹಿಳೆಯರ ಮೇಲೆ 'ಅತ್ಯಾಚಾರ' ನಡೆಯುತ್ತಿದೆ ಎಂದು ಮುದ್ರಿಸುವ ಬದಲು 'ಹತ್ಯಾಚಾರ' ಎಂದು ಅಚ್ಚಾಗಿದೆ. 'ಅ' ಕಾರದ ಬದಲು 'ಹ'ಕಾರವನ್ನು ಮಾತನಾಡುವಾಗ ಮಾತ್ರ ಕೆಲವರು ಬಳಸುವರು ಎಂದುಕೊಂಡಿದ್ದೆ. ಆದರೆ ಬರೆಯುವಾಗಲೂ ವ್ಯತ್ಯಾಸ ಮಾಡಿರುವುದು ನೋಡಿದರೆ 'ಮುದ್ರಾರಾಕ್ಷಸನ' ಹಾವಳಿ ಎನಿಸುತ್ತದೆ. ಖಾಸಗಿ ಚಾನೆಲ್ವೊಂದರಲ್ಲಿಯೂ ಕೆಲ ವರ್ಷದ ಹಿಂದೆ ಆ್ಯಂಕರ್ ಒಬ್ಬರು ಹೀಗೆ ಹೇಳುತ್ತಿದ್ದರು. 'ಹಿದು ....... ಟಿವಿ,  ಹೀಗ ಅಕ್ಕಿ ಆರಿತು', ನೋಡಿ ಕಾರ್ಯಕ್ರಮ ಎಂದು. ಮತ್ತೊಬ್ಬರು 'ಹಾಕಾಶದಲ್ಲಿ ಆರಾಡುವುದು ಅಕ್ಕಿ, ನಾವು ಹನ್ನ ಮಾಡಿಕೊಂಡು ಹೂಟ ಮಾಡುವುದು ಹಕ್ಕಿ' ಎನ್ನುತ್ತಿದ್ದರು' ಎಂದು ವಾದ ಮಂಡಿಸಿದ್ದಾರೆ.
ಜಗದೀಶ್ ಅವರು ಪತ್ರಿಕೆಯನ್ನು ಕಳೆದೊಂದು ವರ್ಷದಿಂದ ಸರಿಯಾಗಿ ಗಮನಿಸುತ್ತಿಲ್ಲ ಎನಿಸುತ್ತದೆ. 'ಅ' ಮತ್ತು 'ಹ' ಕಾರದ ಬಗ್ಗೆ ಪತ್ರಿಕೆಗೆ ಸ್ಪಷ್ಟತೆಯಿದೆ. ಉದ್ದೇಶಪೂರ್ವಕವಾಗಿ 'ಹತ್ಯಾಚಾರ' ಬಳಕೆ ಮಾಡುತ್ತಿದ್ದೇವೆ. ಅತ್ಯಾಚಾರ ಮಾಡಿ ಕೊಲೆ ಮಾಡುವುದಕ್ಕೆ 'ಹತ್ಯಾಚಾರ' ಎಂದು ಪತ್ರಿಕೆ ಬಳಸಿದ ಹೊಸ ಶಬ್ದವದು. ನಾವು ಶಬ್ದಗಳ ಅತ್ಯಾಚಾರ ಮಾಡಿಲ್ಲ. ಈ ಅಂಕಣದಲ್ಲಿಯೂ ಸುದೀರ್ಘವಾಗಿ 'ಹತ್ಯಾಚಾರ' ಪದ ಬಳಕೆ ಬಗ್ಗೆ ಚರ್ಚೆಯಾಗಿದೆ.

 -ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com