ನರೇಂದ್ರ ಮೋದಿ ಅವರು ಈಗಾಗಲೇ ಅನೇಕ ಬಾರಿ ಹೇಳಿರುವಂತೆ, ಅವರ ಸರ್ಕಾರದ ಮೊದಲ ಎರಡು ವರ್ಷಗಳನ್ನು ವಿತ್ತೀಯ ಭದ್ರತೆಗೆ ಮೀಸಲಿಟ್ಟು ವಿಕಾಸ-ಸುಧಾರಣೆಯ ಪ್ರಕ್ರಿಯೆಯನ್ನು ಮೂರನೆಯ ವರ್ಷದಿಂದ ಆರಂಭಿಸುವ ಉದ್ದೇಶ ಇದೆ. ಆ ಘೋಷವಾಕ್ಯದ ಹಿನ್ನೆಲೆಯಲ್ಲಿ ವಿತ್ತಮಂತ್ರಿ ಅರುಣ್ ಜೇಟ್ಲಿ ಅವರು ಗುರುವಾರದ ಬಜೆಟ್ ಮಂಡನೆಗೆ ಭಾರಿ ಕಸರತ್ತನ್ನೇ ನಡೆಸಿದ್ದಾರೆ. ಕೆಲವು ರಿಯಾಯಿತಿ- ವಿನಾಯಿತಿಗಳನ್ನು ಪ್ರಕಟಿಸಿ, ವಿತ್ತೀಯ ಶಿಸ್ತಿನ (ಪ್ರಧಾನವಾಗಿ ವೆಚ್ಚದ ಬಾಬತ್ತು) ಸ್ಥಿತಿಗತಿಯ ಪರಿಶೀಲನೆಗೆ ಒಂದು ತಜ್ಞರ ಆಯೋಗವನ್ನು ನೇಮಿಸುವ ಸಲಹೆ ಮಾಡಿ, ಮಾಧ್ಯಮ ವರ್ಗದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ಇಲ್ಲಿ ಅರುಣ್ ಜೇಟ್ಲಿ ಅವರಿಗೆ ಸದ್ಯದ ಚಾಲ್ತಿ ವರ್ಷಕ್ಕೆ ಹಿಂದಿನ ಸರ್ಕಾರದ ತಾತ್ಕಾಲಿಕ ಬಜೆಟ್ಟೇ ಆಧಾರವಾಗಿತ್ತು ಎನ್ನುವುದನ್ನು ಮರೆಯಬಾರದು. ಅದೇ ರೀತಿಯಲ್ಲೇ ಆಮ್ ಆದ್ಮಿ ಕಲ್ಯಾಣ ಯೋಜನೆಗಳನ್ನು ಹಾಗೇ ಉಳಿಸಿಕೊಳ್ಳಬೇಕಾಗಿತ್ತು. ಆರ್ಥಿಕ ವ್ಯವಸ್ಥೆಯಲ್ಲಿ ದಿಢೀರನೆ ದೊಡ್ಡ ರೀತಿಯ ಬದಲಾವಣೆಗಳನ್ನು ಜಾರಿಗೆ ತರುವುದೂ ಅಸಾಧ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಯೋಜನಾ ವೆಚ್ಚ, ಹಾಗೂ ಯೋಜನೇತರ ವೆಚ್ಚಗಳನ್ನು ಹೆಚ್ಚು ಕಡಿಮೆ ಯಥಾಸ್ಥಿತಿಯನ್ನೇ ಉಳಿಸಿಕೊಂಡಿದ್ದರೂ ಒಳ್ಳೆಯ ಕೆಲಸ ಮಾಡಿದ ಶ್ಲಾಘನೆಗೆ ಪಾತ್ರರಾಗಿದ್ದಾರೆ.
ನಿಜ. ತೆರಿಗೆ ರಿಯಾಯಿತಿ, ಉಳಿತಾಯ ಯೋಜನೆಗಳಿಗೆ ನೀಡಿರುವ ಪ್ರಾಶಸ್ತ್ಯ, ಬ್ಯಾಂಕಿಂಗ್ ಸುಧಾರಣೆ, ವಿದೇಶಿ ಬಂಡವಾಳ ಹೂಡಿಕೆಗೆ ಅಗ್ರತಾಂಬೂಲವನ್ನೇ ನೀಡಿದ್ದರೂ, ಕಡು ಬಡ ಸಮಾಜಗಳಿಗೆ ಸೇರಿದವರಿಗೆ ಈಗ ಇರುವ ಯಾವುದೇ ಹಕ್ಕನ್ನು (ಅನ್ನಭಾಗ್ಯ) ಮೊಟಕುಗೊಳಿಸಿಲ್ಲ. ಇನ್ನಷ್ಟು ಉಚಿತ ಕೊಡುಗೆಗಳನ್ನು ಪ್ರಕಟಿಸಿಲ್ಲ ಎನ್ನುವುದು ನಿಜ. ಬಜೆಟ್ನ ಆದಾಯ-ವ್ಯಯದ ಅಂದಾಜುಗಳ ನಡುವೆ ಇರುವ ವ್ಯತ್ಯಾಸವನ್ನು ನಿರೀಕ್ಷೆಯ ಮಟ್ಟದಲ್ಲೇ ಇಟ್ಟಿದ್ದಾರೆ. ಬಜೆಟ್ ಕೊರತೆಯನ್ನು ಒಟ್ಟು ದೇಶದ ಉತ್ಪಾದನೆ ಸೇವೆಗಳ ಮೌಲ್ಯದ (ಜಿಡಿಪಿ) ಶೇಕಡಾ 4.6 ರಲ್ಲೇ ಉಳಿಸಿಕೊಂಡಿರುವುದು ಒಂದು ಸಾಧನೆ. ಅದು ಮುಂದಿನ ವರ್ಷಗಳಲ್ಲಿ ಇನ್ನೂ ಕಡಿಮೆಯಾಗಲಿದೆ. ಪ್ರತ್ಯಕ್ಷ ತೆರಿಗೆಗಳ ಸಂಹಿತೆಯನ್ನು ಉಲ್ಲಂಘಿಸಿಲ್ಲ. ಈಚಿನ ವರ್ಷಗಳಲ್ಲಿ ಸರ್ಕಾರಗಳು ಅನೇಕ ವಿಷಯಗಳಲ್ಲಿ ನಿರ್ಧಾರ ಪ್ರಕಟಿಸುವುದನ್ನು ವಿಳಂಬ ಮಾಡಿದ್ದರಿಂದ ನಿರ್ಮಾಣವಾದ ಪರಿಸ್ಥಿತಿಯನ್ನು (ಅದನ್ನೇ ನೀತಿ ನಿರೂಪಣೆಯ ಲಕ್ವ ಎಂದು ಬಣ್ಣಿಸಲಾಗಿತ್ತು) ಎದುರಿಸಬೇಕಾದ ಸನ್ನಿವೇಶದಲ್ಲಿ ಮೋದಿ ಸರ್ಕಾರ ಸುಧಾರಣಾ ನೀತಿಯ ಮೂರನೆಯ ಮಜಲನ್ನು ಏರುವುದನ್ನು ಯೋಚಿಸುವುದೂ ಸಾಧ್ಯವಿಲ್ಲ. ಆದರೆ ಅದನ್ನು ಕೈ ಬಿಟ್ಟಿಲ್ಲ ಎಂದಿದ್ದಾರೆ ಅರುಣ್ ಜೇಟ್ಲಿ.
ಭವಿಷ್ಯದ ಸುಧಾರಣೆ ಹಾಗೂ ಬೆಳವಣಿಗೆಗೆ ಸರ್ಕಾರ ಹೆಚ್ಚಾಗಿ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನೇ ಅವಲಂಬಿಸುವ ಸೂಚನೆಯನ್ನೂ ಜೇಟ್ಲಿ ನೀಡಿದ್ದಾರೆ. ಸರ್ಕಾರಿ ಬ್ಯಾಂಕ್ಗಳಿಗೆ ಈಗ ಅಧಿಕ ಬಂಡವಾಳವನ್ನು ಒದಗಿಸಬೇಕಾಗಿರುವುದರಿಂದ ಸಾರ್ವಜನಿಕರಿಗೇ ನೇರವಾಗಿ ಷೇರು ಮಾರುವ ಯೋಜನೆಯೂ ಇದೆ. ಈ ವರ್ಷ ಸರ್ಕಾರಿ ಕಂಪೆನಿಗಳ ಷೇರುಗಳ ಮಾರಾಟದಿಂದ ಸುಮಾರು 58425 ಕೋಟಿ ರುಪಾಯಿಗಳನ್ನು ಸಂಗ್ರಹಿಸುವ ಯೋಜನೆ ಇದೆ. ಸರ್ಕಾರಿ ಸಂಸ್ಥೆಗಳು ಈ ವರ್ಷದಲ್ಲೇ 2.37 ಲಕ್ಷ ಕೋಟಿ ರುಪಾಯಿಗಳ ಬಂಡವಾಳ ಹೂಡಲಿವೆ.
ಬಜೆಟ್ನಲ್ಲಿ ಹಳ್ಳಿಗಳಿಗೂ ಬ್ರಾಡ್ಬ್ಯಾಂಡ್ ಸಂಪರ್ಕ ಸಾಧನದ ಸೌಲಭ್ಯ, ಗ್ರಾಮೀಣ ಇಂಟರ್ನೆಟ್ ಟೆಕ್ನಾಲಜಿ ಮಿಷನ್ ಮೂಲಕ ಯುವಕರಿಗೆ ತರಬೇತಿ ನೀಡುವ ಯೋಜನೆಯೂ ಪ್ರಕಟವಾಗಿದೆ. ಅದಕ್ಕೆ ಅನುಗುಣವಾಗಿ, ಪ್ರಕಟಿತ ತೆರಿಗೆ ನೀತಿಯ ಪರಿಣಾಮವಾಗಿ, ಅಗ್ಗದ ಕಂಪ್ಯೂಟರ್ಗಳು, ಸೆಲ್ಫೋನ್ಗಳು ಹಾಗೂ ಆ ಜಾತಿಯ ಇತರ ಸೌಲಭ್ಯಗಳ ಮೇಲಿನ ತೆರಿಗೆಯ ಹೊರೆಯನ್ನು ಇಳಿಸಿ, ಇಡೀ ದೇಶವನ್ನೇ ಡಿಜಿಟಲ್ ಸಾಕ್ಷರತೆಯ ದಿಕ್ಕಿನಲ್ಲಿ ಕರೆದೊಯ್ಯುವ ಪ್ರಸ್ತಾಪವನ್ನೂ ಇಡಲಾಗಿದೆ. ಗುರುವಾರದ ಬಜೆಟ್ನಲ್ಲಿ ಪ್ರಕಟವಾಗಿರುವ ನೇರ ತೆರಿಗೆಗಳ ರಿಯಾಯಿತಿಯ ಪರಿಣಾಮವಾಗಿ, ನೇರ ತೆರಿಗೆಗಳಲ್ಲಿ 22,000 ಕೋಟಿ ರುಪಾಯಿಗಳ ಆದಾಯ ಕಡಿಮೆಯಾದರೆ ಪರೋಕ್ಷ ತೆರಿಗೆಗಳಿಂದ 7725 ಕೋಟಿ ರುಪಾಯಿಗಳಷ್ಟು ಹೆಚ್ಚು ಆದಾಯ ಬರಲಿದೆ.
ರಾಷ್ಟ್ರೀಯ ಜನತಾಂತ್ರಿಕ ಕೂಟದ ಎಲ್ಲ ಹೇಳಿಕೆಗಳಂತೆ, ಈ ಬಜೆಟ್ಟೂ ಒಂದು ದಾರ್ಶನಿಕ ದಾಖಲೆಯೇ. ಅದರಲ್ಲಿ ಸದಾಶಯಗಳು ತುಂಬಿವೆ. ಎಲ್ಲ ಭರವಸೆಗಳನ್ನೂ ತತ್ಕ್ಷಣದಲ್ಲೇ ಈಡೇರಿಸುವುದು ಅಸಾಧ್ಯದ ಮಾತು. ಬಜೆಟ್ನ ಬಹುತೇಕ ಯೋಜನೆಗಳು ಖಾಸಗಿ ವಲಯದ ಬಂಡವಾಳ ಹಾಗೂ ವಿದೇಶೀ ನೇರ ಬಂಡವಾಳ ಹೂಡಿಕೆಯನ್ನೇ ಅವಲಂಬಿಸಿರುವಂತಿದೆ. ಅದು ಪ್ರಾಯಶಃ ಈಗಿನ ಪರಿಸ್ಥಿತಿಯಲ್ಲಿ ಅನಿವಾರ್ಯ. ಹೀಗಾಗಿ, ಮೂಲಭೂತ ಸುಧಾರಣೆಯತ್ತ ಗಮನ ಹರಿಸುವುದು ಸಾಧ್ಯವಾಗಿಲ್ಲ. ಅದನ್ನೇ ಅನೇಕರು ಬಜೆಟ್ನ ಕೊರತೆ ಎಂದು ಜರಿಯಬಹುದು. ಹೊಸ ಉದ್ಯೋಗಗಳ ನಿರ್ಮಾಣಕ್ಕೆ ಎಲ್ಲಿದೆ ಹಣ ಎಂದು ಕೇಳಲೂಬಹುದು. ಅದೇ ರೀತಿ ಗರೀಬಿ ಹಟಾವೋ ಆಂದೋಲನದ (44 ವರ್ಷಗಳಿಂದಲೂ ನಡೆದು ಬಂದಿದೆ) ಮುಖಂಡರು ಇದು ಬಲ್ಲಿದರ ಬಜೆಟ್ ಬಡವರದ್ದಲ್ಲ ಎಂದು ಮೂದಲಿಸಬಹುದು. ಇಂತಹ ಟೀಕೆ ಇದ್ದಿದ್ದೆ.
ಈಗಿನ ಬಜೆಟ್ನಲ್ಲಿ ಹೇಳಿರುವಷ್ಟನ್ನು ವರ್ಷಾಂತ್ಯದ ಒಳಗೆ ಸಾಧಿಸುವುದು ನರೇಂದ್ರ ಮೋದಿ- ಅರುಣ್ ಜೇಟ್ಲಿ ಜೋಡಿಗೆ ಸಾಧ್ಯವಾಗುವುದಾದರೆ, ಅದೊಂದು ಮಹಾ ಸಾಧನೆಯೇ ಆಗಲಿದೆ. ಬಜೆಟ್ ಭಾಷಣದ ಆರಂಭದಲ್ಲಿ ಕುಸಿದಿದ್ದ ಮುಂಬೈ ಸ್ಟಾಕ್ ಎಕ್ಸ್ಛೇಂಜ್ನ ಸಂವೇದಿ ಸೂಚ್ಯಂಕ ಭಾಷಣ ಮುಗಿದ ಅನಂತರ 400 ಅಂಕಗಳಷ್ಟು ಏರಿತ್ತು. ಅದನ್ನು ಒಂದು ಶುಭ ಸೂಚನೆ ಎಂದೇ ಭಾವಿಸಬೇಕು.