ಕಾಂಗ್ರೆಸ್ ಏಕಾಂಗಿ

Updated on: 

ಟೆಲಿಕಾಮ್  ನಿಯಂತ್ರಣ ಪ್ರಾಧಿಕಾರದ ಕಾಯಿದೆಯ ಬದಲಾವಣೆಯ ವಿಧೇಯಕಕ್ಕೆ ಲೋಕಸಭೆ ಸೋಮವಾರ ತನ್ನ ಅಂಗೀಕಾರ ಮುದ್ರೆಯನ್ನು ಒತ್ತಿದಾಗ, ಹೆಚ್ಚು ಕಡಿಮೆ ಕಾಂಗ್ರೆಸ್ ಸದನದಲ್ಲಿ ಏಕಾಂಗಿಯಾಗಿತ್ತು. ಈ ವಿಧೇಯಕ ಈಗಾಗಲೇ ಸರ್ಕಾರ ಪ್ರಕಟಿಸಿರುವ ಸುಗ್ರೀವಾಜ್ಞೆಯ ರೂಪದಲ್ಲಿ ಜಾರಿಯಲ್ಲಿದೆ.
ಕಾಯಿದೆಯ ಮಾರ್ಪಾಟು ಅಗತ್ಯವಾಗಿದ್ದೂ ಒಂದು ಸಣ್ಣ ಕಾರಣಕ್ಕೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿವೃತ್ತ ಐ.ಎ.ಎಸ್ ಅಧಿಕಾರಿ ನೃಪೇಂದ್ರ ಮಿಶ್ರ ಅವರನ್ನು ತಮ್ಮ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಬೇಕಾಗಿತ್ತು. ಅದಕ್ಕೆ ಇದ್ದ ಒಂದು ದೊಡ್ಡ ಅಡಚಣೆ ಎಂದರೆ ಟೆಲಿಕಾಮ್ ನಿಯಂತ್ರಣ ಪ್ರಾಧಿಕಾರದ ಅಧ್ಯಕ್ಷರ ಸ್ಥಾನದಲ್ಲಿ ಕೆಲಸ ಮಾಡಿದವರು, ನಿವೃತ್ತರಾದ ಅನಂತರ ಎರಡು ವರ್ಷಗಳ ಕಾಲ ಸರ್ಕಾರದ ಯಾವ ಹುದ್ದೆಯನ್ನೂ ಒಪ್ಪಿಕೊಳ್ಳುವಂತಿಲ್ಲ ಎನ್ನುವ ನಿಯಮ. ನೃಪೇಂದ್ರ ಮಿಶ್ರ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.
ಆದರೂ ಅವರನ್ನೇ ತಮ್ಮ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿಕೊಳ್ಳಲೇಬೇಕೆಂದು ನಿರ್ಧರಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತುರ್ತು ಶಾಸನದ ಘೋಷಣೆಯ (ಸುಗ್ರೀವಾಜ್ಞೆ) ಮೂಲಕ ಕಾಯಿದೆಯ ಆ ಅಂಶವನ್ನೇ ಬದಲಾಯಿಸಿದ್ದರು.
ತುರ್ತು ಶಾಸನವನ್ನು ಸಂಸತ್ತಿನ ಅಧಿವೇಶನ ಸೇರಿದಾಗ ಸದನಗಳಲ್ಲಿ ಮಂಡಿಸಿ ಅಂಗೀಕಾರದ ಮುದ್ರೆಯನ್ನು ಒತ್ತಿಸಿಕೊಳ್ಳಬೇಕಾಗಿತ್ತು. ಲೋಕಸಭೆಯಲ್ಲಿ ಅದೇನೂ ಸಮಸ್ಯೆಯಾಗಿರಲಿಲ್ಲ. ಆದರೆ ರಾಜ್ಯಸಭೆಯಲ್ಲಿ ಆಳುವ ಕೂಟಕ್ಕೆ ಬಹುಮತವಿಲ್ಲದೇ ಇರುವುದರಿಂದ, ಅಲ್ಲಿ ಮಾರ್ಪಾಟು ಅಂಗೀಕಾರವಾಗದಿದ್ದರೆ ಮತ್ತೆ ಲೋಕಸಭೆಗೇ ಬರಬೇಕಾಗಿತ್ತು.
ಈ ಪರಿಸ್ಥಿತಿಯ ಅರಿವು ಎಲ್ಲ ಪಕ್ಷಗಳಲ್ಲೂ ಇದ್ದಿದ್ದರಿಂದ ಪ್ರಧಾನಿಗೆ ತನಗೆ ಬೇಕಾದ ಅಧಿಕಾರಿಯನ್ನು ನೇಮಿಸಿಕೊಳ್ಳುವ ಅಧಿಕಾರವಿದೆ ಎನ್ನುವ ರಾಜಕೀಯ ಸಿದ್ಧಾಂತವನ್ನು ತೇಲಿ ಬಿಡಲಾಯಿತು. ಆದರೂ ಸದನದ ಹೊರಗಡೆ ಕಾಂಗ್ರೆಸ್-ಬಿಜೆಪಿ ಕೂಟಗಳಿಂದ ದೂರವಾಗಿರುವ ಬಂಗಾಳದ ತೃಣಮೂಲ ಕಾಂಗ್ರೆಸ್, ಉತ್ತರ ಪ್ರದೇಶದ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹಾಗೂ ಇತರ ಕೆಲವರ ಹೇಳಿಕೆಗಳು ರಾಜಕೀಯ ಕಿರಿಕಿರಿಯ ಸ್ವರೂಪದ ವಾತಾವರಣ ನಿರ್ಮಾಣವಾಗಿದ್ದು ನಿಜ.
ಆದರೆ ಬಿಜೆಪಿಯ ಕೆಲವು ನಾಯಕರು ನಡೆಸಿದ  ತೆರೆಮರೆಯ ಚಟುವಟಿಕೆ ಫಲ ನೀಡಿತು. ಇದು ಪ್ರಧಾನಿಯ ಅಧಿಕಾರದ ಪ್ರಶ್ನೆಯಾಗಿದ್ದರಿಂದ ಅನೇಕರಿಗೆ ವಿಧೇಯಕವನ್ನು ವಿರೋಧಿಸುವ ಮನಸ್ಸಿರಲಿಲ್ಲ. ಹೀಗಾಗಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸದಸ್ಯರು ತಮ್ಮ ವೀರಾವೇಶವನ್ನು ಕಡಿಮೆ ಮಾಡಿಕೊಂಡಿದ್ದರು. ಬಹುಜನ ಸಮಾಜದ ಸದಸ್ಯರೂ ಮೆತ್ತಗಾಗಿದ್ದರು. ಕಾಂಗ್ರೆಸ್ ನೇತೃತ್ವದ ಸಂಯುಕ್ತ ಜನತಾಂತ್ರಿಕ ಕೂಟದ ಅಂಗಪಕ್ಷವಾದ ರಾಷ್ಟ್ರೀಯತಾ ಕಾಂಗ್ರೆಸ್ಸಿನ ನಾಯಕರಾದ ಶರದ್ಪವಾರ್ (ಅವರು ರಾಜ್ಯಸಭೆಯ ಸದಸ್ಯರು) ಅವರೂ ಪ್ರಧಾನಿಯ ಅಧಿಕಾರವನ್ನು ಪ್ರಶ್ನಿಸುವುದು ಸರಿಯಲ್ಲ ಎಂದಿದ್ದರು.
ಇದೆಲ್ಲದರ ಪರಿಣಾಮವಾಗಿ, ಲೋಕಸಭೆಯಲ್ಲಿ ವಿಧೇಯಕದ ಮೇಲಿನ ಚರ್ಚೆ ಮುಗಿದು ಮತದಾನದ ಹಂತ ತಲುಪಿದಾಗ, ಕಾಂಗ್ರೆಸ್ಸಿನ ಮಿತ್ರ ಪಕ್ಷಗಳು ಸದನದಲ್ಲಿ ಮತ ಎಣಿಕೆಯನ್ನು ತಪ್ಪಿಸಲು, ಮತದಾನಕ್ಕೆ ಒತ್ತಾಯಪಡಿಸದೇ, ತಮ್ಮ ಪ್ರತಿಭಟನೆಯನ್ನು ಸಭಾತ್ಯಾಗದ ಮೂಲಕ ಪ್ರಕಟಿಸಿದರು. ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಆಮ್ಆದ್ಮಿ ಪಾರ್ಟಿಗಳು ತಮ್ಮ ಮರ್ಯಾದೆಯನ್ನು ಉಳಿಸಿಕೊಂಡಿದ್ದು ಹೀಗೆ.
ರಾಜ್ಯಸಭೆಯಲ್ಲಿ ವಿಧೇಯಕಕ್ಕೆ ಬಹುಮತ ಸಿಗದೇ ಹೋದರೂ, ಮತ್ತೆ ಲೋಕಸಭೆಯ ಅಂಗೀಕಾರ ಮುದ್ರೆ ಬಿದ್ದರೆ ಮಾರ್ಪಾಟು ಜಾರಿಗೆ ಬರುತ್ತದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಕೂಟದ ವರ್ತನೆ ಹೇಗಿರಬಹುದು? ಅದರಲ್ಲಿನ ಆಸಕ್ತಿ ಈಗ ಕಡಿಮೆಯಾಗಿರುವುದು ಸಹಜ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com