ಕಳೆದ ಕೆಲವು ತಿಂಗಳಿಂದಲೂ, ಸುದ್ದಿ ಪ್ರಪಂಚದ ಮೂಲೆ ಮೂಲೆಗಳಲ್ಲಿ ಕಂಡುಬರುವುದು ಅತ್ಯಾಚಾರದ ಪ್ರಕರಣಗಳೇ ಎನ್ನುವಂತಾಗಿದೆ. ಸುದ್ದಿ ಹಾಗೂ ಮಾಧ್ಯಮದ ವಲಯದಲ್ಲಿ ಅತ್ಯಾಚಾರಕ್ಕೆ ಸುದ್ದಿಯ ಮೌಲ್ಯ ಇರಬಹುದು.
ಆದರೆ ಕಾಯಿದೆ ಪಾಲಕರ ಪಾಲಿಗೆ ಈಗ ಅತ್ಯಾಚಾರದ ಪಿಡುಗು ಒಂದು ಸವಾಲು. ಅತ್ಯಾಚಾರದ ಪ್ರಕರಣಗಳಿಗೂ ಸಾಮಾಜಿಕ ಸ್ಥಿತಿಗತಿಯಲ್ಲಿ ಅಡಗಿರುವ ಸಂಘರ್ಷಕ್ಕೂ ಸಂಬಂಧವಿದೆ ಎನ್ನುವ ವಾದ ದೆಹಲಿಯ ನಿರ್ಭಯ ಪ್ರಕರಣದ ಕಾಲದಲ್ಲಿ ಕೆಲವು ವಲಯಗಳಲ್ಲಿ ಪ್ರಚಾರದಲ್ಲಿತ್ತು.
ಆ ಪ್ರಕರಣದಲ್ಲಿ ಬಲಿಪಶುವಾದ ನಿರ್ಭಯ ಮಧ್ಯಮ ವರ್ಗದ, ಸುಶಿಕ್ಷಿತ, ಸಾಮಾಜಿಕವಾಗಿ ಮೇಲೇರಲು ಪ್ರಯತ್ನಿಸುತ್ತಿದ್ದ ಯುವತಿ. ಅತ್ಯಾಚಾರಿಗಳು ಯಾವುದೇ ರೀತಿಯ ಶಿಕ್ಷಣವೂ ಇಲ್ಲದ ಅಸಂಘಟಿತ ಶ್ರಮಿಕ ವರ್ಗದವರು. ಇಲ್ಲಿ ಹಿಂದೆ ಕೆಲವು ವಿಶ್ಲೇಷಕರು ವರ್ಗ - ವರ್ಣ ಸಂಘರ್ಷದ ನೆರಳನ್ನು ಕಂಡಿದ್ದರು. ಆದರೆ ಅಂತಹ ವೈಜ್ಞಾನಿಕ ವಿಶ್ಲೇಷಕರ ತಂಡ ತನ್ನ ಕೆಲಸವನ್ನು ಮಧ್ಯದಲ್ಲೇ ನಿಲ್ಲಿಸಿತ್ತು. ಈಗ ಕರ್ನಾಟಕ ವಿಧಾನ ಮಂಡಲದಲ್ಲಿ ದೊಡ್ಡ ಗದ್ದಲವನ್ನೇ ನಿರ್ಮಿಸಿರುವ ರಾತ್ರಿಯ ವೇಳೆಯಲ್ಲಿ ಬೆಂಗಳೂರಿನಲ್ಲಿ ತರುಣಿಯೊಬ್ಬಳು ತನ್ನ ಸಂಗಾತಿಯ ಜತೆ ಕಾರಿನಲ್ಲಿ ಕೂತಿದ್ದಾಗ ಆಕೆಯನ್ನು ಅಪಹರಿಸಿ, ಚಿತ್ರಹಿಂಸೆಗೆ ಗುರಿಪಡಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಒಂದು ತಂಡದ ನಾಯಕ ಶ್ರೀಮಂತನಂತೆ. ದುಬಾರಿ ಕಾರಿನಲ್ಲಿ ನಾಲ್ಕೈದು ಸಂಗಾತಿಗಳ ಜತೆ ತರುಣಿಯ ಶೀಲ ಭಂಗವಾಗಿದೆ. ಈ ಕ್ರೂರ ಅಪರಾಧದಲ್ಲಿ ಪಾಲುಗೊಂಡವರಲ್ಲಿ ಇಬ್ಬರ ಬಂಧನವಾಗಿದೆ. ಇನ್ನುಳಿದವರು ಬಹುಕಾಲ ತಲೆ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ.
ಈ ಪ್ರಕರಣದಲ್ಲಿ ನೊಂದ ತರುಣಿ ದೂರು ಕೊಟ್ಟಾಗ ಅದನ್ನು ಸರಿಯಾಗಿ ನಿರ್ವಹಿಸಲಿಲ್ಲ ಎನ್ನುವ ಕಾರಣಕ್ಕಾಗಿ ಪೊಲೀಸ್ ಠಾಣೆಯ ಅಧಿಕಾರಿ ಸಸ್ಪೆಂಡ್ ಆಗಿದ್ದಾರೆ. ಪ್ರಕರಣದ ತನಿಖೆ ಈ ಹಂತದಲ್ಲಿರುವಾಗಲೇ ಅದಕ್ಕೆ ಅಗತ್ಯಕ್ಕಿಂತ ಹೆಚ್ಚು, ವಿಪರೀತ ಎನ್ನುವಷ್ಟು ಪ್ರಚಾರ ಸಿಕ್ಕಿರುವುದು ಒಂದು ದುರಂತವೇ. ಇಂತಹ ಪ್ರಕರಣಗಳನ್ನು ವರದಿ ಮಾಡುವಾಗ ಮಾಧ್ಯಮ ಪ್ರಪಂಚವೂ ಸಂಯಮವನ್ನು ಕಾಪಾಡಿಕೊಳ್ಳುವುದು ಅಗತ್ಯ. ಈಗ ಆ ತರುಣಿಗೆ ಸಂಬಂಧಿಸಿದ ಅನೇಕ ವಿವರಗಳು ಸಾರ್ವಜನಿಕರಿಗೆ ವರದಿಗಳ ಮೂಲಕ ಲಭ್ಯ. ಅನೇಕರು ಆ ತರುಣಿ ಯಾರು ಎನ್ನುವುದನ್ನು ಪತ್ತೆ ಹಚ್ಚಿರಲೂಬಹುದು.
ಪೊಲೀಸ್ ಠಾಣೆಯಲ್ಲಿನ ಕೆಳದರ್ಜೆಯ ಅಧಿಕಾರಿಯ ಬೇಜವಾಬ್ದಾರಿತನ, ಮಾಧ್ಯಮ ಪ್ರಪಂಚದ ಕೆಲಸದ ಪ್ರಚಾರದ ವೈಪರೀತ್ಯ ಆ ತರುಣಿ ಹಾಗೂ ಅವರ ಆತ್ಮೀಯರನ್ನು ತಲ್ಲಣಗೊಳಿಸುವಂತಹದ್ದು. ಮಾಧ್ಯಮ ಪ್ರಪಂಚದಲ್ಲಿ ಸುದ್ದಿ ಕೊಡಬಾರದೆಂದೇನೂ ಅಲ್ಲ. ಅಗತ್ಯವಾಗಿ ಇದು ಜನರಿಗೆ ತಿಳಿಯಬೇಕಾದ ವಿಚಾರ. ಆದರೆ ಕೆಲವು ಕಡೆಗಳಲ್ಲಿ ಇಡೀ ವರದಿಯನ್ನು ರೋಚಕವಾಗಿ ಪ್ರಸಾರ ಮಾಡಿದ್ದನ್ನು ಮಾಧ್ಯಮದ ಹಿರಿಯರೇ ವಿಮರ್ಶಿಸುವುದು ಸೂಕ್ತ.
ವಿಧಾನಸಭೆಯಲ್ಲಿ ನಡೆದ ಗೊಂದಲದಲ್ಲೂ ಅಷ್ಟೇ. ಇಂತಹ ವಿಷಯದ ಪ್ರಸ್ತಾಪದ ಸತ್ಯಶೋಧನೆಯೇ ಆಗಿರಬೇಕು. ಅತ್ಯಾಚಾರವನ್ನು ಸಂಪೂರ್ಣವಾಗಿ ನಿಲ್ಲಿಸುವುದು ಸಾಧ್ಯವಿಲ್ಲ. ಆದರೆ ಆ ಪಿಡುಗಿನ ನಿಯಂತ್ರಣಕ್ಕೆ ಸರ್ಕಾರ ಸೂಕ್ತ ಕ್ರಮಗಳನ್ನು ರೂಪಿಸುವುದು ಸಾಧ್ಯ. ಅತ್ಯಾಚಾರಿಗಳು ಯಾರೇ ಆಗಿರಲಿ, ಅವರು ಸಿಕ್ಕಿಬಿದ್ದಾಗ ಕಠಿಣ ಶಿಕ್ಷೆ ಖಚಿತ ಎನ್ನುವ ವಾತಾವರಣವನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸಬೇಕು. ಇದಕ್ಕೆ ಸಮಾನಾಂತರವಾಗಿ, ಸಾರ್ವಜನಿಕ ಸ್ವಯಂ ಸೇವಾ ಸಂಘಟನೆಗಳು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ವೈಜ್ಞಾನಿಕವಾದ ವಿವರಣೆಯನ್ನು ಪ್ರಸಾರ ಮಾಡಬೇಕು. ಹೆಣ್ಣಿನ ಮೇಲಿನ ಅತ್ಯಾಚಾರ ನಿಜಕ್ಕೂ ಒಂದು ಭಯಂಕರ ಪ್ರವೃತ್ತಿ. ಜನರೇಕೆ (ಕೆಲವರೇ ಆಗಿದ್ದರೂ) ಆ ಪ್ರವೃತ್ತಿಗೆ ಬಲಿಯಾಗುತ್ತಾರೆ? ಎನ್ನುವ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಅನೇಕ ಕಡೆಗಳಲ್ಲಿ ನಡೆದಿದೆ. ನಗರದಲ್ಲಿ ವಾರದ ಹಿಂದೆ ನಡೆದ ಇನ್ನೊಂದು ಚಿಕ್ಕ ಹುಡುಗಿಯ ಮೇಲೆ ಶಾಲೆಯಲ್ಲೇ ನಡೆದ ಅತ್ಯಾಚಾರದ ವರದಿ ಗುರುವಾರ ವರದಿಯಾಗಿದ್ದು ನಿಜಕ್ಕೂ ಒಂದು ವಿಪರ್ಯಾಸ.