ತಪ್ಪಾಯ್ತು ತಿದ್ಕೋತೀವಿ

Updated on: 

'ಪೂರ್ವಗ್ರಹ' ಮತ್ತು 'ಪೂರ್ವಾಗ್ರಹ' ನಡುವಿನ ಚರ್ಚೆಗೆ ಓದುಗರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾಕಷ್ಟು ಓದುಗರು ಈ ಬಗ್ಗೆ ಪತ್ರ ಬರೆಯುತ್ತಿದ್ದಾರೆ. ಆದರೆ ಯಾರೂ 'ಪೂರ್ವಾಗ್ರಹ'ದ ಪರವಾಗಿ ವಾದ ಮಂಡಿಸುತ್ತಿಲ್ಲ. ಪತ್ರಗಳೆಲ್ಲ 'ಪೂರ್ವಗ್ರಹ'ದ ಪರವಾಗಿಯೇ ಇವೆ. ಓದುಗರ ಎಲ್ಲ ಪತ್ರಗಳನ್ನು ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.
ಬೆಂಗಳೂರಿನ ಹನುಮಂತನಗರದಿಂದ ಜಯರಾಮ ರೈ ಕುಂಜಾಡಿ ಅವರು ಬರೆಯುತ್ತಾರೆ- "ಪೂರ್ವಗ್ರಹ' ಎಂಬ ಸಂಸ್ಕೃತ, ಕನ್ನಡ ಭಾಷೆಗಳೆರಡರಲ್ಲೂ ಸಾಮಾನ್ಯವಾಗಿ ಬಳಸಲ್ಪಡುವ ಶಬ್ದ ಬಳಕೆಯ ಕುರಿತಾಗಿ ಕೆಲವು ಸಾಹಿತಿಗಳು ಮತ್ತು ಬುದ್ಧಿಜೀವಿಗಳ ನಡುವೆ ವಿರೋಧಾಭಿಪ್ರಾಯಗಳನ್ನೊಂಡ ಪತ್ರ ಸಮರ ನೋಡಿದೆ. ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲು, ವಾಸ್ತವ ಸಂಗತಿಗಳ ಮೇಲೆ ಬೆಳಕು ಚೆಲ್ಲಬೇಕೆಂದು ಯಾವುದೇ 'ಪೂರ್ವಗ್ರಹ'ವಿಲ್ಲದೇ ಪತ್ರ ಬರೆಯುತ್ತಿದ್ದೇನೆ.'
"ಪೂರ್ವಗ್ರಹ' ಎಂಬ ಬಳಕೆಯೇ ಸರಿಯಾದುದು, 'ಪೂರ್ವಾಗ್ರಹ' (ಪೂರ್ವ೤ಆಗ್ರಹ) ಅಲ್ಲ. ಯಾವುದೇ ಒಂದು ವಸ್ತು, ವಿಷಯ, ವ್ಯಕ್ತಿಯ ಕುರಿತಾದ ಪರಿಶೀಲನೆಗೆ ಮುಂಚಿತವಾಗಿಯೇ ಮಾಡಿಕೊಂಡ ಅನುಕೂಲ ಅಥವಾ ಪ್ರತಿಕೂಲ ಅಭಿಪ್ರಾಯವೇ 'ಪೂರ್ವಗ್ರಹ'. (ನೋಡಿ: ಕನ್ನಡ ಕ್ಲಿಷ್ಟಪದ ಕೋಶ-2000 ಸಂ: ಜಿ. ವೆಂಕಟಸುಬ್ಬಯ್ಯ, ಪುಟ 298, ಕಸಾಪ ಪ್ರಕಟಿಸಿದ ಸಂಕ್ಷಿಪ್ತ ಕನ್ನಡ ನಿಘಂಟು (1975/1977) ಪುಟ 540, ಕನ್ನಡ ರತ್ನಕೋಶ (8ನೇ ಮುದ್ರಣ-2011) ಪುಟ 179) ಇವು ಕೆಲವು ಪ್ರಮುಖ ಉದಾಹರಣೆಗಳು.'
'ಇವೆಲ್ಲದರಲ್ಲೂ 'ಪೂರ್ವಗ್ರಹ' ಶಬ್ದ ಉಲ್ಲೇಖವಾಗಿದೆಯೇ ಹೊರತು 'ಪೂರ್ವಾಗ್ರಹ' ಎಂಬುದು ಅಸ್ತಿತ್ವದಲ್ಲಿಲ್ಲ. ಆದ್ದರಿಂದ 'ಪೂರ್ವಾಗ್ರಹ'ದ ಪರವಾಗಿ ವಾದ ಮಾಡುವುದು ವ್ಯರ್ಥ ಕಾಲಹರಣವಷ್ಟೇ ಆದೀತು. ಲಿಖಿತವಾಗಿಯೂ, ಮೌಖಿಕವಾಗಿಯೂ ಬರಹಗಾರರು, ಭಾಷಣಕಾರರು ಮಾತ್ರವಲ್ಲ ಮಾಧ್ಯಮಗಳು ಕೂಡ 'ಪೂರ್ವಗ್ರಹ' ಎಂಬ ಶಬ್ದವನ್ನು 'ಪೂರ್ವಾಗ್ರಹ' ಎಂದು ತಪ್ಪಾಗಿಯೇ ಬಳಸುತ್ತಿರುವುದು ಕೂಡ ವಾಸ್ತವ. ಇದರಿಂದಾಗಿಯೇ 'ಪೂರ್ವಾಗ್ರಹ'ವೇ ಸರಿ ಎಂಬ ಭಾವನೆ ಮೂಡಿರಬಹುದು. ಅಂತಹ ತಪ್ಪು ಕಲ್ಪನೆಯಿಂದ ಹೊರಬರುವುದು ಒಳಿತು' ಎಂದಿದ್ದಾರೆ.
ಬೆಂಗಳೂರಿನಿಂದ 'ಜನಪ್ರಗತಿ' ವಾರಪತ್ರಿಕೆ ಮಾಜಿ ಉಪಸಂಪಾದಕ, ಬಿ.ಎಸ್. ರಮೇಶ್ ಅವರು ಕೂಡ 'ಪೂರ್ವಗ್ರಹ'ವನ್ನು ಬೆಂಬಲಿಸಿ ಪತ್ರ ಬರೆದಿದ್ದಾರೆ. ಅವರು ಬರೆಯುತ್ತಾರೆ- "ಪೂರ್ವಗ್ರಹ' ಮತ್ತು 'ಪೂರ್ವಾಗ್ರಹ' ಚರ್ಚೆಯಲ್ಲಿ ವಿಷಯಕ್ಕಿಂತ ಒಬ್ಬರನ್ನೊಬ್ಬರು ಟೀಕಿಸುವುದೇ ಆಗಿದೆ. 'ಪೂರ್ವಗ್ರಹ'ವೇ ಸರಿ. ಅದರ ಬಗ್ಗೆ ಇನ್ನೂ ಚರ್ಚೆ ಅಗತ್ಯವಿಲ್ಲ' ಎಂದಿದ್ದಾರೆ.
ಈಗಾಗಲೇ ನಾವು 'ಪೂರ್ವಗ್ರಹ' ಬಳಸುತ್ತಿದ್ದೇವೆ. ಈಗ ಅದೇ ಸರಿ ಅಂದಮೇಲೆ ಪೂರ್ವಗ್ರಹವನ್ನೇ ಎಲ್ಲೆಡೆ ಬಳಸೋಣ. ಆ ಮೂಲಕ ಸರಿಯಾದ ಶಬ್ದವನ್ನೇ ಬಳಕೆಗೆ ತರೋಣ.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com