ಮೈಸೂರಿನಿಂದ ಪತ್ರ ಬರೆದಿರುವ ಸಿ. ದಿನಮಣಿರಾವ್ ಅವರು ತಕರಾರು ಸಲ್ಲಿಸಿದ್ದಾರೆ. ಅವರ ದೂರು ಹೀಗಿದೆ: 'ಕ.ಪ್ರ.ದ ಬೈಟು ಕಾಫಿ 'ಓಲಗ' ಅಂಕಣದಲ್ಲಿ, ಮದುವೆ ಇತ್ಯಾದಿ ಶುಭ ಸಮಾರಂಭಗಳ ಭಾವಚಿತ್ರವನ್ನು ಆಗಾಗ ಪ್ರಕಟಿಸುತ್ತಿದ್ದು, ಇವುಗಳಲ್ಲಿ ವಧು ವರರು 'ಅರುಂಧತಿ ನಕ್ಷತ್ರ'ವನ್ನು ನೋಡುತ್ತಿರುವುದು ಎಂಬ ವಿವರಣೆ ನೀಡಿದ ಕೆಲವು ಚಿತ್ರಗಳು ಪ್ರಕಟವಾದ ಬಗ್ಗೆ ನಾನು ನನ್ನ ಆಕ್ಷೇಪಣೆಯನ್ನು ಸಂಪಾದಕರ ಅವಗಾಹನೆಗೆ ತಂದಿದ್ದೆ. ಈ ಬಗ್ಗೆ ಸಂಪಾದಕರು ದಿ. 16.3.14ರ 'ತಪ್ಪಾಯ್ತು ತಿದ್ಕೋಳ್ತೀವಿ' ಅಂಕಣದಲ್ಲಿ ಪ್ರತಿಕ್ರಿಯಿಸಿ ಈ ಬಗ್ಗೆ ಸಂಬಂಧಿಸಿದವರ ಗಮನ ಸೆಳೆಯಲಾಗುವುದು ಎಂದು ಹೇಳಿದ್ದರು.
ಈಗಲೂ ಇದೇ ವಿವರ ನೀಡಿ 'ಅರುಂಧತಿ ನಕ್ಷತ್ರ' ವೀಕ್ಷಣೆ ಬಗ್ಗೆ ಚಿತ್ರಗಳು ಓಲಗ ಅಂಕಣದಲ್ಲಿ ಬರುತ್ತಿವೆ. (ಜುಲೈ 7, 8, 2014). ಆದರೆ ಈಗ ಈ ಚಿತ್ರಗಳಿಗೆ ನೀಡಿದ ವಿವರಣೆಯಲ್ಲಿ ಒಂದು ಜಾಣ್ಮೆಯನ್ನು ತೋರಿಸಿದ್ದಾರೆ. ಅದು ಏನೆಂದರೆ, 'ಶಾಸ್ತ್ರದ ಪ್ರಕಾರ' ಎಂಬ ಪದ ಜೋಡಣೆ. ಅಂದರೆ ಹಗಲಿನಲ್ಲಿ ಅರುಂಧತಿ ನಕ್ಷತ್ರ ಕಂಡು ಬರದಿದ್ದರೂ (ಅದನ್ನು ರಾತ್ರಿಯಲ್ಲಿ ದರ್ಶನ ಮಾಡುವುದು ಶಾಸ್ತ್ರಬದ್ಧ ಸಂಪ್ರದಾಯ) ಕಾಟಾಚಾರಕ್ಕಾಗಿ ಅರುಂಧತಿ ದರ್ಶನ ಹಗಲಿನಲ್ಲಿ ಮಾಡಿಸಿ ಪುರೋಹಿತರು ಕರ್ತವ್ಯಲೋಪ ಮಾಡುತ್ತಿದ್ದಾರೆ. ಪ್ರಚಾರ ಹಾಗೂ ಶೋಕಿಗಾಗಿ ಯಾರೋ ಕಳುಹಿಸಿದ ಚಿತ್ರವನ್ನು ಪ್ರಕಟಿಸಿ, 'ಅರುಂಧತಿ' ನಕ್ಷತ್ರ ದರ್ಶನ ಮಾಡುತ್ತಿರುವುದು, ಪೂಜೆ ಮಾಡುತ್ತಿರುವುದು ಎಂದು ಹೇಳುವುದು ಹಾಸ್ಯಾಸ್ಪದ. ಜುಲೈ 8ರಂದು ಪ್ರಕಟವಾದ ಚಿತ್ರವನ್ನು ನೋಡಿ ನಗಬೇಕೋ ಅಳಬೇಕೋ ಗೊತ್ತಾಗುವುದಿಲ್ಲ. ಅಂದಿನ ಚಿತ್ರದಲ್ಲಿ ವಧು, ವರರಿಬ್ಬರೂ ಕಪ್ಪು ಬಣ್ಣದ ಪ್ಲಾಸ್ಟಿಕ್/ಗಾಜಿನ ಕನ್ನಡಕ ಧರಿಸಿ ಅರುಂಧತಿ ನಕ್ಷತ್ರವನ್ನು ನೋಡುತ್ತಿದ್ದಾರೆ. ಬಿಸಿಲಿನ ಝಳ ತಪ್ಪಿಸಿಕೊಳ್ಳಲು ಓಡಾಡುವವರು ಕನ್ನಡಕ ಧರಿಸುತ್ತಾರೆ. ಆದರೆ ಹಗಲಿನಲ್ಲಿ ಕನ್ನಡಕ ಧರಿಸಿ ಅದ್ಯಾವ 'ಅರುಂಧತಿ ನಕ್ಷತ್ರ'ವನ್ನು ಈ ನವದಂಪತಿ ನೋಡುತ್ತಿದ್ದಾರೋ ಅರ್ಥವಾಗಲಿಲ್ಲ. ಸೂರ್ಯ ಗ್ರಹಣ ನೋಡಲು ಕಪ್ಪು ಗಾಜು ಬಳಕೆ ಸಾಮಾನ್ಯ-ಆದರೆ ನಕ್ಷತ್ರ ನೋಡಲಲ್ಲ.' ಎಂದಿದ್ದಾರೆ.
ಶನಿವಾರದ ಸಂಚಿಕೆಯಲ್ಲಿ ರವೀಂದ್ರ ರೇಷ್ಮೆ ಅವರ ಲೇಖನ ಪ್ರಕಟವಾಗಿತ್ತು. ಎಡಿಟಿಂಗ್ ವೇಳೆಯಲ್ಲಿ ತಪ್ಪೊಂದು ನುಸುಳಿದೆ. ಗುಜರಾತ್ನ 'ಪಂಚತತ್ವ' ನೀತಿಯನ್ನು ಉಲ್ಲೇಖಿಸುತ್ತ ಮೋದಿ- 'ಫಾರಂ-ಫೈಬರ್-ಫ್ಯಾಬ್ರಿಕ್-ಫ್ಯಾಷನ್- ಫಾರೆನ್' ಸೂತ್ರ ಹೇಳಿದ್ದರು ಎಂಬರ್ಥದ ವಾಕ್ಯವೊಂದಿದೆ. ಒಂದು ಫಾಂಟ್ನಿಂದ ಇನ್ನೊಂದಕ್ಕೆ ಪರಿವರ್ತಿಸಿ ತಿದ್ದುಪಡಿ ಮಾಡುವಾಗ ಫ್ಯಾಬ್ರಿಕ್- ಫ್ಯಾಷನ್ಗಳು ಮಿಳಿತಗೊಂಡು 'ಫ್ಯಾಬ್ರಿಕೇಷನ್' ಎಂದಾಗಿಬಿಟ್ಟಿದೆ. ವಾಕ್ಯದ ಅರ್ಥವನ್ನೇ ತಿರುಚಿಬಿಡುವ ಈ ತಪ್ಪು ಓದುಗರ ಅವಗಾಹನೆಗೆ.
ಬೆಳಗಾವಿಯಿಂದ ಸಿದ್ದಲಿಂಗಪ್ಪ ಈಶ್ವರಪ್ಪ ಸಿದ್ದಿಬಾವಿ ಅಭಿಪ್ರಾಯವೊಂದನ್ನು ತಿಳಿಸಿದ್ದಾರೆ. ತಪ್ಪೋ ಸರಿಯೋ ಎಂಬ ಬಗ್ಗೆ ಚರ್ಚಿಸುವುದಕ್ಕೆ ಇಲ್ಲಿ ಅವಕಾಶವಿದೆ. ಅವರು ಬರೆಯುತ್ತಾರೆ- 'ದಿ. 18.6.14 ಪುಟ 8ರಲ್ಲಿ 'ಕಬ್ಬಿಗರ ಅಹೋರಾತ್ರಿ ಧರಣಿ' ಎಂಬ ಶೀರ್ಷಿಕೆಯಡಿಯಲ್ಲಿ ಕಬ್ಬು ಬೆಳೆಗಾರರ ಕುರಿತು ವರದಿ ಪ್ರಕಟವಾಗಿದೆ. ಕನ್ನಡದ ಭಾಷೆಯಲ್ಲಿನ ಅಪರೂಪದ ಶಬ್ದಗಳನ್ನು ಇನ್ನಾವುದೇ ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ. ಕವಿಗಳಿಗೆ ಕಬ್ಬಿಗರು ಎನ್ನುವ ಅತೀ ವಿರಳ ವಿಶಿಷ್ಟವಾದ ಶಬ್ದವಿದೆ. ಇದನ್ನು ಕಬ್ಬು ಬೆಳೆಗಾರರಿಗೆ ಪ್ರಯೋಗಿಸುವುದು ಸಮಂಜಸವೆನಿಸುವುದಿಲ್ಲ. ತಮ್ಮ ಪತ್ರಿಕೆಯ ಹೊಸ ಶಬ್ದಗಳ ಪ್ರಯೋಗಕ್ಕೆ ನಮಗೆಲ್ಲಾ ಹೆಮ್ಮೆ ಇದೆ. (ಉದಾ- ಹತ್ಯಾಚಾರ). ಆದರೆ ಈಗಿನ ಪೀಳಿಗೆಯ ವಿಚಾರಕ್ಕೆ ಬಂದರೆ ಕಬ್ಬಿಗರು ಎಂದರೆ ಕಬ್ಬು ಬೆಳೆಗಾರರು ಎಂಬ ನಿರ್ಧಾರಕ್ಕೆ ಬರುವ ಸಾಧ್ಯತೆಯೇ ಹೆಚ್ಚು. ತಮ್ಮಲ್ಲಿ ಒಂದು ವಿನಂತಿ. ಏನೆಂದರೆ ಯಾವುದೇ ಹೊಸ ಶಬ್ದ ರಚನೆಯ ಮುನ್ನ ಮೂಲ ಶಬ್ದಕ್ಕೆ ಧಕ್ಕೆ ಬರದಂತೆ ಕಾಳಜಿ ವಹಿಸಿ.'
ವಿಶ್ವೇಶ್ವರ ಭಟ್