ವಿದ್ಯಾದೇಗುಲದ ಪಾವಿತ್ರ್ಯ ಕಾಪಾಡಬೇಕಿರುವ ಶಿಕ್ಷಕರ ಅರ್ಹತಾ ಪರೀಕ್ಷೆಯೇ ಅಕ್ರಮವಾಗಿದ್ದರೂ, 'ಏನೂ ಆಗಿಲ್ಲ ಎಂಬಂತೆ' ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ ವರ್ತಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. 'ಮರು ಪರೀಕ್ಷೆ ನಡೆಸುವುದಿಲ್ಲ, ಯಾವುದೇ ಅಭ್ಯರ್ಥಿಗಳಿಂದ ದೂರು ಬಂದಿಲ್ಲ. ಇಲಾಖೆ ಅಧಿಕಾರಿಗಳು ಭಾಗಿಯಾಗಿಲ್ಲ' ಎಂಬ ಸಚಿವರ ಹೇಳಿಕೆಗಳು ಬಾಲಿಶವಾಗಿವೆ. 'ತಮ್ಮ ಅವಧಿಯಲ್ಲಿ ಮರು ಪರೀಕ್ಷೆಯಾಗಿ ಮರ್ಯಾದೆ ಹೋದರೆ ಕಷ್ಟ' ಎಂಬ ಪ್ರತಿಷ್ಠೆಯಲ್ಲಿ ಸಚಿವರು ಈ ಮಾತುಗಳನ್ನು ಹೇಳುತ್ತಿರುವಂತಿದೆ. ಇಲಾಖೆಯ ಅಕ್ರಮವೆಲ್ಲಿ ಬಹಿರಂಗವಾಗಿಬಿಟ್ಟೀತು ಎಂಬ ಆತಂಕದಲ್ಲಿ ಸಚಿವರು ಹಾಗೂ ಜನರನ್ನು ಅಧಿಕಾರಿಗಳು ದಿಕ್ಕು ತಪ್ಪಿಸಲು ಹೊರಟಂತಿದೆ.
ರಾಜ್ಯ ಸರ್ಕಾರ ಮೊದಲ ಬಾರಿಗೆ ಜೂನ್ 2ರಂದು ನಡೆಸಿದ್ದ ಟಿಇಟಿಗೆ ಪರೀಕ್ಷೆ ಸುಮಾರು 3.77 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದಾರೆ. ಸಿಸಿಬಿ ಪೊಲೀಸರು ಹೇಳುವ ಪ್ರಕಾರ 7 ಜಿಲ್ಲೆಗಳಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹಂಚಿಕೆಯಾಗಿದೆ. ಇವತ್ತಿನ ಸಾಮಾಜಿಕ ತಾಣಗಳ ಜಾಲದಲ್ಲಿ ಅದೆಷ್ಟು ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ತಲುಪಿದೆ ಎಂದು ಅಂದಾಜಿಸಲು ಸಾಧ್ಯವಿಲ್ಲ. ಆದರೆ ಈ ಸಂದರ್ಭದಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳೇ ಬಂದು ದೂರು ನೀಡಲಿ ಎಂದು ನಿರೀಕ್ಷಿಸುವುದು ಎಷ್ಟರ ಮಟ್ಟಿಗೆ ಸರಿ? ಯಾವುದಾದರೂ ಅಭ್ಯರ್ಥಿ ಬಂದು 'ತಾನು ಪರೀಕ್ಷೆಯಲ್ಲಿ ಅಕ್ರಮ ಮಾಡಿದ್ದೇನೆ' ಹೇಳಿಕೊಳ್ಳಲು ಸಾಧ್ಯವಿದೆಯೇ?
ಸಚಿವರು ಶುದ್ಧ ಚಾರಿತ್ರ್ಯ ಹೊಂದಿದ ರಾಜಕಾರಣಿ ಎಂದು ಇಲಾಖೆ ವ್ಯಾಪ್ತಿಗೆ ಬರುವ ಪ್ರತಿಯೊಬ್ಬರೂ ಸತ್ಯ ಹರಿಶ್ಚಂದ್ರರಾಗಿರುತ್ತಾರೆ ಎಂದು ನಂಬುವುದು ಮೂರ್ಖತನವಾಗುತ್ತದೆ. ಆದರೆ ಇಂತಹ ಪ್ರಾಮಾಣಿಕ ನಿರೀಕ್ಷೆ ಹಾಗೂ ಅಂತೆ-ಕಂತೆಗಳ ನೆಪ ಹೇಳಿಕೊಂಡು ಪರೀಕ್ಷಾ ವ್ಯವಸ್ಥೆಯನ್ನೇ ಅಧೋಗತಿಗೆ ತರಲು ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಣ ಸಚಿವರಾಗಿ ಇಲಾಖೆಯಲ್ಲಿನ ಎಲ್ಲ ತಪ್ಪುಗಳನ್ನು ಸಮರ್ಥಿಸಿಕೊಳ್ಳಬೇಕೆಂದಿಲ್ಲ. ಆಗಿರುವ ತಪ್ಪು ಒಪ್ಪಿಕೊಂಡು ಪರಿಹಾರ ಮಾರ್ಗ ಕಂಡುಕೊಂಡರೆ ಅವರದೇ ಗೌರವ ಹೆಚ್ಚುತ್ತದೆ. ಶಿವಕುಮಾರ್ ಎಂಬ ಆರೋಪಿ ಪ್ರತಿವರ್ಷ ಪ್ರಶ್ನೆ ಪತ್ರಿಕೆ ಬಹಿರಂಗ ಮಾಡುತ್ತಿರುವುದನ್ನು ಗಮನಿಸಿದರೆ ಪ್ರಾಮಾಣಿಕ ಸಚಿವರು ಭ್ರಷ್ಟ ಅಧಿಕಾರಿಗಳಿಂದ ದಾರಿತಪ್ಪುತ್ತಿದ್ದಾರೆಯೇ ಎಂಬ ಅನುಮಾನ ಕಾಡುತ್ತದೆ.
ಒಂದೊಮ್ಮೆ ಸರ್ಕಾರ ಪ್ರತಿಷ್ಠೆಗೆ ಬಿದ್ದು ತನ್ನ ನಿರ್ಧಾರಕ್ಕೆ ಅಂಟಿಕೊಂಡರೆ ವಿದ್ಯಾರ್ಥಿ ಸಮುದಾಯಕ್ಕೆ ತಲುಪುವ ಸಂದೇಶದ ಬಗ್ಗೆ ಒಮ್ಮೆ ಆಲೋಚಿಸಬೇಕಿದೆ. ದುಡ್ಡಿರುವ ಹಾಗೂ ಪ್ರಭಾವಿ ಅಭ್ಯರ್ಥಿಗಳು ಸರ್ಕಾರ ಹಾಗೂ ವ್ಯವಸ್ಥೆಯೊಂದಿಗೆ ವ್ಯವಹಾರ ನಡೆಸಿ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ಗಳಿಸಲು ಸಾಧ್ಯವಿದೆ ಎಂಬ ಸಾರ್ವಜನಿಕ ಅಭಿಪ್ರಾಯ ಮೂಡುತ್ತದೆ. ಭವಿಷ್ಯದಲ್ಲಿಯೂ ಸರ್ಕಾರದ ಧೋರಣೆ ಹೀಗೆಯೇ ಮುಂದುವರಿದರೆ ಇನ್ನುಷ್ಟು ಭ್ರಷ್ಟ ಅಭ್ಯರ್ಥಿಗಳು ವ್ಯವಸ್ಥೆಯಲ್ಲಿ ಸೇರಿಕೊಳ್ಳುತ್ತಾರೆ. ಶಿಕ್ಷಕರ ಆಯ್ಕೆಯೇ ಪ್ರಾಮಾಣಿಕವಾಗಿಲ್ಲದಿದ್ದಲ್ಲಿ ಆಯ್ಕೆಯಾದ ಶಿಕ್ಷಕರಿಂದ ಪ್ರಾಮಾಣಿಕ ಸೇವೆ ನಿರೀಕ್ಷಿಸುವುದು ತಪ್ಪಾಗಬಹುದು.
ವಿಧಾನ ಪರಿಷತ್ನಲ್ಲಿ ರಾಜ್ಯ ಸರ್ಕಾರ ಗುರುವಾರ ನೀಡಿರುವ ಉತ್ತರ ಬೇಜವಾಬ್ದಾರಿಯ ಪರಮಾವಧಿಯಂತಿದೆ. ಇಲಾಖೆ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಸಾರಾಸಗಟಾಗಿ ಸಚಿವರು ಹೇಳುತ್ತಿದ್ದಾರೆ. ಆದರೆ ಸಿಸಿಬಿ ಬೆಂಗಳೂರು ಪೊಲೀಸರ ಪ್ರಕಾರ ಶಿಕ್ಷಣ ಇಲಾಖೆಯ ನಿರ್ದೇಶಕರೇ ಅಕ್ರಮದಲ್ಲಿ ಬಾಗಿಯಾಗಿದ್ದಾರೆ. ಒಬ್ಬ ನಿರ್ದೇಶಕ ಅಕ್ರಮದಲ್ಲಿ ಭಾಗಿಯಾಗಿದ್ದಾನೆ ಎಂದು ಯಾವುದೇ ಪೊಲೀಸ್ ಅಧಿಕಾರಿ ಬಾಯಿತಪ್ಪಿ ಹೇಳಲು ಸಾಧ್ಯವಿಲ್ಲ. ಇಡೀ ಪ್ರಕರಣದ ಬಗ್ಗೆ ಸಿಸಿಬಿ ಮತ್ತು ಶಿಕ್ಷಣ ಸಚಿವರ ಹೇಳಿಕೆಗಳು ತಾಳೆಯಾಗುತ್ತಿಲ್ಲ. ಇದು ಪ್ರಕರಣದ ಬಗ್ಗೆ ಇನ್ನಷ್ಟು ಅನುಮಾನ ಮೂಡಲು ಕಾರಣವಾಗುತ್ತದೆ.
ಆದ್ದರಿಂದ ಮರು ಪರೀಕ್ಷೆ ನಡೆಸುವುದರಿಂದ 3.77 ಲಕ್ಷ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ ಹಾಗೂ ಅಧಿಕಾರಿಗಳು ಮತ್ತೆ ಪರೀಕ್ಷೆ ನಡೆಸಬೇಕು ಎಂಬ ಸಚಿವರ ವಾದಕ್ಕೆ ಅರ್ಥವಿಲ್ಲ. ಸರ್ಕಾರದ ನಿರ್ಲಕ್ಷ್ಯಕ್ಕೆ ಅಭ್ಯರ್ಥಿಗಳು ಕಷ್ಟ ಅನುಭವಿಸಬೇಕಾಗಿದೆ. ಆಯ್ಕೆ ಪ್ರಕ್ರಿಯೆ ಪಾರದರ್ಶಕ ಮತ್ತು ಪ್ರಾಮಾಣಿಕವಾಗಿರಲು ಇದು ಅನಿವಾರ್ಯ. ಮರು ಪರೀಕ್ಷೆ ನಡೆಸುವುದರಿಂದ ಉಳಿದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ ಎಂಬ ನೆಪದಲ್ಲಿ ಭ್ರಷ್ಟರಿಗೆ ಮಣೆ ಹಾಕುವುದು ದೊಡ್ಡದೊಂದು ಅಪಾಯ ಮೈಮೇಲೆ ಎಳೆದುಕೊಂಡಂತಾಗುತ್ತದೆ. ಇವೆಲ್ಲವಕ್ಕೂ ಪರಿಹಾರ ಕಂಡುಕೊಂಡು ಸರ್ಕಾರ ಮುಂದಡಿ ಇಡಬೇಕು. ದಿಟ್ಟ ನಿರ್ಧಾರದಿಂದ ಸ್ಪಷ್ಟ ಸಂದೇಶ ರವಾನಿಸುವ ಅಗತ್ಯವಿದೆ.