ಸಂತ್ರಸ್ತ ಮಹಿಳೆಯರಿಗೆ ನ್ಯಾಯದಾನ ಹಾಗೂ ರಕ್ಷಣೆಗೆ ಸರ್ಕಾರ ರೂಪಿಸಿರುವ ವರದಕ್ಷಿಣೆ ನಿಷೇಧ ಕಾಯಿದೆ, ಈಚಿನ ವರ್ಷಗಳ ಅತ್ಯಂತ ಪರಿಣಾಮಕಾರಿ ಸಾಮಾಜಿಕ ನ್ಯಾಯ ವಿತರಣೆಯ ಕಾಯಿದೆ ಎನ್ನಬಹುದು. ಆದರೆ ಆ ಕಾಯಿದೆಯ ಹಲವು ವಿಧಿ-ನಿಯಮಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ವಿಚಾರದಲ್ಲಿ ಸರ್ಕಾರಕ್ಕೆ ಬೇಕಾದಷ್ಟು ದೂರುಗಳು ಬಂದಿವೆ.
ಕೇವಲ ದೂರಿನ ಆಧಾರದ ಮೇಲೇ ದೂರಿಗೆ ಗುರಿಯಾದವರನ್ನು ಬಂಧಿಸುವುದರ ವಿರುದ್ಧ ಸುಪ್ರೀಂಕೋರ್ಟ್ನ ತೀರ್ಪಿನ ಹಿನ್ನೆಲೆಯಲ್ಲಿ ಈಗ ಆರೋಗ್ಯಕರವಾದ ಮರು ಚಿಂತನೆ ನಡೆದಿದೆ. ನಿಜ. ವರದಕ್ಷಿಣೆಗೆ ಹಿಂಸೆಪಡಿಸಿದ ಪ್ರಕರಣಗಳಲ್ಲಿ ಆರೋಪ ಋಜುವಾತಾದರೆ ಕಠಿಣ ಶಿಕ್ಷೆ ಆಗಲೇಬೇಕು. ಆದರೆ ಆ ವಿಚಾರದಲ್ಲಿ ಪೂರ್ವಭಾವಿ ವಿಚಾರಣೆ ಅಗತ್ಯ ಎನ್ನುವುದನ್ನು ಈಗ ಅನೇಕರು ಒಪ್ಪಿಕೊಂಡಿದ್ದಾರೆ.
ಅದರ ತರ್ಕಬದ್ಧ ಮುಂದಿನ ಹೆಜ್ಜೆ ಎಂದರೆ, ಪುರುಷರಂತೆಯೇ ಸ್ತ್ರೀಯರೂ ಈಗಿನ ಕಠಿಣ ಕಾಯಿದೆಯ ನಿಯಮಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಸಾಧ್ಯತೆ - ಸಂಭವವೂ ಇದೆ ಎನ್ನುವುದನ್ನು ಮನಗಾಣುವುದು.
ಈಗ ಕೇಂದ್ರ ಸರ್ಕಾರದ ಉನ್ನತ ವಲಯಗಳಲ್ಲಿ ಅಂತಹ ಚಿಂತನೆ ನಡೆದಿರುವುದು ಒಳ್ಳೆಯದೇ. ಮನೆಯ ಸೊಸೆ ದುರುದ್ದೇಶದಿಂದ ಗಂಡ, ಅತ್ತೆ-ಸೊಸೆ, ಮೈದುನ-ನಾದಿನಿಯರ ವಿರುದ್ಧ ದೂರು ನೀಡಿ ಅವರನ್ನು ಗೋಳು ಗುಟ್ಟಿಸುವುದನ್ನು ತಡೆಗಟ್ಟಲು, ಅಂತಹ ದುರುದ್ದೇಶಪೂರಿತ ದೂರುಗಳನ್ನು ನೀಡಿದ್ದು ಸಾಬೀತಾದರೆ ಅವರಿಗೂ ಶಿಕ್ಷೆ ವಿಧಿಸಬೇಕೆನ್ನುವ ನಿಯಮವನ್ನು ಅಳವಡಿಸುವುದು ಬದಲಾದ ಸನ್ನಿವೇಶದಲ್ಲಿ ಸೂಕ್ತವಾದ ಕ್ರಮ.
ಅಂದರೆ ವರದಕ್ಷಿಣೆಗಾಗಿ ಹಿಂಸೆಪಡಿಸುವ ಪ್ರವೃತ್ತಿಯನ್ನು ಬೆಂಬಲಿಸಿದಂತೇನೂ ಆಗುವುದಿಲ್ಲ. ಆ ಶಾಸನದ ಉದ್ದೇಶ ನ್ಯಾಯವಾದ ರೀತಿಯಲ್ಲಿ ಜಾರಿಗೆ ಬರಬೇಕು ಎನ್ನುವುದೇ ನಿಜವಾದ ಉದ್ದೇಶ.