ಆಕೆಯ ನಿರ್ಧಾರ ಅನೇಕರ ಜೀವ ಉಳಿಸಿತು

ಜೀವನದಲ್ಲಿ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳು ಒಮ್ಮೊಮ್ಮೆ ವ್ಯಕ್ತಿಯ ಜೀವನ ಗತಿಯನ್ನೇ ಬದಲಿಸಬಹುದು. ಅಂತಹ ಒಂದು ಘಟನೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನಲ್ಲಿ 1902ರಲ್ಲಿ ನಡೆಯಿತು. ಎಲಿಜಬೆತ್ ಕೆನಿ ಎಂಬ ಶ್ರೀಮಂತ ಕುಟುಂಬದ ಯುವತಿ ಬೆಲೆಬಾಳುವ ತನ್ನ ಕುದುರೆಯೇರಿ ವನವಿಹಾರಕ್ಕೆ ಹೊರಟಿದ್ದಳು. ಅಲ್ಲಿ ಸಮೀಪದ ಗುಡಿಸಲೊಂದರಲ್ಲಿ ಅಳುವ ಧ್ವನಿಯನ್ನು ಕೇಳಿ, ಅಲ್ಲಿಗೆ ಹೋಗಿ ನೊಡಿದಾಗ, ಅಲ್ಲಿ ಆರು ಆದಿವಾಸಿ ಮಕ್ಕಳು ಜ್ವರದಿಂದ ನರಳುತ್ತಾ ಬೊಬ್ಬಿರಿದು ಅಳುತ್ತಿದ್ದವು. ಮೂಲೆಯೊಂದರಲ್ಲಿ ಮುದುಕಿಯೊಬ್ಬಳು ಕೆಮ್ಮುತ್ತಾ ನರಳುತ್ತಾ ಅಸಹಾಯಕವಾಗಿ ನೋಡುತ್ತಾ ಕುಳಿತಿದ್ದಳು. ವಿಚಾರಿಸಿದಾಗ ಆ ಮಕ್ಕಳ ತಂದೆ ತಾಯಿ ಇಬ್ಬರೂ ರೋಗಕ್ಕೆ ಗುರಿಯಾಗಿ ಮರಣಿಸಿದರೆಂದೂ, ಆ ಮುದುಕಿ ಕ್ಷಯರೋಗದಿಂದ ಮತ್ತು ಮಕ್ಕಳಲ್ಲಿ ನಾಲ್ಕು ಮಕ್ಕಳು ಪಾರ್ಶ್ವವಾಯುವಿನಿಂದ ನರಳುತ್ತಿರುವುದಾಗಿ ತಿಳಿದು ಮೃದು ಹೃದಯದ ಕೆನಿಯ ಕಣ್ಣುಗಳಲ್ಲಿ ನೀರಾಡಿತು. ತನ್ನ ಜೀವನ ಇನ್ನು ಮುಂದೆ ಇಂತಹ ಅಸಹಾಯಕರ ಸೇವೆಗೆ ಮೀಸಲಿರಬೇಕೆಂದು  ಆಕೆ ಆಗಲೇ ನಿರ್ಧರಿಸಿದಳು! ತಕ್ಷಣ ಒಬ್ಬ ವ್ಯೆದ್ಯನನ್ನು ಕರೆಸಿ ಅವರಿಗೆ ವೈದ್ಯೋಪಚಾರ ನಡೆಸಿ, ನೆರವಾದಳು. ಪದವೀಧರೆಯಾದ ಆಕೆ ದಾದಿಯರ ಶಿಕ್ಷಣ ಪಡೆದು, ಲಕ್ವ ಹೊಡೆದವರ ಸೇವೆಗೆ ನಿಂತಳು. ಮೊದಲ ವಿಶ್ವ ಸಮರದಲ್ಲಿ ಸ್ವಯಂ ಸೇವಕಳಾಗಿ, ಆಸ್ಟ್ರೇಲಿಯಾ ಸೈನ್ಯಕ್ಕೆ ಸೇವೆ ಸಲ್ಲಿಸಿ ಅನೇಕ ಗಾಯಾಳು ಸೈನಿಕರ ಸೇವೆಯನ್ನು ನಿಷ್ಠೆಯಿಂದ ಮಾಡಿದಳು. ಆಗ ಆಕೆಗೆ ಸೈನ್ಯದಲ್ಲಿ ವಿಶಿಷ್ಟ ಸ್ಥಾನ ನೀಡಿ ಗೌರವಿಸಲಾಯಿತು. ಯುದ್ಧ ಮುಗಿದ ಮೇಲೆ ಪಾರ್ಶ್ವವಾಯು ಪೀಡಿತರ ಸೇವೆಗೆ ನಿಂತಳು. ಸರ್ಕಾರ ಕೂಡ ಆಕೆಯ ಸೇವೆಯನ್ನು ಮಾನ್ಯ ಮಾಡಿತಲ್ಲದೆ ಎಲ್ಲ ನೆರವನ್ನೂ ನೀಡಿತು. ದೇಶಾದ್ಯಂತ ಕೆನಿಯ ಕ್ಲಿನಿಕ್‌ಗಳು ತೆರೆಯಲ್ಪಟ್ಟು ಅನೇಕರು ಅವುಗಳ ಸೇವೆ ಪಡೆಯಲಾರಂಭಿಸಿದರು. 1940ರಲ್ಲಿ ಅಮೆರಿಕೆಗೆ ಬಂದ ಕೆನಿ ಅಲ್ಲಿಯ ಮಿನೆಸೋಟಾ ವ್ಯೆದ್ಯಕೀಯ ಶಾಲೆ ಮತ್ತು ಆಸ್ಪತ್ರೆಯೊಂದರಲ್ಲಿ ತಾನೇ ಸಂಶೋಧಿಸಿ ಅನುಸರಿಸುತ್ತಿದ್ದ ಚಿಕಿತ್ಸಾ ಕ್ರಮವನ್ನು ವಿವರಿಸಿದಳು. ಮೊದಮೊದಲು ಅದನ್ನು ಟೀಕೆ ಮಾಡಿದ ವೈದ್ಯರೇ ಕೊನೆಗೆ ಅದರ ಯಶಸ್ಸನ್ನು ಕಂಡು ಒಪ್ಪಿಕೊಳ್ಳಬೇಕಾಯಿತು. ಇದರ ಪರಿಣಾಮವಾಗಿ ಅಲ್ಲಿ ಎಲಿಜಬೆತ್ ಕೆನಿ ಎಂಬ ಚಿಕಿತ್ಸಾ ಕೇಂದ್ರ ಪ್ರಾರಂಭವಾಯಿತು. ನಂತರ ಅಮೆರಿಕದ ಹಲವೆಡೆ ಇಂತಹ ಚಿಕಿತ್ಸೆ ನೀಡುವ ಕೇಂದ್ರಗಳು ತಲೆಯೆತ್ತಿಆಕೆಗೆ ಹೆಸರು ತಂದವು. ಇಡೀ ವಿಶ್ವದ ದೀನ ದಲಿತರ ಮತ್ತು ರೋಗಿಗಳ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟ ಎಲಿಜಬೆತ್ ಕೊನೆಯವರೆಗೂ ಅವಿವಾಹಿತಳಾಗಿಯೇ ಉಳಿದಳು.

-ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com