ಅನಾಮಿಕ ಓದುಗರೊಬ್ಬರು ಪತ್ರ ಬರೆದಿದ್ದಾರೆ. ಅವರು ಅವರ ಹೆಸರನ್ನು 'ಅನಾಮಿಕ' ಎಂದೇ ಬರೆದುಕೊಂಡಿದ್ದಾರೆ. ಅವರು ಬರೆಯುತ್ತಾರೆ- 'ಜೂ.17ರಂದು ಸುದ್ದಿ ಓದಿದಾಗ ಖುಷಿ, ದುಃಖ, ಆಶ್ಚರ್ಯ ಉಂಟಾದವು. ನೀವು ಶಾಸಕರ ಹಾಜರಿ, ಪ್ರಶ್ನೆ ಕೇಳುವಿಕೆ, ಕೇಳದಿರುವಿಕೆಯ ಬಗ್ಗೆ ಭರ್ತಿ ಒಂದು ಪೇಜ್ ಬರೆದಿದ್ದೀರಿ. ಬಾಳ ಚಲೋ ಬರ್ದೀರಿ.'
'ಆದರೆ ಒಂದು ತಪ್ಪು ಬರ್ದೀರಿ. ದಯವಿಟ್ಟು ತಿದ್ಕೋಳಿ. ಹುನಗುಂದ ತಾಲ್ಲೂಕು ಇಡೀ ಬಾಗಲಕೋಟೆ ಜಿಲ್ಲೆಯಲ್ಲಿಯೇ ಹಿಂದುಳಿದ ತಾಲ್ಲೂಕು ಮತಕ್ಷೇತ್ರವಾಗಿದೆ. ಆದರೆ ಹಾಜರಿ ಅದರಲ್ಲೂ 100ರ್ ರಷ್ಟು ಹಾಜರಿ ಇದೆ ಅಂತ ತಿಳಿದು ಖುಷಿಯಾಯ್ತು. ನಾಡಿನ ಪ್ರಖ್ಯಾತ ಪತ್ರಿಕೆಯಾದ 'ಕನ್ನಡಪ್ರಭ'ಕ್ಕೆ ಒಬ್ಬ ಹಾಲಿ ಜನಪ್ರಿಯ ಶಾಸಕರ ಹೆಸರು ತಿಳಿದಿಲ್ಲದಿರುವುದು ದುಃಖ ತಂದಿತು.'
'ನಮ್ಮ ಶಾಸಕರು ವಿಜಯಾನಂದ ಶಿವಶಂಕರಪ್ಪ ಕಾಶಪ್ಪ ನವರು. ಶಾಸಕರು ಹುನಗುಂದ ಮತ ಕ್ಷೇತ್ರ. ದಯವಿಟ್ಟು ಮುಂದೆ ಯಾವುದೇ ಸುದ್ದಿ ಇದ್ದರೆ ಇವರ ಹೆಸರನ್ನೇ ಬರೆಯಿರಿ. ಸತ್ತು ಹೋಗಿರುವ ಖ್ಯಾತ ಮಂತ್ರಿ, ಉ.ಕ.ದ ಹುಲಿ ಲಿಂ ಶಿವಶಂಕ್ರಪ್ಪ ಕಾಶಪ್ಪನವರು. ಅವರು ಹೇಗೆ ಸದನಕ್ಕೆ ಬಂದರು. ಅವರು ಇರೋದು ಸ್ವರ್ಗದಲ್ಲಿ. ಬರೆಯುವಾಗ ಇದ್ದೋರು, ಸತ್ತೋರು, ಹಾಲಿ-ಮಾಜಿಗಳ ಸ್ವಲ್ಪ ವಿಚಾರ ಮಾಡಿ ಬರೀರಿ. ಸತ್ತೋರನ್ನೆಲ್ಲ ಸದನಕ್ಕೆ ತಂದು ಕುಂಡ್ರಸಬ್ಯಾಡ್ರೀ.'
'ಮೋದಿ ಪ್ರಧಾನಿ ಆಗುವಾಗ- ಭಾರತ ಮಾತೆ ಸೇವೆ ಮಾಡೋ ಅವಕಾಶ ಕೊಡಿ ಅಂತೆಲ್ಲ ಬರ್ದಿದ್ದೀರಿ. ಆದರೆ 100 ದಿನದ ಸರ್ಕಾರದ ಸಂಭ್ರಮಾಚರಣೆಗೆ ಹನಿಮೂನ್ ಅಂತೆಲ್ಲ ಬರೆದಿರಿ. ಇದು ನಿಮಗೆ ಸರಿ ಕಾಣುತ್ತಾ?' ಎಂದಿದ್ದಾರೆ.
'ಭಾರತ ಮಾತೆ ಸೇವೆಗೆ ಅವಕಾಶ ಕೊಡಿ' ಅಂತ ಮೋದಿ ಹೇಳಿದ್ದನ್ನು ನಾವು ಬರೆದಿದ್ದೆವೇ ಹೊರತು, ಅವರು ಭಾರತ ಮಾತೆ ಸೇವೆ ಮಾಡುತ್ತಾರೆ ಅಂತ ನಾವೇ ಬರೆದಿರಲಿಲ್ಲ.
ಚಿತ್ರದುರ್ಗದಿಂದ ಚನ್ನಬಸವ ಪುತ್ತೂರು ಅವರು ಬರೆಯುತ್ತಾರೆ- 'ಜೂ.25ರ ಸಂಚಿಕೆಯ ಪುಟ 8ರಲ್ಲಿ 'ಧೋನಿ ವಿರುದ್ಧ ಬಂಧನ ವಾರಂಟ್!' ಎಂಬ ಪ್ರಯೋಗದ ಬಗ್ಗೆ ಅನಿಸಿಕೆ-ವ್ಯಕ್ತಿಯ ವಿರುದ್ಧ ಅಥವಾ ಪರವಾಗಿ ಬಂಧನಕ್ಕೆ ವಾರಂಟ್ ಹೊರಡಿಸುವುದಿಲ್ಲ ಅಲ್ಲವೆ? ಹಾಗಾಗಿ ಅದು ಧೋನಿಗೆ ಬಂಧನ ವಾರಂಟ್ ಎಂದರಷ್ಟೇ ಸಾಕಾಗುತ್ತಿತ್ತೇನೋ.'
'ಇನ್ನೊಂದು ವಿಚಾರ. ಮುಖಪುಟದಲ್ಲಿ 'ಸೀಮೆಎಣ್ಣೆ ಪ್ರತಿ ಲೀ.ಗೆ...' ಎಂಬುದು ಪ್ರತಿ ಎಂಬುದನ್ನು ಸಾಮಾನ್ಯವಾಗಿ ಈ್ಟಠಣ ಎಂಬುದಕ್ಕೆ ಬಳಸುವುದು ವಾಡಿಕೆ. ಇಲ್ಲಿ ವಾಸ್ತವದಲ್ಲಿ ಜಝ್ಛ ಅಥವಾ 'ಪ್ರತೀ ಒಂದು ಲೀಟರ್ಗೆ' ಅಥವಾ 'ಪ್ರತೀ ತಿಂಗಳೂ' ಎಂಬ ಅರ್ಥ ಬರುವುದರಿಂದ ಅಂಥ ಸಂದರ್ಭದಲ್ಲಿ 'ಪ್ರತಿ'ಯ ಬದಲಾಗಿ 'ಪ್ರತೀ' ಎಂಬ ಪದವನ್ನು ಬಳಸುವುದೇ ಸೂಕ್ತವಲ್ಲವೆ? ಹೊಸಪದ ಬಳಸೋಣ. ಆದರೆ ಅದು ವ್ಯಾಕರಣ-ಅರ್ಥಬದ್ಧವಾಗಿರಲೆಂದು ಆಶಿಸೋಣ' ಎಂದಿದ್ದಾರೆ.
-ವಿಶ್ವೇಶ್ವರ ಭಟ್