ರಾಯಚೂರು ಜಿಲ್ಲೆ ಮಾನ್ವಿಯಿಂದ ಅಂಬಮ್ಮ ಪ್ರತಾಪಸಿಂಗ್ ಅವರು ಬರೆಯುತ್ತಾರೆ- 'ಜು.17ರಂದು ಪತ್ರಿಕೆಯ 'ಬೈಟು ಕಾಫಿ' ಪುರವಣಿಯಲ್ಲಿ 'ಸರ್ವೆ ನಂಬರ್' ಅಂಕಣದಲ್ಲಿ 'ಶೇ.54ರಷ್ಟು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ' ಇದರ ಬಗ್ಗೆ ತಿಳಿಸಲಾಗಿದೆ.'
'ವಿವರಣೆಯಲ್ಲಿ 'ಶೇ.50ರಷ್ಟು ಮಕ್ಕಳು ತೀರಾ ಪರಿಚಿತರಿಂದಲೇ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. 5-12 ವರ್ಷದವರ ಸಂಖ್ಯೆ ಹೆಚ್ಚು. ಈ ವಿಷಯದಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನ ಕಾಯ್ದುಕೊಂಡಿದೆ' ಎಂದು ಬರೆಯಲಾಗಿದೆ. ಇಂತಹ
ವಿಚಾರಗಳಿಗೆ 'ಮೊದಲ ಸ್ಥಾನ ಕಾಯ್ದುಕೊಂಡಿದೆ' ಎಂದು ಬರೆಯುವುದು ತಪ್ಪು ಎಂದು ನನ್ನ ಅಭಿಪ್ರಾಯ. ಈ ವಿಷಯದಲ್ಲಿ ವಿಶ್ವದಲ್ಲೇ ಭಾರತ ಮೊದಲ ಸ್ಥಾನ ಹೊಂದಿರುವುದು ವಿಷಾದಕರ ಎಂದು ಬರೆದಿದ್ದರೆ ಸೂಕ್ತವಾಗುತ್ತಿತ್ತು.'
'ಒಳ್ಳೆಯ ಕೆಲಸಗಳಿಗೆ 'ಮೊದಲ ಸ್ಥಾನ ಕಾಯ್ದುಕೊಂಡಿದೆ' ಎಂದಿದ್ದರೆ ಸೂಕ್ತವಾಗುತ್ತದೆ. ಆದರೆ ಕೆಟ್ಟ ವಿಚಾರಗಳಿಗೆ ಈ ಪದ ಬಳಸುವುದು ಸೂಕ್ತವಲ್ಲ' ಎಂದಿದ್ದಾರೆ.
ಶಿಕಾರಿಪುರದಿಂದ ಆರ್.ಸಿ. ಪರಶುರಾಮ ಅವರು ಬರೆಯುತ್ತಾರೆ- 'ಜು.20ರ 'ಕನ್ನಡಪ್ರಭ'ದ ಶಿವಮೊಗ್ಗ ಆವೃತ್ತಿಯ ಪುಟ 3ರಲ್ಲಿ 'ಜೈಲು ಸ್ಥಳಾಂತರ ಒಪ್ಪದ ಸರ್ಕಾರ' ಎಂಬ ಸುದ್ದಿಯಲ್ಲಿನ ಪ್ರಮುಖ 3ನೇ ಅಂಶದಲ್ಲಿ "ಹಾಲಿ ಶಿಕ್ಷಿತರು', ವಿಚಾರಣಾಧೀನರು ಸೇರಿ ಒಟ್ಟು 195 ಕೈದಿಗಳು' ಎಂದಿದೆ.'
'ನಾವು ಸಾಮಾನ್ಯವಾಗಿ ಶಿಕ್ಷಣ ಪಡೆದವರು ಎನ್ನುವುದಕ್ಕೆ ಶಿಕ್ಷಿತರು ಎಂದೂ, ಉತ್ತಮ ಶಿಕ್ಷಣ ಪಡೆದವರನ್ನು 'ಸುಶಿಕ್ಷಿತರು' ಎನ್ನುವ ಪದಗಳನ್ನು ಬಳಸುತ್ತೇವೆ. ಹೀಗಾಗಿ ಅಪರಾಧ ಮಾಡಿ ಶಿಕ್ಷೆಗೊಳಗಾದವರನ್ನು 'ಶಿಕ್ಷಿತರು' ಎನ್ನುವುದಕ್ಕಿಂತ 'ಅಪರಾಧಿಗಳು' ಎನ್ನುವುದು ಸೂಕ್ತ.'
'ಪುಟ 10ರಲ್ಲಿ 'ನವದಂಪತಿಗಿಲ್ಲ ಶಯನಗೃಹ' ಎಂಬ ಸುದ್ದಿಯಲ್ಲಿನ 2ನೇ ಪ್ಯಾರಾದಲ್ಲಿ 'ಜನತೆ ಇನ್ನೂ ಹಿಂದಿಳಿದಿದ್ದಾರೆ' ಎಂದಿದೆ. ಇದು 'ಹಿಂದುಳಿದಿದ್ದಾರೆ' ಎಂದಾಗಬೇಕಿತ್ತು. 3ನೇ ಪ್ಯಾರಾದಲ್ಲಿ 'ಇರುವ ಒಂದೇ ಕೋಣೆ ಬೇಕಾದಾಗ 'ಅಡುಮೆ' ಮನೆಯಾದರೆ ಎಂದಿದೆ. ಇದು 'ಇರುವ ಒಂದೇ ಕೋಣೆ ಬೇಕಾದಾಗ ಅಡುಗೆ ಮನೆಯಾದರೆ' ಎಂದಾಗಬೇಕಿತ್ತು.'
'ಜು.19ರ 'ಕನ್ನಡಪ್ರಭ' ಶಿವಮೊಗ್ಗ ಆವೃತ್ತಿಯ ಪುಟ 2ರಲ್ಲಿ 'ಕೀಟಬಾಧೆ ಪ್ರದೇಶಕ್ಕೆ ವಿದ್ಯಾರ್ಥಿಗಳ ಭೇಟಿ' ಎಂಬ ಸುದ್ದಿಯ 3ನೇ ಪ್ಯಾರಾದಲ್ಲಿ 'ಹುಳುಗಳು ಆವರಿಸಿರುವ ಮರಗಳ ಟೊಂಗೆಗಳು ಭಾರದಿಂದ ಮುರಿದುಬೀಳುವ ಹಂತ ತಲುಪಿದ್ದು' ಎಂದಿದೆ. ಮರಗಳಿಗೆ ಹುಳು ಹಿಡಿದರೆ ಅದರ ಟೊಂಗೆಗಳು ಟೊಳ್ಳಾಗಿ ಮುರಿದು ಬೀಳುತ್ತವೆಯೇ ವಿನಾ ಭಾರವಾಗಿ ಮುರಿದು ಬೀಳುವುದಿಲ್ಲ.'
'ಪುಟ 3ರಲ್ಲಿ 'ಕೈಗೆ ಬಯಸದೇ ಬಂದ ಭಾಗ್ಯ' ಎಂಬ ಸುದ್ದಿಯ ಕೊನೆಯಲ್ಲಿ 'ಜಿಲ್ಲಾ ಪಂಚಾಯಿತಿ ಸಿಇಒ ಸಸಿಕಾಂತ ಸೆಂಥಿಲ್ ಹಾಜರಿದ್ದರು' ಎಂದಿದೆ. ಇದರಲ್ಲಿ 'ಸಸಿಕಾಂತ' ಎಂಬುದು 'ಶಶಿಕಾಂತ' ಎಂದಾಗಬೇಕಿತ್ತು' ಎಂದಿದ್ದಾರೆ.
-ವಿಶ್ವೇಶ್ವರ ಭಟ್