ಜೆರ್ಮಿ ಬೆಂಥಮ್ ಒಬ್ಬ ಬ್ರಿಟಿಷ್ ತತ್ವಜ್ಞಾನಿಯಾಗಿ, ಸಮಾಜಸುಧಾರಕನಾಗಿ ಹೆಸರು ಗಳಿಸಿದ್ದಾನೆ. ಮಾನವನಿಗೆ ಆಹಾರವಾಗಿ, ವ್ಯೆದ್ಯಕೀಯ ಸಂಶೋಧನೆಯಲ್ಲಿ ಬಳಕೆಯಾಗುವ ಪ್ರಾಣಿಗಳ ಬಗ್ಗೆ ಅವನಿಗೆ ಅಪಾರ ಕನಿಕರ. ಬೆಂಥಮ್ ತನ್ನ ಐದನೇ ವಯಸ್ಸಿನಲ್ಲಿಯೇ ಲ್ಯಾಟಿನ್, ಗ್ರೀಕ್, ಫ್ರೆಂಚ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಲೀಲಾಜಾಲವಾಗಿ ಮಾತನಾಡುತ್ತಿದ್ದ ಮೇಧಾವಿಯಾಗಿದ್ದ. ಅದ್ಭುತ ನೆನಪಿನ ಶಕ್ತಿ ಮತ್ತು ಬುದ್ಧಿಮತ್ತೆಯನ್ನು ಹೊಂದಿದ್ದ ಬೆಂಥಮ್ ಮಾನವೀಯತೆಯ ಪ್ರತಿಪಾದಕನಾಗಿದ್ದ. ಮರಣದಂಡನೆ ರದ್ಧತಿ, ಗುಲಾಮಗಿರಿಯ ರದ್ಧತಿಗಾಗಿ ಹೋರಾಡಿದ. ಆಗರ್ಭ ಶ್ರೀಮಂತನಾಗಿದ್ದ ಆತ ಫ್ರಾಗ್ಮೆಂಟ್ಸ್ ಆನ್ ಗವರ್ನಮೆಂಟ್ ಎಂಬ ಗ್ರಂಥವನ್ನು ರಚಿಸಿ ಎಲ್ಲ ವಿದ್ವಾಂಸರ ಗಮನ ಸೆಳೆದ. ಲಂಡನ್ ವಿಶ್ವವಿದ್ಯಾನಿಲಯದ ಸ್ಥಾಪನೆಯಲ್ಲೂ ಇವನ ಕೊಡುಗೆ ಅಪಾರ. ಬೆಂಥಮ್ ತನ್ನ 84ನೆಯ ವಯಸ್ಸಿನಲ್ಲಿ ನಿಧನನಾದಾಗ, ಆತನ ಉಯಿಲನ್ನು ತೆರೆದು ನೋಡಲಾಯಿತು. ಅದರಲ್ಲಿ ಆತ ತಾನು ಮರಣಿಸಿದ ಮೇಲೆ, ತನ್ನ ತಲೆಯನ್ನು ಮುಂಡದಿಂದ ಕತ್ತರಿಸಿ ತೆಗೆದು ಅದನ್ನು ಒಂದು ಗಾಜಿನ ಪೆಟ್ಟಿಗೆಯಲ್ಲಿ ಹಾಕಿ ಮುಂಡದ ಅಸ್ಥಿ ಪಂಜರವನ್ನುಪಯೋಗಿಸಿ ತನ್ನ ಪ್ರತಿಕೃತಿಯನ್ನು ತಯಾರಿಸಬೇಕೆಂದೂ, ತನ್ನ ರುಂಡವನ್ನು ಆ ಪ್ರತಿಕೃತಿಯ ಕಾಲುಗಳೆರಡರ ಮಧ್ಯೆ ಇಡಬೇಕೆಂದೂ ಸೂಚಿಸಿದ್ದ! ಅಲ್ಲದೆ ಆಸ್ಪತ್ರೆಯ ಧರ್ಮದರ್ಶಿ ಮಂಡಳಿಯ ಸಭೆ ನಡೆದಾಗ ಅಧ್ಯಕ್ಷರ ಕುರ್ಚಿಯಲ್ಲಿ ತನ್ನ ಅಸ್ಥಿಪಂಜರವನ್ನಿಟ್ಟು ಸಭೆ ನಡೆಸಬೇಕೆಂದೂ ತನ್ನ ಆಶಯ ವ್ಯಕ್ತ ಪಡಿಸಿದ್ದ. ಈ ಆದೇಶಗಳನ್ನು ಈಗಲೂ ಪರಿಪಾಲಿಸುವ ಧರ್ಮದರ್ಶಿ ಮಂಡಳಿ, ಸುಂದರ ಪೋಷಾಕು ಧರಿಸಿದ ಜರ್ಮಿ ಬೆಂಥಮ್ನ ಈ ಪ್ರತಿಕೃತಿಯನ್ನು ಅಧ್ಯಕ್ಷ ಪೀಠದಲ್ಲಿ ಕುಳ್ಳಿರಿಸಿ ಸಭೆ ನಡೆಸುತ್ತಾರೆ. ಏನೇ ವಿಚಾರಗಳು ಚರ್ಚೆಗೆ ಬಂದರೂ ಅದನ್ನು ಕುಲಂಕಷವಾಗಿ ಚರ್ಚಿಸಿ, ಅನುಮೋದನೆಗಾಗಿ ಅಸ್ಥಿಪಂಜರದ ಮುಂದೆ ಇರಿಸಲಾಗುತ್ತದೆ. ಅದರ ನಿಗೂಢ ಮೌನವೇ ಉತ್ತರ. ಸಭೆ ಮುಕ್ತಾಯವಾದಾಗ ಕೊನೆಯಲ್ಲಿ ಒಂದು ನಿರ್ಣಯ ಬರೆದು, ಅಧ್ಯಕ್ಷರ ಹಾಜರಾತಿಯನ್ನು ನಮೂದಿಸಿ, ಅವರು ಅಭಿಪ್ರಾಯವನ್ನು ಮಂಡಿಸಲಾರರು ಎಂಬ ಟಿಪ್ಪಣಿಯನ್ನೂ ಸೇರಿಸಲಾಗುತ್ತದೆ!
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com