ದೇಶದ ಎಲ್ಲ ನಗರಗಳಲ್ಲೂ ಕಂಡುಬರುವ ಅಸಂಘಟಿತ ವ್ಯಾಪಾರಿ ವಲಯ ಎಂದರೆ ಬೀದಿ ಬದಿಯ ವ್ಯಾಪಾರಿಗಳದ್ದು. ಇದು ಕೇವಲ ಪಾನಿಪುರಿ, ಕಡಲೆಕಾಯಿ, ಬಳೆ, ಕರ್ಚಿಫ್ಗಳಂತಹ ಸಣ್ಣ ವಸ್ತುಗಳಿಗೇ ಸೀಮಿತವಲ್ಲ. ಎಲ್ಲ ಕಡೆ ಈ ಬೀದಿ ಬದಿಯ ವ್ಯಾಪಾರಿಗಳ ಭರಾಟೆಯನ್ನು ಗಮನಿಸಿದರೆ, ಅದೊಂದು ಲಾಭದಾಯಕ ಸ್ವಯಂ ಉದ್ಯೋಗವೇ.
ಈಗ ಈ ವ್ಯಾಪಾರಿ ವಲಯಕ್ಕೆ ಯಾವ ರಕ್ಷಣೆಯೂ ಇಲ್ಲ. ಪೊಲೀಸರು, ಸ್ಥಳೀಯ ಆಡಳಿತ ಸಂಸ್ಥೆಗಳ ನೌಕರರು, ಗೂಂಡಾಗಳ ಹಾವಳಿ ಇದ್ದಿದ್ದೇ. ಈ ವರ್ಗವನ್ನು ನಗರಗಳಲ್ಲಿನ ಬಡವರ ಒಂದು ಗುಂಪು ಎಂದು ಪರಿಗಣಿಸಿ ಸರ್ಕಾರವೇ ಅವರನ್ನು ಸಂಘಟಿಸಲು ಮುಂದಾಗಿದೆ. ಅದಕ್ಕಾಗಿ ಶಾಸನದ ರಚನೆಯೂ ಆಗಿದೆ.
ಈ ಅಸಂಘಟಿತ, ಏಕಾಂಗಿ ಬೀದಿ ಬದಿ ವ್ಯಾಪಾರಿಗಳು ಈಗ ತಮ್ಮ ದಂಧೆಯನ್ನು ನೋಂದಾಯಿಸಿಕೊಳ್ಳಲೇ ಬೇಕು. ಅವರ ಜನಗಣತಿಯ ಅನಂತರ ಎಲ್ಲ "ವ್ಯಾಪಾರಿಗಳಿಗೂ" ಬೀದಿ ಬದಿಯಲ್ಲಿ ಒಂದು ನಿರ್ದಿಷ್ಟ ಜಾಗವನ್ನು ಗೊತ್ತುಪಡಿಸಿ, ಅವರು ಅಲ್ಲೇ ವ್ಯಾಪಾರ ಮಾಡಬೇಕೆಂದು ಸರ್ಕಾರವೇ ಹೇಳುತ್ತಿದೆ.
ಅಂದರೆ, ಈಗ ಕಾಯಿದೆಯಡಿ ಅಕ್ರಮ ಎಂದು ಪರಿಗಣಿಸಲಾಗಿರುವ ದಂಧೆ ಮುಂದೆ ಸಕ್ರಮವಾಗಬಹುದು. ಇದೊಂದು ಒಳ್ಳೆಯ ಜನ ಕಲ್ಯಾಣ ಯೋಜನೆಯೇ. ಆದರೆ ಸರ್ಕಾರ ಇಂತಹ ಯೋಜನೆಯನ್ನು ಜಾರಿಗೆ ತರುವ ಮುನ್ನ ಆ ವಲಯದಲ್ಲಿ ಒಂದು ಅತಿ ಬಲಿಷ್ಠ ಮಾಫಿಯಾ ತನ್ನ ತೋಳ್ಬಲದ ಆಡಳಿತ ನಡೆಸಿರುವುದನ್ನು ಗಮನಿಸಬೇಕು. ಸರ್ಕಾರ ಅಸಂಘಟಿತರಿಗೆ ಒದಗಿಸಲಿರುವ ಸೌಲಭ್ಯ, ಒಂದು ಕೆಟ್ಟ ಮಾಫಿಯಾಗೆ ಕಾಯಿದೆಯ ರಕ್ಷಣೆ ಕೊಟ್ಟಂತೆ ಆಗಬಾರದು.