ತಪ್ಪಾಯ್ತು ತಿದ್ಕೋತೀವಿ

Updated on: 

ಗೌರಿಬಿದನೂರಿನಿಂದ ಕೆ.ಎ. ರವೀಂದ್ರನಾಥ್ ಅವರು ಬರೆಯುತ್ತಾರೆ- 'ಮೇ 15ರ ಸಂಚಿಕೆಯ ಕೋಲಾರ ವಿಭಾಗದ 3ನೇ ಪುಟದಲ್ಲಿ 'ನಾರಾಯಣಾಚಾರ್ಯ ಗಡಿ ಪಾರು ಮಾಡಿ' ಎಂಬ ಶಿರೋನಾಮೆಯ ಕೆಳಗಿನ ಉಪಶಿರೋನಾಮೆಯನ್ನು ಓದಿ, ಗಲಿಬಿಲಿಯಾಯಿತು! 'ಲೇಖಕನ ವಿವಾದಾತ್ಮಕ ಕೃತಿ ಮುಟ್ಟುಗೋಲಿಗೆ ಸರ್ಕಾರದ ಆಗ್ರಹ' ಎಂದಿದೆ. ಇಂತಹ ತಪ್ಪು ವಾಕ್ಯಗಳನ್ನು ಹೇಗೆ ಪ್ರಕಟಿಸುತ್ತೀರಿ? ಎಂಬುದೇ ಅರ್ಥವಾಗುತ್ತಿಲ್ಲ.'
'ಯಾಕೆಂದರೆ, ಮಾಲೂರು ಪಟ್ಟಣದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಕಾರ್ಯಕರ್ತರು ವಿವಾದಿತ ಕೃತಿ ಬರೆದಿರುವ ಡಾ. ನಾರಾಯಣಾಚಾರ್ಯರವರನ್ನು ಬಂಧಿಸಿ, ರಾಜ್ಯದಿಂದ ಗಡಿಪಾರು ಮಾಡಲು ಆಗ್ರಹಿಸಿ, ಅವರ ವಿರುದ್ಧ ಪ್ರತಿಭಟಿಸಿ ಅವರ ವಿವಾದಾತ್ಮಕ ಕೃತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಸರ್ಕಾರಕ್ಕೆ ಆಗ್ರಹಪಡಿಸಿದ್ದಾರೆ. ಆದುದರಿಂದ ಈ ಉಪಶಿರೋನಾಮೆಯು 'ಲೇಖಕನ ವಿವಾದಾತ್ಮಕ ಕೃತಿ ಮುಟ್ಟುಗೋಲಿಗೆ ಸರ್ಕಾರಕ್ಕೆ ಆಗ್ರಹ' ಎಂದಿರಬೇಕಲ್ಲವೇ? ಕೇವಲ ಒಂದು ವಾಕ್ಯದ ಕೊನೆಯ ಅಕ್ಷರ ಎಷ್ಟೊಂದು ರಾದ್ಧಾಂತಕ್ಕೆ ದಾರಿಯಾಗುತ್ತದೆಯಲ್ಲವೇ?'
'ಈ ಸುದ್ದಿಯ ಮೊದಲಲ್ಲೇ ವಾಲ್ಮೀಕಿ ಬ್ರಾಹ್ಮಣ ಜಾತಿಗೆ ಸೇರದವರು ಎಂದು...ಎಂದಿದೆ. ಇಲ್ಲಿ ಬ್ರಾಹ್ಮಣ ಜಾರಿಗೆ (ಜಾತಿಗೆ) ಸೇರದವರು ಎಂದು ತಮ್ಮ ಕೃತಿಯಲ್ಲಿ ವಿವಾದಾತ್ಮಕವಾಗಿ ಬರೆದು... ಎಂದಿದೆ. ವಾಲ್ಮೀಕಿ ಬ್ರಾಹ್ಮಣ ಜಾತಿಗೆ ಸೇರದವರು ಎಂದಾದರೆ... ಇಲ್ಲಿ ಲೇಖಕರ ವಿರುದ್ಧ ಪ್ರತಿಭಟನೆ ಏಕೆ ಮಾಡುತ್ತಿದ್ದರು? ಈ ವಾಕ್ಯಗಳು ವಾಲ್ಮೀಕಿ ಬ್ರಾಹ್ಮಣ ಜಾತಿಗೆ ಸೇರಿದವರು ಎಂದಿರಬೇಕು.'
'ಇದೇ ಸುದ್ದಿಯ 3ನೇ ಪ್ಯಾರಾದ ಕೊನೆಯಲ್ಲಿ ಕಾಯ್ದೆಯಾಡಿ ಎಂದಿದೆ. ಇಲ್ಲಿ ಕಾಯ್ದೆಯಡಿ ಎಂದಿರಬೇಕು. ಇದೇ ಕೋಲಾರ ವಿಭಾಗದ 11ನೇ ಪುಟದಲ್ಲಿ ಟೋಲ್‌ದರ 4 ಪಟ್ಟು ಏರಿಕೆಗೆ ತೀವ್ರ ಆಕ್ರೋಶ ಎಂಬ ಸುದ್ದಿಯ ಮೊದಲನೇ ಪ್ಯಾರಾದ 5ನೇ ಸಾಲಿನಲ್ಲಿ 'ಟೋಲ್ ವಿರೋಧಿ ಒಕ್ಕೂಟದ ಸಿದ್ಧತೆಗಳನ್ನು' ಎಂದಿದೆ. ಆದರೆ ಈ ವಾಕ್ಯಗಳ ಕೊನೆಯ ಪದಗಳು... ಒಕ್ಕೂಟದ ಬದಲು ಒಕ್ಕೂಟವು ಎಂದಿರಬೇಕು. 2ನೇ ಪ್ಯಾರಾದ 6ನೇ ಸಾಲಿನಲ್ಲಿ ಜನರು ಸಾಮಾನ್ಯರು ಎಂದಿದೆ. ಇಲ್ಲಿ ಜನಸಾಮಾನ್ಯರು ಎಂದಿರಬೇಕು' ಎಂದಿದ್ದಾರೆ.
ತುಂಬ ದಿನಗಳಿಂದ ಬರೆಯಬೇಕು ಅಂದುಕೊಂಡಿದ್ದೆ. ಕೆ.ಎಂ. ರವೀಂದ್ರನಾಥ ಅವರು ಅದನ್ನು ನೆನಪಿಸಿದ್ದಾರೆ. ಟೇಬಲ್ ಅಡಿ, ಮಂಚದ ಅಡಿ, ಸೇತುವೆಯಡಿ ಎಲ್ಲ ಓಕೆ. ಯಾಕೆಂದರೆ ಅಲ್ಲೆಲ್ಲ ಜಾಗ ಇರುತ್ತೆ. ಆದರೆ ಕಾಯ್ದೆಯಡಿ, ಕಾನೂನಿನಡಿ, ಕಲಂನಡಿ ಯಾಕೆ? ಕಾನೂನಿನಡಿಯಲ್ಲಿ ಅಷ್ಟು ಜಾಗವಿದೆಯೇ? ಇಲ್ಲವಲ್ಲ. ಇದನ್ನು ಬಹುತೇಕ ಎಲ್ಲ ಪತ್ರಕರ್ತರೂ ಬಳಸುತ್ತಾರೆ. ಆದರೆ ಯಾರೂ ತಿದ್ದಿಕೊಳ್ಳುವುದಿಲ್ಲ.
ಕಾನೂನಿನಲ್ಲಿ, ಕಾಯಿದೆಯಲ್ಲಿ ಅಥವಾ ಕಾನೂನಿನ ಅನ್ವಯ, ಕಾಯ್ದೆಯನ್ವಯ ಎಂದು ಬರೆದರೆ ಅದೇ ಹೆಚ್ಚು ಸೂಕ್ತ. ಈ 'ಅಡಿ' ಶಬ್ದವನ್ನು ಸಿಕ್ಕಸಿಕ್ಕ ಶಬ್ದದ ಅಡಿಯಲ್ಲಿ ಬಳಸದಿರುವುದೇ ಲೇಸು.


 -ವಿಶ್ವೇಶ್ವರ ಭಟ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com