ಮುಸ್ಲಿಂ ಯುವಕನ ನಾಟ್ಯ ಸಾಧನೆ

Updated on: 

ಸಯ್ಯದ್ ಸಲಾಲುದ್ದೀನ್ ಪಾಶಾ ಭಾರತದ ಪ್ರಸಿದ್ಧ ನಾಟ್ಯ ಕಲಾವಿದರಲ್ಲಿ ಒಬ್ಬರು. ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಲ್ಲಿ ಜನಿಸಿದರೂ ಶಾಸ್ತ್ರೀಯ ನೃತ್ಯವನ್ನು ಕಲಿತವರು ಸಯ್ಯದ್. ಐದನೇ ವರ್ಷಕ್ಕೇ ಭರತನಾಟ್ಯಕ್ಕೆ ಹೆಜ್ಜೆ ಹಾಕತೊಡಗಿದಾಗ ಗುರು ನರ್ಮದಾ ಈ ಬಾಲಕನಿಗೆ ನೃತ್ಯ ಕಲಿಸಲು ಪ್ರಾರಂಭಿಸಿದರು. ನಂತರ ಮಾಯಾರಾವ್ ಅವರಿಂದ ಶಿಕ್ಷಣ. ಭರತನಾಟ್ಯದ ಜೊತೆಗೆ ಕಥಕ್ ಮತ್ತು ಕೊರಿಯೋಗ್ರಫಿ ಅಭ್ಯಾಸ ಮಾಡಿದ ಈ ಬಾಲಕನ ಪ್ರತಿಭೆಗೆ ಮನಸೋತ ಮಾಯಾರಾವ್ ನೃತ್ಯಕಲೆಯನ್ನು ಧಾರೆ ಎರೆದರು. ವೈಜಯಂತಿ ಕಾಶಿಯವರ ನಾಟ್ಯಶಾಸ್ತ್ರಕಲಾ ಶಾಲೆಯ ನಿರ್ದೇಶಕನಾಗಿಯೂ ಹೆಸರು ಮಾಡಿದ ಸಯ್ಯದ್‌ಗೆ ರಾಮಾಯಣ, ಮಹಾಭಾರತ ಮತ್ತು ಭಾಗವತವನ್ನಾಧರಿಸಿದ ನೃತ್ಯವೆಂದರೆ ಬಲು ಇಷ್ಟ.
 ಓದಿದ್ದು ಔಷಧ ವಿಜ್ಞಾನ ಮತ್ತು ಕಂಪ್ಯೂಟರ್ ಶಿಕ್ಷಣವಾದರೂ ಒಲಿದಿದ್ದು ಮಾತ್ರ ನೃತ್ಯಕಲೆ. ಆನೇಕಲ್ ಬಳಿ ಜನಿಸಿದ ಈ ಕಲಾವಿದ ಅಪ್ಪಟ ಕನ್ನಡಿಗ. ಇದುವರೆಗೂ ಹತ್ತುಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ವಿಕಲಾಂಗ ಕಲಾವಿದರಿಂದ ಕೊಡಿಸಿ ಲಿಮ್ಕಾ ದಾಖಲೆ ಮತ್ತು ಗಿನ್ನೀಸ್ ದಾಖಲೆ ಸ್ಥಾಪಿಸಿರುವ ಸಲಾಲುದ್ದೀನ್ ಇದುವರೆಗೆ ಹಲವಾರು ದೇಶಗಳನ್ನು ಸುತ್ತಿ ಬಂದಿದ್ದಾರೆ. ನ್ಯೂಯಾರ್ಕ್‌ನ ಕಾರ್ನೆಲ್ ವಿಶ್ವವಿದ್ಯಾನಿಲಯದ ಅಂತಾರಾಷ್ಟ್ರೀಯ ವಿದ್ವಾಂಸರಾಗಿ ಹಲವರಿಗೆ ಮಾರ್ಗದರ್ಶನ ನೀಡಿದ್ದಾರೆ. ಮಲೇಷ್ಯಾದ ಸೂತ್ರ ಡಾನ್ಸ್ ಥಿಯೇಟರ್‌ನಲ್ಲಿ ಬೋಧಕ ಮತ್ತು ಕಲಾವಿದರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಫಿಲಫೀನ್ಸ್‌ನ ಪಂಗುಂಗ್‌ನಗಾರ ಮತ್ತು ಇಂಡೋನೇಷ್ಯಾ ದೇಶದ ರಾಟ್ಟಿಕೊ ಡಾನ್ಸ್ ಥಿಯೇಟರ್‌ನಲ್ಲಿ ಸಹ ಸೇವೆ ಸಲ್ಲಿಸಿದ್ದಾರೆ. ಭಾರತದಾದ್ಯಂತವಲ್ಲದೆ, ಅಮೆರಿಕ, ಕೆನಡಾ, ಇಂಗ್ಲೆಂಡ್, ಇರಾಕ್, ಮಾಲ್‌ಡೀವ್ಸ್, ಅರಬ್ ರಾಷ್ಟ್ರಗಳು, ಫಿನ್ಲೆಂಡ್, ಮತಿತ್ತರ ದೇಶಗಳಲ್ಲಿ ಇವರ ನೃತ್ಯ ಪ್ರದರ್ಶನ ಅಪಾರ ಜನಪ್ರಿಯತೆ ಗಳಿಸಿದೆ. ವಿಕಲಾಂಗರಿಗೆ ನೃತ್ಯ ಕಲಿಸಿ ಅವರಿಂದ ಅದ್ಭುತ ನೃತ್ಯ ಪ್ರದರ್ಶನ ಕೊಡಿಸುವುದು ಇವರಿಗಿರುವ ಒಂದು ಹವ್ಯಾಸ. ಇದರಿಂದ ವಿಶ್ವಾದ್ಯಂತ  ಅಂಗವಿಕಲರಲ್ಲಿ ಭರವಸೆ ಮತ್ತು ಆತ್ಮವಿಶ್ವಾಸವನ್ನು ಮೂಡಿಸಿದ್ದಾರೆ. ಇವರಿಗೆ ಶ್ರೀರಾಮ, ಹನುಮಂತ, ರಾವಣ, ಸಾಲ್ವ, ಕೃಷ್ಣ ಮುಂತಾದ ಪುರಾಣ ಪಾತ್ರಗಳಲ್ಲಿ ನೃತ್ಯ ಪ್ರದರ್ಶನ ನೀಡುವುದೆಂದರೆ ತುಂಬ ಇಷ್ಟ. ಒಮ್ಮೆ ನಡೆದ ನೃತ್ಯ ಪ್ರದರ್ಶನದಲ್ಲಿ ಆಂಜನೇಯ ಪಾತ್ರಧಾರಿಯಾಗಿ ಅದೆಷ್ಟು ಪರಿಣಾಮಕಾರಿಯಾಗಿ ನರ್ತಿಸಿದರೆಂದರೆ ವೀಕ್ಷಿಸುತ್ತಿದ್ದ ಜನರೆಲ್ಲಾ ಕುಳಿತಲ್ಲಿಯೇ ಕೈಯೆತ್ತಿ ನಮಸ್ಕರಿಸಿದ್ದರು. ಆಂಜನೇಯ ದೇವಾಲಯದ ಪೂಜಾರಿಯಂತೂ ಪಾಷಾರ ಪಾತ್ರವನ್ನು ನೋಡಿ ತಡೆಯಲಾಗದೆ ದೀರ್ಘದಂಡ ನಮಸ್ಕಾರ ಹಾಕಿಯೇ ಬಿಟ್ಟರು. ಮಣಿಪುರಿ ನೃತ್ಯವನ್ನೂ ಅಭ್ಯಾಸ ಮಾಡಿರುವ ಪಾಷಾ  ಹುಟ್ಟು ಮುಸ್ಲಿಂ ಕಲಾವಿದರಾದರೂ ಭಾರತೀಯ ನೃತ್ಯ ಕಲೆಯಲ್ಲಿರುವ ಅಪಾರ ಆಸಕ್ತಿ ಎಲ್ಲರ ಗೌರವಕ್ಕೆ ಪಾತ್ರರಾಗುವಂತೆ ಮಾಡಿದೆ. ‘Ability ್ಖಟಿಟ್ಝಟ್ಝಡಿಜಜ Foundation’ ಎಂಬ ಸೇವಾಸಂಸ್ಥೆಯನ್ನು ಸ್ಥಾಪಿಸಿ ಅನೇಕ ಪ್ರತಿಭಾವಂತ ಅಂಗವಿಕಲರನ್ನು ವಿಶ್ವ ದರ್ಜೆಯ ಕಲಾವಿದರನ್ನಾಗಿ, ಕ್ರೀಡಾಪಟುಗಳನ್ನಾಗಿ ಮಾಡುತ್ತಿರುವ ಗುರು ಪಾಶಾ ಅಭಿನಂದನಾರ್ಹರು.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com