ಬರೋಡಾದ ಜಲತರಂಗ ವಾದಕರಾದ ಉಸ್ತಾದ್ ಮೌಲಾ ಭಕ್ಷ್ ಕರ್ನಾಟಕ ಸಂಗೀತ ಮತ್ತು ವೀಣಾವಾದನ ಕಲಿಯಲು ಮೈಸೂರಿಗೆ ಬಂದು ನೆಲೆಸಿದ್ದರು. ಮಹಾರಾಜರ ದರ್ಬಾರ್ ಸಂಗೀತಗಾರನಾಗಿ ನೇಮಕವಾದ ಮೇಲೆ ಒಂದು ದಿನ ಮಹಾರಾಜರ ಸಮ್ಮುಖದಲ್ಲಿ ಜಲತರಂಗ ನುಡಿಸಲು ಅಪ್ಪಣೆ ಕೋರಿದರು. ಅಲ್ಲಿಯವರೆಗೆ ಮೈಸೂರಿನ ಸಂಗೀತಗಾರರು ಮತ್ತು ಮಹಾರಾಜರು ಜಲತರಂಗ ವಾದನವನ್ನು ಕೇಳಿರಲಿಲ್ಲ. ಹೀಗಾಗಿ ಆ ವಾದನವನ್ನು ಕೇಳಲು ಉತ್ಸುಕರಾಗಿ ಮರುದಿನವೇ ಜಲತರಂಗ ಕಚೇರಿಯನ್ನು ಏರ್ಪಡಿಸಲಾಯಿತು. ಅದ್ಭುತವಾಗಿ ಜಲತರಂಗವನ್ನು ನುಡಿಸಿದ ಮೌಲಾ ಭಕ್ಷ್‌ರನ್ನು ಎಲ್ಲರೂ ಮುಕ್ತ ಕಂಠದಿಂದ ಶ್ಲಾಘಿಸಿದರು. ಆ ಸಭೆಯಲ್ಲಿ ಅಂದು ವೀಣೆ ಶೇಷಣ್ಣನವರು ಇರಲಿಲ್ಲ. ಮರುದಿನ ಆಸ್ಥಾನಕ್ಕೆ ಬಂದ ಶೇಷಣ್ಣನವರು ಜಲತರಂಗವಾದನವನ್ನು ಕೇಳಲು ಇಚ್ಛಿಸಿದ್ದರಿಂದ ಮತ್ತೊಮ್ಮೆ ಜಲತರಂಗ ಕಚೇರಿ ಏರ್ಪಾಡಾಯಿತು. ಅದನ್ನು ತುಂಬಾ ಆಸಕ್ತಿಯಿಂದ ವೀಕ್ಷಿಸಿದ ಶೇಷಣ್ಣ, ಉಸ್ತಾದರು ಆ ಪಿಂಗಾಣಿ ಬಟ್ಟಲುಗಳನ್ನು ತನ್ನೆದುರಿಗೆ ಇಟ್ಟುಕೊಂಡು ನುಡಿಸುವುದನ್ನು ನೋಡಿ ಅಚ್ಚರಿಗೊಂಡರು. ಕಚೇರಿಯೆಲ್ಲ ಮುಗಿದಮೇಲೆ ಸ್ವತಃ ಶೇಷಣ್ಣನವರು ಆ ಬಟ್ಟಲುಗಳನ್ನು ಬಡಿದು ಅವು ಹೇಗೆ ಧ್ವನಿ ಹೊರಡಿಸುತ್ತವೆ ಎಂಬುದನ್ನು ಪರೀಕ್ಷಿಸಿದರು. ನಂತರ ಮಹಾರಾಜರ ಕಡೆ ತಿರುಗಿ, ಮರುದಿನ ತಾವೂ ಸಹ ಜಲತರಂಗ ಕಚೇರಿಯನ್ನು ನಡೆಸಿಕೊಡುವುದಾಗಿ ತಿಳಿಸಿದಾಗ ಎಲ್ಲರಿಗೂ ಅಚ್ಚರಿಯಾಯಿತು. ಶೇಷಣ್ಣನವರು ತಾವು ಹೇಳಿದಂತೆ ಮರುದಿನ ಮಹಾರಾಜರ ಸಮ್ಮುಖದಲ್ಲಿ ಕರ್ನಾಟಕ ಸಂಗೀತಕ್ಕನುಗುಣವಾಗಿ ಕೆಲವು ಕೀರ್ತನೆಗಳನ್ನು ಜಲತರಂಗ ವಾದ್ಯದಲ್ಲಿ ಅದ್ಭುತವಾಗಿ ನುಡಿಸುವುದರ ಮೂಲಕ ಇಡೀ ಸಭೆಯನ್ನು ಮಂತ್ರಮುಗ್ಧಗೊಳಿಸಿದರು. ಅಲ್ಲದೆ ಜಲತರಂಗವನ್ನು ನುಡಿಸುವುದು ಹೇಗೆಂದು ಅಲ್ಲಿ ನೆರೆದ ಸಂಗೀತಗಾರರಿಗೆ ಕಲಿಸಿದರು ಕೂಡ! ಶೇಷಣ್ಣನವರ ಈ ಅದ್ಭುತ ಪ್ರತಿಭೆಯನ್ನು ಎಲ್ಲರೂ ಹೊಗಳುವವರೇ. ಸ್ವತಃ ಉಸ್ತಾದ್ ಮೌಲಾ ಭಕ್ಷ್‌ಭಾವಪರವಶರಾಗಿ ಎದ್ದು ಬಂದು ಶೇಷಣ್ಣನವರನ್ನು ತಬ್ಬಿಕೊಂಡು ತಮ್ಮ ಸಂತಸವನ್ನು ವ್ಯಕ್ತಗೊಳಿಸಿದರು. ಅಲ್ಲಿಯವರೆಗೆ ದಕ್ಷಿಣ ಭಾರತದಲ್ಲಿ ಅಪರೂಪವಾಗಿದ್ದ ಜಲತರಂಗವನ್ನು ಪರಿಚಯಿಸಿದ ಕೀರ್ತಿ ಶೇಷಣ್ಣನವರಿಗೆ ಸಲ್ಲುತ್ತದೆ. ಒಮ್ಮೆ ರಾಮನಾಥಪುರಂನಲ್ಲಿ ವೀಣಾವಾದನ ಕಚೇರಿಯ ನಂತರ ಜಲತರಂಗವನ್ನೂ ನುಡಿಸಿ ಅಲ್ಲಿಯ ಮಹಾರಾಜ ಮತ್ತು ಕಲಾರಸಿಕರನ್ನು ಮೋಡಿ ಮಾಡಿದರು. ರಾಜನು ತನ್ನ ಆಸ್ಥಾನದಲ್ಲಿದ್ದ ಯುವ ಸಂಗೀತಗಾರ ಅನಯಾಂಪಟ್ಟಿ ಸುಬ್ಬಯ್ಯರವರಿಗೆ ಜಲತರಂಗ ವಾದನವನ್ನು ಕಲಿಸಬೇಕೆಂದು ಶೇಷಣ್ಣನವರನ್ನು ಕೇಳಿಕೊಂಡನು. ಅದರಂತೆ ಶೇಷಣ್ಣನವರು ಆತನಿಗೆ ಜಲತರಂಗದ ಗುರುವಾದರು!
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com