ಅನೇಕ ಬಾರಿ ನಾಶಮಾಡಿದರೂ ಮತ್ತೆ ಮತ್ತೆ ಎದ್ದುನಿಂತ ದೇವಾಲಯವೆಂದರೆ ಗುಜರಾತಿನ ಸೋಮನಾಥ ದೇವಾಲಯ. ಮಹಮದ್ ಘಜ್ನಿ, ಅಲ್ಲಾವುದ್ದೀನ್ ಖಿಲ್ಜಿ, ಮಹಮದ್ಬಿನ್ ತುಘಲಕ್, ಮಹಮದ್ ಮಗ್ದಾ ಮತ್ತು ಔರಂಗಜೇಬ್ ಸೋಮನಾಥ ದೇವಾಲಯವನ್ನು ನಾಶಮಾಡಿದಾಗಲೆಲ್ಲ ಅದರ ಪುನರ್ನಿರ್ಮಾಣ ಕಾರ್ಯ ನಡೆಯಿತು. ಸ್ವಾತಂತ್ರ್ಯಾ ನಂತರ ಸೋಮನಾಥ ದೇವಾಲಯವನ್ನು ಭವ್ಯವಾಗಿ ಪುನರ್ನಿರ್ಮಿಸಲಾಗುವುದು ಎಂದು ಸರ್ದಾರ್ ವಲ್ಲಭಭಾಯಿ ಪಟೇಲರು ಘೋಷಿಸಿದರು. ಅದಕ್ಕಾಗಿ 'ದಿ ಸೋಮನಾಥ ಟ್ರಸ್ಟ್' ನವಾನಗರದ ಮಹಾರಾಜ ಜಾಮ್ ಸಾಹೇಬ ಸಿಂಗ್ಜಿ ಅವರ ಅಧ್ಯಕ್ಷತೆಯಲ್ಲಿ ರಚಿತವಾಯಿತು. ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಸರ್ಕಾರದ ಖರ್ಚಿನಲ್ಲಿ ದೇವಾಲಯವನ್ನು ಪುನರ್ ನಿರ್ಮಿಸುವ ನಿರ್ಧಾರ ಸಹ ಕೈಗೊಳ್ಳಲಾಯಿತು. ಅದಕ್ಕೆ ಗಾಂಧೀಜಿಯವರು ವಿರೋಧ ವ್ಯಕ್ತಪಡಿಸಿ, ದೇವಾಲಯವನ್ನು ಸರ್ಕಾರಿ ವೆಚ್ಚದಲ್ಲಿ ನಿರ್ಮಿಸದೆ, ಸಾರ್ವಜನಿಕರ ಹಣದಿಂದ ಪುನರ್ ನಿರ್ಮಾಣ ಮಾಡಬೇಕೆಂಬ ಸಲಹೆ ನೀಡಿದರು. ಕೆ.ಎಂ.ಮುನ್ಷಿಯವರ ಅಧ್ಯಕ್ಷತೆಯಲ್ಲಿ ಒಂದು ಸಲಹಾ ಸಮಿತಿ ರಚಿಸಲ್ಪಟ್ಟು ಇಪ್ಪತ್ತೈದು ಲಕ್ಷ ರುಪಾಯಿ ಸಂಗ್ರಹಿಸಲಾಯಿತು. ಕೆಲಸ ಪ್ರಾರಂಭವಾದ ಕೆಲವೇ ಸಮಯದಲ್ಲಿ ಸರ್ದಾರರು ವಿಧಿವಶರಾದರು. ಅದುವರೆಗೆ ಸುಮ್ಮನಿದ್ದ ದುಷ್ಟ ಶಕ್ತಿಗಳು ತಲೆ ಎತ್ತಲಾರಂಭಿಸಿದವು. ದೇವಾಲಯ ಪುನರ್ನಿರ್ಮಾಣವು ಜಾತ್ಯತೀತತೆಗೆ ವಿರುದ್ಧವಾದುದೆಂದು ವಾದಿಸಲಾಯಿತು. ಸ್ವತಃ ನೆಹರೂ ಕೂಡ ಆಕ್ಷೇಪ ಎತ್ತಿದರು. ಇಂತಹ ತೊಂದರೆಗಳ ನಡುವೆಯೇ ಮೊದಲ ಹಂತದ ಕಾರ್ಯ ಮುಗಿದು, ರಾಷ್ಟ್ರಾಧ್ಯಕ್ಷರಾದ ಬಾಬು ರಾಜೇಂದ್ರ ಪ್ರಸಾದರನ್ನು 1951ರಲ್ಲಿ ಲಿಂಗ ಪ್ರತಿಷ್ಠಾಪನೆಗೆ ಆಹ್ವಾನಿಸಲಾಯಿತು. ಆಹ್ವಾನವನ್ನು ಅಂಗೀಕರಿಸಿದ ಮೇಲೆ ತಪ್ಪಿಸಬಾರದೆಂಬ ನಿಬಂಧನೆಯನ್ನೂ ವಿಧಿಸಲಾಯಿತು. ರಾಜೇಂದ್ರ ಪ್ರಸಾದರು ಬರಲೊಪ್ಪಿದಾಗ, ನೆಹರೂ ಅದನ್ನು ಬಲವಾಗಿ ವಿರೋಧಿಸಿದರು. ಆಗ ರಾಜೇಂದ್ರ ಪ್ರಸಾದರು, "ಪ್ರಧಾನ ಮಂತ್ರಿಗಳ ಭಾವನೆಗಳು ಏನೇ ಇದ್ದರೂ ನಾನು ಬಂದು ಲಿಂಗ ಪ್ರತಿಷ್ಠಾಪನೆ ಮಾಡುತ್ತೇನೆ. ನನ್ನನ್ನು ಆಹ್ವಾನಿಸಿದರೆ ಒಂದು ಚರ್ಚ್ ಅಥವಾ ಮಸೀದಿಯ ಆರಂಭೋತ್ಸವಕ್ಕೂ ಅದೇ ರೀತಿ ಹೋಗುತ್ತೇನೆ. ಇದು ಭಾರತೀಯ ಜಾತ್ಯತೀತೆಯ ತಿರುಳು" ಎಂದು ಹೇಳಿದರು. ಅಲ್ಲದೆ, ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅದ್ಭುತ ಭಾಷಣವನ್ನೂ ಮಾಡಿದರು. ಮತ್ತೊಮ್ಮೆ 1959ರಲ್ಲಿ ಯಾತ್ರಾರ್ಥಿಯಾಗಿ ಅಲ್ಲಿಗೆ ಹೋದರು. ಇಂದು ಸೋಮನಾಥ ದೇವಾಲಯ ಸಮುದ್ರ ತಟದಲ್ಲಿ ಅದ್ಭುತವಾಗಿ ತಲೆಯೆತ್ತಿ ನಿಂತಿದ್ದು ಪ್ರತಿದಿನ ಭೇಟಿಕೊಡುವ ಸಹಸ್ರಾರು ಭಕ್ತರ ಶ್ರದ್ಧಾ ಕೇಂದ್ರವಾಗಿ ರೂಪುಗೊಂಡಿದೆ.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com