ವಿಶ್ವದ ಹಿರಿಯ ಸಂಸದರಿಗೆ ನೀರಸ ಬೀಳ್ಕೊಡುಗೆ

Updated on: 

1952ರಲ್ಲಿ ಮೊದಲ ಲೋಕಸಭೆ ಚುನಾವಣೆಯಲ್ಲಿ ಸ್ಫರ್ಧಿಸಿ ಜಯಗಳಿಸಿದ ರೇಶಂಗ್ ಕೇಶಿಂಗ್ ಇದೇ ಏಪ್ರಿಲ್ 9ರಂದು ರಾಜ್ಯಸಭೆಯ ಸದಸ್ಯ ಪದವಿಯಿಂದ ನಿವೃತ್ತರಾಗುತ್ತಿದ್ದಾರೆ. ರಾಜಕೀಯದಲ್ಲಿ ಒಟ್ಟು 62 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿದ್ದು ವಿಶ್ವ ದಾಖಲೆ ನಿರ್ಮಿಸಿರುವ ರೇಶಿಂಗ್‌ಗೀಗ 94 ವರ್ಷಗಳು. ಮೊದಲ ಲೋಕಸಭೆಯಿಂದ ಇಲ್ಲಿಯವರೆಗೆ ಎಲ್ಲ ಪ್ರಧಾನ ಮಂತ್ರಿಗಳೊಡನೆ ಉತ್ತಮ ಬಾಂಧವ್ಯ ಹೊಂದಿದ್ದ ರೇಶಿಂಗ್ ಒಬ್ಬ ಸಜ್ಜನ ರಾಜಕಾರಣಿ. ಇದುವರೆಗೆ ನಾಲ್ಕುಬಾರಿ ಲೋಕಸಭೆಗೆ ಮತ್ತು ಎರಡು ಬಾರಿ ರಾಜ್ಯಸಭೆಗೆ ಆಯ್ಕೆಯಾಗಿ ದಾಖಲೆ ಸೃಷ್ಟಿಸಿದ್ದಾರೆ. ಅಲ್ಲದೆ ಮಣಿಪುರದ ಪ್ರಭಾವಿ ರಾಜಕಾರಣಿಯಾಗಿ ಎಲ್ಲರ ಆದರಕ್ಕೆ ಪಾತ್ರರಾಗಿದ್ದಾರೆ. ಮಣಿಪುರದಲ್ಲಿ ನಾಲ್ಕುಬಾರಿ ಮುಖ್ಯಮಂತ್ರಿಯಾಗಿ ಯಶಸ್ವಿ ಕಾರ್ಯ ನಿರ್ವಹಿಸಿದ್ದಾರೆ. ಸ್ವಾರಸ್ಯವೆಂದರೆ ಎಂದೂ ಅವರು ಮುಖ್ಯಮಂತ್ರಿ ಪದವಿಯನ್ನು ಪೂರ್ತಿ ಐದುವರ್ಷ ನಡೆಸಲಿಲ್ಲ. ಏಕೆಂದರೆ ಆಗಿನ್ನೂ ಪಕ್ಷಾಂತರ ಮಸೂದೆ ಜಾರಿಯಲ್ಲಿ ಇರಲಿಲ್ಲವಾದ್ದರಿಂದ ಶಾಸಕರ ದೊಂಬರಾಟದಿಂದ ಆ ಪರಿಸ್ಥಿತಿ ಉದ್ಭವವಾಗುತ್ತಿತ್ತು. 1972ರಲ್ಲಿ ಅವರೇ ಸ್ಥಾಪಿಸಿದ 'ಸಂಯುಕ್ತ ನಾಗಾ ಒಕ್ಕೂಟ ಸಮಿತಿ'ಯನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಿದ ರೇಶಂಗ್ ನಂತರದ ದಿನಗಳಲ್ಲಿ ಕಾಂಗ್ರೆಸ್‌ನ ಅವಿಭಾಜ್ಯ ಅಂಗವಾದರು. ಸಭ್ಯ ರಾಜಕಾರಣಿಯಾದ ರೇಶಿಂಗ್ ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಲೋಕಸಭೆ ಸದಸ್ಯರಾಗಿ, ರಾಜ್ಯಸಭೆ ಸದಸ್ಯರಾಗಿ, ಮಣಿಪುರ ವಿಧಾನಸಭೆ ಸದಸ್ಯರಾಗಿ, ಸಚಿವರಾಗಿ, ವಿರೋಧಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ, ಸೇವೆ ಸಲ್ಲಿಸಿದ್ದಾರೆ. ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ. ನೆಹರೂ, ಮೌಲಾನಾ ಅಜಾದ್, ಪಟೇಲ್, ಆಚಾರ್ಯ ಕೃಪಲಾನಿ, ಶಾಂ ಪ್ರಸಾದ್ ಮುಖರ್ಜಿ, ರಾಮ್ ಮನೋಹರ್ ಲೋಹಿಯಾ, ಗೋವಿಂದ್ ವಲ್ಲಭ ಪಂತ್ ಅವರ ಅಮೋಘ ಭಾಷಣಗಳನ್ನು ಸಂಸತ್ತಿನಲ್ಲಿ ಆಸಕ್ತಿಯಿಂದ ಕೇಳಿದ್ದಾರೆ. 1964 ರವರೆಗೆ ಸಮಾಜವಾದಿ ಪಕ್ಷದಲ್ಲಿದ್ದ ರೇಶಂಗ್ ಇಂದಿರಾ ಗಾಂಧಿಯವರ ವ್ಯಕ್ತಿತ್ವಕ್ಕೆ ಮನಸೋತು ಕಾಂಗ್ರೆಸ್ ಸೇರಿದ್ದಾಗಿ ತಿಳಿಸುತ್ತಾರೆ. "ಹಿಂದೆ ಸಂಸತ್ತಿನಲ್ಲಿ ಆಗುತ್ತಿದ್ದ ಚರ್ಚೆಗಳು ಇಡೀ ರಾಷ್ಟ್ರದ ಗಮನ ಸೆಳೆಯುತ್ತಿದ್ದು, ಅದಕ್ಕೊಂದು ಗಾಂಭೀರ್ಯವಿರುತ್ತಿತ್ತು. ಇತ್ತೀಚೆಗೆ ನಡೆಯುವ ವಿದ್ಯಾಮಾನಗಳು ಸಂಸತ್ತಿನ ಘನತೆಗೆ ತಕ್ಕುದಾಗಿಲ್ಲ" ಎಂದು ವಿಷಾದಿಸುತ್ತಾರೆ. ಹೀಗಾಗಿ ಅವರ ಅವಧಿ ಏಪ್ರಿಲ್ 9, 2014 ರವರೆಗಿದ್ದರೂ ಇತ್ತೀಚೆಗೆ ರಾಜ್ಯಸಭೆಯನ್ನು ಅನಿರ್ಧಿಷ್ಟಕಾಲಾವಧಿಗೆ ಮುಂದೂಡಿದಾಗ ಅವರು ರಾಷ್ಟ್ರ ರಾಜಕೀಯಕ್ಕೆ ವಿದಾಯ ಹೇಳಿದರು. ಅವರನ್ನು ಬೀಳ್ಕೊಡುವ ಯಾವ ಸಮಾರಂಭವೂ ರಾಜ್ಯಸಭೆಯಲ್ಲಿ ನಡೆಯಲಿಲ್ಲ. ಯಾರೊಬ್ಬರೂ ಅವರ ಕೈಕುಲಕಿ ಶುಭ ಹಾರೈಸಲಿಲ್ಲ. ದೃಶ್ಯ ಮಾಧ್ಯಮದವರೂ ಸಹ ಅವರ ಸೇವೆಯನ್ನು ಗುರುತಿಸಲಿಲ್ಲ. ಆದರೂ ನಗುಮುಖದಿಂದ ರಾಜ್ಯಸಭೆಯಿಂದ ಹೊರಬಿದ್ದ ರೇಶಂಗ್ ಇವಾವುದನ್ನೂ ನಿರೀಕ್ಷಿಸಿಯೂ ಇರಲಿಲ್ಲ. ಅವರು ಇನ್ನು ಮುಂದೆ ಯಾವ ಚುನಾವಣೆಗಳಲ್ಲಿಯೂ ಸ್ಪರ್ಧಿಸದಿರುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ತಮ್ಮ ಜೀವನದ ಕೊನೆಯವರೆಗೂ ರಾಜ್ಯದ ಜನರ ಸೇವೆಯನ್ನು ಮಾಡುವುದಾಗಿ ತಿಳಿಸಿದ್ದಾರೆ.

 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com