ಚುನಾವಣೆ ಬಂತೆಂದರೆ ಪ್ರತಿಯೊಬ್ಬ ಅಭ್ಯರ್ಥಿಗೂ ಸೋಲು-ಗೆಲುವಿನ ಚಿಂತೆ. ಗೆಲ್ಲಲು ಬೇಕಾದ ಎಲ್ಲ ಪ್ರಯತ್ನವನ್ನೂ ಪ್ರತಿಯೊಬ್ಬ ಅಭ್ಯರ್ಥಿಯೂ ಮಾಡುವುದು ಸಹಜ. ಆದರೆ ಸೋಲಲೆಂದೇ ಚುನಾವಣೆಗೆ ಸ್ಪರ್ಧಿಸುವ ವ್ಯಕ್ತಿ ಬಗ್ಗೆ ತಿಳಿದಿದೆಯೆ? ಅಂತಹ ಒಬ್ಬ ಮಹಾನುಭಾವ ನಮ್ಮ ಕರ್ನಾಟಕದಲ್ಲೇ ಇದ್ದು ಸೋಲಿನಲ್ಲಿ ಗಿನ್ನಿಸ್ ದಾಖಲೆ ಸ್ಥಾಪಿಸಿದ್ದಾರೆ. ಅವರು ಬೇರೆ ಯಾರೂ ಅಲ್ಲ, ಹೊಟ್ಟೆಪಕ್ಷದ ರಂಗಸ್ವಾಮಿಯವರು! ಅವರು ಸ್ಪರ್ಧಿಸಿದ್ದ ಎಲ್ಲ ಚುನಾವಣೆಗಳಲ್ಲಿಯೂ ಸೋತಿದ್ದು ಮಾತ್ರವಲ್ಲ ಠೇವಣಿ ಕಳೆದುಕೊಂಡು ದಾಖಲೆ ಸ್ಥಾಪಿಸಿದ್ದಾರೆ. ಅವರು ಸ್ಫರ್ಧಿಸಿದ ಚುನಾವಣೆಗಳ ಸಂಖ್ಯೆ ಒಂದಲ್ಲಾ ಎರಡಲ್ಲಾ ಬರೋಬ್ಬರಿ 86! ಮೊದಲ ಬಾರಿ 1967 ರಲ್ಲಿ ಅವರು ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿ ಸೋಲಿನ ರುಚಿ ಕಂಡಿದ್ದರು. ಈ ಪರಾಕ್ರಮ 2004 ರ ಚುನಾವಣೆಯವರೆಗೂ ಮುಂದುವರೆಯಿತು. ಅವರ ಚುನಾವಣಾ ಪ್ರಣಾಳಿಕೆಯೆಂದರೆ ಪ್ರತಿಯೊಬ್ಬರಿಗೂ ಸಾಕಷ್ಟು ಆಹಾರ ದೊರೆಯಬೇಕೆಂಬುದು. ಅದಕ್ಕಾಗಿ ಅವರು ಚುನಾವಣಾ ಸಮಯದಲ್ಲಿ ಒಂದೆರಡು ಕ್ವಿಂಟಾಲ್ ಅಕ್ಕಿಯನ್ನು ಒಂದು ರುಪಾಯಿಗೆ ಕಿಲೋ ಲೆಕ್ಕದಲ್ಲಿ ಮಾರಿ ಭಾಷಣ ಪ್ರಾರಂಭಿಸುತ್ತಿದ್ದರು. ಸೈಕಲ್ ಏರಿ ಕ್ಷೇತ್ರವನ್ನೆಲ್ಲಾ ಸುತ್ತಿ ಜನ ಸಂಪರ್ಕ ಮಾಡುತ್ತಿದ್ದರು. ಅವರು ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್ ಮುಂತಾದ ಅತಿರಥ ಮಹಾರಥರ ವಿರುದ್ಧ ಸ್ಪರ್ಧಿಸಿ ಸೋತರು. ಪ್ರತಿಬಾರಿಯೂ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತು ದಾಖಲೆ ನಿರ್ಮಿಸಿದ್ದಾರೆ. ಕೈಯಲ್ಲಿ ತ್ರಿಶೂಲ ಹಿಡಿದು ವಿಧಾನಸೌಧದಕ್ಕೆ ಆಗಮಿಸಿ ಎಲ್ಲ ಸಚಿವರ ಕಚೇರಿಗೂ ಭೇಟಿನೀಡಿ, ಜನರ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುತ್ತಿದ್ದರು. ಅಲ್ಲದೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳನ್ನು ದಾಖಲಿಸುವಲ್ಲಿಯೂ ಅವರು ಮುಂದಿದ್ದರು. ತಮ್ಮ ಕೊನೆಯ ದಿನಗಳಲ್ಲಿ ಸನ್ಯಾಸಿಗಳಾಗಿ ಸ್ವಾಮಿ ರಂಗನಾಥಾನಂದ ಎಂಬ ಹೆಸರಿನಿಂದ ಹಂಪೆಯ ಕಿಷ್ಕಿಂದಾ ಕ್ಷೇತ್ರದಲ್ಲಿ ನೆಲೆಸಿದ್ದರು. ಅವರ ನಂತರ ಅವರ ಮಗ ರಾಜೇಂದ್ರ ಪ್ರಸಾದ್ ಹೊಟ್ಟೆಪಕ್ಷದ ಅಧಿಪತಿಗಳಾಗಿ ಮುಂದುವರೆದರೂ ಅವರಿಗೆ ತಂದೆಯ ದಾಖಲೆಯನ್ನು ಮುರಿಯಲಾಗಲಿಲ್ಲ. ರಂಗಸ್ವಾಮಿಯವರಿಗೆ ಈ ಚುನಾವಣಾ ಹುಚ್ಚಿಗೆ ಕಾರಣವೇನು ಎಂದು ಪ್ರಶ್ನಿಸಿದರೆ, "ಹಲವಾರು ಚುನಾವಣೆಗಳಲ್ಲಿ ಬರೀ ಸೋಲನ್ನುಂಡು ಕೊನೆಗೆ ಅಮೆರಿಕ ರಾಷ್ಟ್ರಾಧ್ಯಕ್ಷರ ಚುನಾವಣೆಯಲ್ಲಿ ಅಭೂತ ಪೂರ್ವ ಜಯಗಳಿಸಿ, ಅತ್ಯಂತ ದಕ್ಷ ಆಡಳಿತ ನೀಡಿದ ಅಬ್ರಹಾಮ್ ಲಿಂಕನ್ ನನಗೆ ಸ್ಫೂರ್ತಿ" ಎಂದು ಹೇಳುತ್ತಿದ್ದರು. ಒಂದಲ್ಲಾ ಒಂದು ದಿನ ಯಾವುದಾದರೊಂದು ಚುನಾವಣೆಯಲ್ಲಿ ತಾವೂ ಸಹ ಜಯಶಾಲಿಯಾಗಿ ಜನಸೇವೆ ಮಾಡುತ್ತೇವೆಂಬ ಆಸೆ ಅವರಿಗಿತ್ತು. ಆದರೆ ಅವರ ಆಸೆ ಮಾತ್ರ ಕೈಗೂಡಲಿಲ್ಲ. 2007ರಲ್ಲಿ ಇಹಲೋಕ ತ್ಯಜಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ