ನಾವು ಸಾರಾಸಗಟಾಗಿ ಆಂಗ್ಲರ ಅಧಿಕಾರಿಶಾಹಿ ಪ್ರವೃತ್ತಿಯನ್ನೂ, ಸಾಮ್ರಾಜ್ಯ ಶಾಹಿ ಮನೋಭಾವವನ್ನೂ ವಿರೋಧಿಸುತ್ತೇವೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬರುವವರೆಗೂ ಅವರ ವಿರುದ್ಧ ಹೋರಾಡಿದ ಕಥೆ ರೋಮಾಂಚಕ. ಆದರೆ ಅಲ್ಲೊಬ್ಬ ಇಲ್ಲೊಬ್ಬ ಆಂಗ್ಲ ಅಧಿಕಾರಿಗಳು ಜನಸಾಮಾನ್ಯರ ಮನಸ್ಸನ್ನು ಗೆದ್ದ ಪ್ರಸಂಗಗಳೂ ಇವೆ. ಅಂತಹವರಲ್ಲಿ ಟಿ.ಜೆ.ಮೆಗ್ಗಾನ್ ಸಹ ಒಬ್ಬರು. ಮಲೇರಿಯಾ ರೋಗದ ಕೊಂಪೆಯಾಗಿದ್ದ ಶಿವಮೊಗ್ಗಕ್ಕೆ ವೈದ್ಯಕೀಯ ಅಧಿಕಾರಿಯಾಗಿ ಮೆಗ್ಗಾನ್ 1871ರಲ್ಲಿ ಆಗಮಿಸಿದರು. ಇಲ್ಲಿಯ ಅನಾರೋಗ್ಯಕರ ಪರಿಸ್ಥಿತಿ, ಮಲೆನಾಡಿಗರಲ್ಲಿ ಬೇರೂರಿದ್ದ ಮೂಢನಂಬಿಕೆ ಇವನ್ನೆಲ್ಲಾ ನೋಡಿ ಇಂತಹವರಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಲು ನಿರ್ಧರಿಸಿದರು. ಅವಕಾಶ ಸಿಕ್ಕಾಗಲೆಲ್ಲಾ ಮನೆಮನೆಗೆ ತೆರಳಿ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು. ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಬಗ್ಗೆ ಮಾರ್ಗದರ್ಶನ ಮಾಡಿದರು ಮತ್ತು ಮೂಢನಂಬಿಕೆಗಳಿಗೆ ಯಾವುದೇ ಆಧಾರವಿಲ್ಲವೆಂದು ತೋರಿಸಿಕೊಟ್ಟರು. ಅವರ ಪತ್ನಿಯೂ ಸಹ ವೈದ್ಯರಾದುದರಿಂದ ಪತಿಪತ್ನಿ ಇಬ್ಬರೂ ಜನಸೇವೆಗೆ ನಿಂತರು.
ಈಗಿನಂತೆ ಆಗಲೂ ಸಹ ಕನ್ನಡ ಬಾರದ ಅಧಿಕಾರಿಗಳು ಕನ್ನಡವನ್ನು ಓದಿ ಅರ್ಹತಾ ಪರೀಕ್ಷೆ ಪಾಸು ಮಾಡಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಮೆಗ್ಗಾನ್ ಕನ್ನಡ ಕಲಿತು 1872ರಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಆಸ್ಪತ್ರೆಗೆ ಬಂದ ರೋಗಿಗಳೊಡನೆ ಕನ್ನಡದಲ್ಲಿಯೇ ಮಾತನಾಡಿ ಅವರ ವಿಶ್ವಾಸ ಸಂಪಾದಿಸಿದರು. ಅಂದಿನ ದಿನಗಳಲ್ಲಿ ಸಾಮಾನ್ಯವಾಗಿದ್ದ ಇನ್ಫ್ಲುಯೆಂಜಾ, ಮಲೇರಿಯಾ ರೋಗವನ್ನು ಹೊಡೆದೋಡಿಸಲು ಪಣತೊಟ್ಟರು. ಅಲ್ಲದೆ ಅದರಲ್ಲಿ ಸಫಲವೂ ಆದರು. ಶಿವಮೊಗ್ಗದಂತಹ ಮಲೆನಾಡು ಕೇಂದ್ರದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆಯಿರುವುದನ್ನು ಗಮನಿಸಿ ಅದರ ನಿರ್ಮಾಣಕ್ಕೆ ಕಾರ್ಯಪ್ರವೃತ್ತರಾದರು. ಸರ್ಕಾರದಿಂದ ಒಂದು ನೂರು ಎಕರೆಗಳಷ್ಟು ಭೂಮಿಯನ್ನು ಆಸ್ಪತ್ರೆಯ ಕಟ್ಟಡಕ್ಕೆ ಪಡೆದುಕೊಂಡರು. ಅಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ನಾಂದಿ ಹಾಡಿದರು. ಅವರು ಶಿವಮೊಗ್ಗದ ಬಗ್ಗೆ ಅದೆಷ್ಟು ಪ್ರೀತಿ ಬೆಳಸಿಕೊಂಡಿದ್ದರು ಎಂದರೆ, ಮುಂದೆ ಮೈಸೂರು ಸರ್ಕಾರದಲ್ಲಿ ಸೀನಿಯರ್ ಸರ್ಜನ್ ಆಗಿ, ಆರೋಗ್ಯ ಇಲಾಖೆಯ ಮುಖ್ಯಸ್ಥರಾದರೂ ಸಹ ಶಿವಮೊಗ್ಗದ ಆಸ್ಪತ್ರೆಯ ಬಗೆಗಿನ ವ್ಯಾಮೋಹ ಅವರಿಗೆ ಕಡಿಮೆಯಾಗಲಿಲ್ಲ. ಆಗಾಗ್ಗೆ ಬಂದು ಆಸ್ಪತ್ರೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಮೆಗ್ಗಾನ್ ಅವರ ದೂರದೃಷ್ಟಿ ಮತ್ತು ಪರಿಶ್ರಮದಿಂದಾಗಿ ಆಗಿನ ಕಾಲಕ್ಕೆ ಒಂದು ಸುಸಜ್ಜಿತ ಆಸ್ಪತ್ರೆ ಜನರ ಸೇವೆಗಾಗಿ ಸಿದ್ಧಗೊಂಡಿತು. ಅವರ ಸೇವೆಯ ದ್ಯೋತಕವಾಗಿ ಅದಕ್ಕೆ ಮೆಗ್ಗಾನ್ ಆಸ್ಪತ್ರೆ ಎಂದು ನಾಮಕರಣ ಮಾಡಲಾಯಿತು. ಇಂದು ಈ ಆಸ್ಪತ್ರೆ ಮಲೆನಾಡಿನ ಭಾಗದಲ್ಲಿ ಹೆಚ್ಚು ಪರಿಚಿತವಾಗಿದ್ದು, ಬೃಹದಾಕಾರವಾಗಿ ಬೆಳೆದು ಸಾಮಾನ್ಯ ಜನರಿಗೆ ಸೇವೆ ಸಲ್ಲಿಸುತ್ತಾ, ಡಾ.ಮೆಗ್ಗಾನ್ ಅವರ ಹೆಸರನ್ನು ಚಿರಸ್ಥಾಯಿಯನ್ನಾಗಿ ಮಾಡಿದೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ