ದೆಹಲಿ ವಿಧಾನ ಸಭೆಯ ಮಾಜಿ ಸ್ಪೀಕರ್ ಚೌಧರಿ ಪ್ರೇಮ್ ಸಿಂಗ್ ವಿಶಿಷ್ಟ ವ್ಯಕ್ತಿತ್ವ ಹೊಂದಿರುವ ರಾಜಕಾರಣಿ. 1958ರಿಂದ 2013 ರವರೆಗೆ ನಡೆದ ದೆಹಲಿಯ ಎಲ್ಲ ಚುನಾವಣೆಗಳಲ್ಲಿಯೂ ಅವರು ಸ್ಪರ್ಧಿಸಿದ್ದಾರೆ. ವಿಶೇಷವೆಂದರೆ ಒಂದೇ ಚುನಾವಣಾ ಕ್ಷೇತ್ರದಿಂದ, ಒಂದೇ ಪಕ್ಷದಿಂದ ಸ್ಪರ್ಧಿಸಿ ಈ ಸಮಯದಲ್ಲಿ ಸತತವಾಗಿ ಗೆಲುವನ್ನು ಸಂಪಾದಿಸಿರುವುದು. ಮೂಲತಃ ದೆಹಲಿಯವರೇ ಆದ ಪ್ರೇಮ್ ಸಿಂಗ್, ಪದವೀಧರರು. ಚಿಕ್ಕ ವಯಸ್ಸಿನಿಂದಲೂ ಅವರಿಗೆ ರಾಜಕೀಯದ ಬಗ್ಗೆ ಅತೀವ ಆಸಕ್ತಿಯಿತ್ತು. ಏಕೆಂದರೆ ಇವರ ತಂದೆಯೂ ಸಹ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟಮಾಡಿದವರು. ಕ್ವಿಟ್ ಇಂಡಿಯಾ ಚಳವಳಿಯ ಸಮಯದಲ್ಲಿ ಪ್ರೇಮ್ ಸಿಂಗ್ ಹತ್ತು ವರ್ಷದ ಬಾಲಕ. ಆಗ ನಡೆದ ಚಳವಳಿ ಮತ್ತು ಹೋರಾಟಗಳನ್ನು ನೋಡಿ ತಾವೂ ಒಬ್ಬ ರಾಜಕಾರಣಿಯಾಗಬೇಕು ಎಂಬ ಕನಸನ್ನು ಕಂಡರು.
ಮುಂದೆ ಜನರ ಸಮಸ್ಯೆಗಳನ್ನು ಅಧ್ಯಯನ ಮಾಡಿ ಅದಕ್ಕೆ ಪರಿಹಾರ ಕೊಡಿಸಲು ಹೋರಾಟ ಮಾಡಿದರು. ಇದರಿಂದ ಸಾಮಾನ್ಯ ಜನರ ಒಲವು ಗಳಿಸಿದರು. 1958ರಿಂದಲೂ ದಕ್ಷಿಣ ದೆಹಲಿಯ ಅಂಬೇಡ್ಕರ್ ನಗರ ಕ್ಷೇತ್ರದಿಂದ ಸ್ಪರ್ಧಿಸಿ, ಪ್ರತಿ ಬಾರಿಯೂ ಗೆದ್ದಿದ್ದಾರೆ. ಈಗ್ಗೆ 55 ವರ್ಷಗಳ ಹಿಂದೆ ಮೊದಲ ಬಾರಿಗೆ ದೆಹಲಿ ನಗರಪಾಲಿಕೆಯ ಸದಸ್ಯರಾದಾಗ ಅತ್ಯಂತ ಕಿರಿವಯಸ್ಸಿನ ಚುನಾಯಿತ ಪ್ರತಿನಿಧಿಯೆಂದು ಹೆಸರು ಗಳಿಸಿದ್ದರು. ಅಲ್ಲಿಂದ ಇದುವರೆಗೆ ದೆಹಲಿ ನಗರಪಾಲಿಕೆ ಇರಬಹುದು, ಮೆಟ್ರೋಪಾಲಿಟನ್ ಕೌನ್ಸಿಲ್ ಇರಬಹುದು ಅಥವಾ ವಿಧಾನಸಭೆ ಇರಬಹುದು. ಇದುವರೆಗೂ ನಡೆದ ಹನ್ನೆರಡು ಚುನಾವಣೆಗಳಲ್ಲಿಯೂ ಒಂದೇ ಚುನಾವಣಾ ಕ್ಷೇತ್ರದಿಂದ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಎಲ್ಲದರಲ್ಲೂ ಜಯಭೇರಿ ಬಾರಿಸಿ ದಾಖಲೆ ಸ್ಥಾಪಿಸಿದ್ದಾರೆ. ತಮ್ಮ 80ನೆಯ ವಯಸ್ಸಿನಲ್ಲಿಯೂ ಸಹ ಇವರ ರಾಜಕೀಯ ಉತ್ಸಾಹ ಕುಗ್ಗಿಲ್ಲ. 1959ರಲ್ಲಿ ಹರಿಜನ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿ ದುರ್ಬಲ ವರ್ಗದವರ ಪರಿಸ್ಥಿತಿ ಸುಧಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. 1967ರಲ್ಲಿ ದೆಹಲಿ ಮೆಟ್ರೋಪಾಲಿಟನ್ ಕೌನ್ಸಿಲ್ ರಚನೆಯಾದಾಗಲೂ ಸಹ ಚುನಾವಣೆಯಲ್ಲಿ ಸ್ಪರ್ಧಿಸಿ ಹೆಚ್ಚಿನ ಮತ ಪಡೆದು ಜಯಗಳಿಸಿದರು. ನಂತರ 1972, 1977 ಮತ್ತು 1984 ರ ಮೆಟ್ರೋಪಾಲಿಟನ್ ಚುನಾವಣೆಗಳಲ್ಲಿಯೂ ಸಹ ಗೆದ್ದರು. 1983 ರಲ್ಲಿ ದೆಹಲಿಯ ಪ್ರಥಮ ವಿಧಾಸಭೆ ಚುನಾವಣೆಯಲ್ಲಿ ಗೆದ್ದು ವಿಧಾನಸಭೆಯ ಕಾಂಗ್ರೆಸ್ ಲೆಜಿಸ್ಲೆಟಿವ್ ಪಕ್ಷದ ಉಪನಾಯಕರಾಗಿ ಸೇವೆ ಸಲ್ಲಿಸಿದರು. ನಂತರ 2003, 2008ರಲ್ಲಿ ನಡೆದ ಚುನಾಣೆಗಳಲ್ಲಿಯೂ ಗೆದ್ದು ದಾಖಲೆ ಸ್ಥಾಪಿಸಿದರು. ತಮ್ಮ ಅಧಿಕಾರಾವಧಿಯಲ್ಲಿ 28 ಸಾವಿರ ಮನೆಗಳನ್ನು ನಿರ್ಮಿಸಿ ಸೂರಿಲ್ಲದವರಿಗೆ ಸೂರು ಒದಗಿಸಿಕೊಟ್ಟಿದ್ದು ಇವರ ಸಾಧನೆಗಳಲ್ಲಿ ಒಂದಾಗಿದೆ. 2004 ರಲ್ಲಿ ವಿಧಾನಸಭಾ ಸ್ಪೀಕರ್ ಆಗಿ ಅವಿರೋಧವಾಗಿ ಚುನಾಯಿತರಾದರು. ವಿಧಾನಸಭೆಯ ಕಾರ್ಯಕಲಾಪಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅದುವರೆಗೆ ವಿಧಾನಸಭೆಯ ಶೇ 38ರಷ್ಟು ಸಮಯ ವಿನಾಕಾರಣ ಹಾಳಾಗುತ್ತಿದ್ದುದನ್ನು ಶೇ. 2ಕ್ಕೆ ಇಳಿಸಿದ್ದು ಇವರ ಸಾಧನೆಯಾಗಿದೆ. ಆದರೆ 2013ರ ಚುನಾವಣೆಯಲ್ಲಿ ಮಾತ್ರ ಆಮ್ ಆದ್ಮಿ ಪಕ್ಷದಿಂದ ಪರಾಭವಗೊಂಡಿದ್ದಾರೆ. ಅಪ್ಪಟ ಕಾಂಗ್ರೆಸಿಗರಾದ ಪ್ರೇಮ್ ಸಿಂಗ್ ಪಕ್ಷದಲ್ಲಿಯೂ ಅನೇಕ ಜವಾಬ್ದಾರಿ ಸ್ಥಾನಗಳನ್ನು ಪಡೆದಿದ್ದಾರೆ. ಮತ್ತೆ ವಿಧಾನಸಭೆ ಚುನಾವಣೆ ನಡೆದರೆ ಸ್ಪರ್ಧಿಸಿ ಜಯಗಳಿಸುವ ಭರವಸೆ ಹೊಂದಿರುವ ಪ್ರೇಮ್ ಸಿಂಗ್ ತಮ್ಮ ಗೆಲುವುಗಳಿಂದಾಗಿ ಲಿಮ್ಕಾ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ