ಬೆಟಗೇರಿ ಕೃಷ್ಣಶರ್ಮರು ಕನ್ನಡ ಸಾಹಿತ್ಯದ ನವೋದಯ ಕಾಲದ ಸೃಜನಶೀಲ ಸಾಹಿತಿಯಾಗಿ ಬೆಳೆದವರು. ಆನಂದಕಂದ ಎಂಬ ಕಾವ್ಯನಾಮದಲ್ಲಿ ಸಾಹಿತ್ಯ ಸೇವೆ ಮಾಡಿ ಪ್ರಸಿದ್ಧರಾಗಿದ್ದಾರೆ. ಶಿಕ್ಷಕರಾಗಿ, ಕವಿಗಳಾಗಿ, ಪತ್ರಕರ್ತರಾಗಿ, ಸ್ವಾತಂತ್ರ್ಯ ಸೇನಾನಿಯಾಗಿ ಅವರ ಸೇವೆ ಅನನ್ಯವಾದುದು. ಅವರ "ನನ್ನ ನೆನಪುಗಳು" ಕೃತಿಯಲ್ಲಿ ಕೆಲವು ಭವ್ಯವಾದ ವೈಯಕ್ತಿಕ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ಒಮ್ಮೆ ಸ್ವಾತಂತ್ರ್ಯ ಪೂರ್ವದಲ್ಲಿ ಗೋಕಾಕದ ಮ್ಯಾಜಿಸ್ಟ್ರೇಟರಿಂದ ಒಂದು ಸಮನ್ಸ್ ಕೃಷ್ಣಶರ್ಮರ ಹೆಸರಿಗೆ ಬಂತು. ಅದರಲ್ಲಿ ಬೆಟಗೇರಿಯ ರಾಜನಿಷ್ಠರ ಮೇಲೆ ಸೆಗಣಿ ಎಸೆದು ಅವಮಾನಗೊಳಿಸಿದ್ದಕ್ಕಾಗಿ, ಅವರ ಜೊತೆಗೆ ಮತ್ತಿತರ ಐದು ಜನರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಗೋಕಾಕದ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ನಿರೂಪವಿತ್ತು. ಕೃಷ್ಣ ಶರ್ಮರಿಗೆ ಅದನ್ನು ನೋಡಿ ತುಂಬ ಸಂತೋಷವಾಯಿತು. ಏಕೆಂದರೆ ಅವರ ಮನಸ್ಸಿನಲ್ಲಿ ಒಂದೆಡೆ ಒಂದು ಆಸೆಯಿತ್ತು. ತಾವೂ ಸಹ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡು ದೇಶಭಕ್ತನೆಂದು ಕರೆಸಿಕೊಳ್ಳಬೇಕೆಂಬುದು. ಹೀಗಾಗಿ ತುಂಬಾ ಹುರುಪಿನಿಂದಲೇ ಕರಗುಪ್ಪೀಕರ ವಕೀಲರ ಸಲಹೆ ಕೇಳಲು ಹೋದರು. ಆಗ ವಕೀಲರು, "'ಏನೇ ಆದರೂ ನೀವು ಕ್ಷಮೆಕೇಳಬಾರದು, ಕೊಟ್ಟ ಶಿಕ್ಷೆಯನ್ನು ಸಂತೋಷದಿಂದ ಅನುಭವಿಸಬೇಕು" ಎಂದು ಸಲಹೆ ನೀಡಿದರು. ಅಷ್ಟರಲ್ಲಿ ಮ್ಯಾಜಿಸ್ಟ್ರೇಟರ ಏಜೆಂಟನಾಗಿ ಕೆಲಸ ಮಾಡುತ್ತಿದ್ದ ಭಸ್ಮೆ ಎಂಬ ವಕೀಲನು ಹಣಕೊಟ್ಟರೆ ಮ್ಯಾಜಿಸ್ಟ್ರೇಟರಿಗೆ ಹೇಳಿ ಬಿಡಿಸುವುದಾಗಿ ಅಮಿಷವೊಡ್ಡಿದ. ಆದರೆ ಅದಕ್ಕೊಪ್ಪದ ಶರ್ಮರು ಬಂದದ್ದನ್ನು ಅನುಭವಿಸುವುದಾಗಿ ಹೇಳಿ ನ್ಯಾಯಾಲಯಕ್ಕೆ ಹಾಜರಾದರು. ವಿಚಾರಣೆ ನಡೆದು ಜಾಮೀನು ನೀಡಿ ಬಿಡುಗಡೆಗೊಳಿಸಲು ಮ್ಯಾಜಿಸ್ಟ್ರೇಟರು ಆದೇಶಿಸಿದರು. ಸ್ವಾಭಿಮಾನಿಯಾದ ಕೃಷ್ಣ ಶರ್ಮರು ಜಾಮೀನು ನೀಡಲು ನಿರಾಕರಿಸಿದರು. ಆಗ ಕೋಪಗೊಂಡ ಮ್ಯಾಜಿಸ್ಟ್ರೇಟರು ಜಾಮೀನು ಕೊಡುವವರೆಗೂ ತಮ್ಮ ಕಚೇರಿಯನ್ನು ಬಿಟ್ಟು ತೆರಳಬಾರದೆಂದು ಆಜ್ಞೆ ಮಾಡಿದರು. ಅಷ್ಟೇ ಅಲ್ಲ, ಪೊಲೀಸರಿಗೆ ಹೇಳಿ ಕೃಷ್ಣ ಶರ್ಮರನ್ನು ಜೈಲಿಗೆ ಕರೆದೊಯ್ಯಲು ತಿಳಿಸಿದರು. ಲಾಕಪ್ಪಿನ ಪಡಸಾಲೆಯಲ್ಲಿ ಕುಳಿತ ಶರ್ಮರು ಅಂತೂ ತಮ್ಮ ಜೀವನದ ಒಂದು ಉದ್ದೇಶ ನೆರವೇರಿದ್ದಕ್ಕೆ ಸಂತಸಪಟ್ಟರು. ಅಷ್ಟರಲ್ಲಿ ಅವರ ಜೊತೆಯಲ್ಲಿ ಬಂಧಿತರಾಗಿದ್ದ ಆರೋಪಿಗಳು ಹಣ ನೀಡಿ ಅಪಾದನೆಯಿಂದ ಮುಕ್ತಿ ಪಡೆದು ಹೊರನಡೆದರು. ಅದೇ ರೀತಿಯಲ್ಲಿ ಶರ್ಮರೂ ಸಹ ಹಣ ನೀಡಿ ತೆರಳಬಹುದೆಂದು ಹೇಳಿದರೂ ಕೇಳದೆ ನ್ಯಾಯಾಲಯ ನೀಡುವ ಶಿಕ್ಷೆ ಅನುಭವಿಸಲು ಸಿದ್ಧರಾದರು. ಆದರೆ ಅವರ ಜೊತೆಯಲ್ಲಿ ಬಂಧಿತನಾಗಿ ಬಿಡುಗಡೆ ಹೊಂದಿದ ಉಡುಪಣ್ಣನು "ಈ ಹುಡುಗನನ್ನು ಸೆರೆ ಮನೆಯಲ್ಲಿ ಬಿಟ್ಟಿ, ನಾನು ಮಾತ್ರ ಮನೆಗೆ ಮರಳಲಾರೆ" ಎಂದು ನಿರ್ಧರಿಸಿ ಭಸ್ಮೆಗೆ ಹಣ ನೀಡಿ ಕೃಷ್ಣ ಶರ್ಮರನ್ನೂ ಬಿಡಿಸಿಕೊಂಡು ಕರೆದೊಯ್ದರು. ಆಗ ಕೃಷ್ಣಶರ್ಮರಿಗೆ ತಾವೊಬ್ಬ ದೇಶಭಕ್ತನೆಂದು ಕರೆಸಿಕೊಳ್ಳುವ ಅವಕಾಶ ತಪ್ಪಿದ್ದು ಬೇಸರವುಂಟಾಯಿತಾದರೂ ಮುಂದಿನ ದಿನಗಳಲ್ಲಿ ಸರ್ಕಾರದ ಪಿಂಚಣಿಯ ಆಸೆಗಾಗಿ ದೇಶಭಕ್ತರೊಂದಿಗೆ ತಾನೂ ದೇಶಭಕ್ತನೆಂದು ಮೆರವಣಿಗೆ ಮಾಡಿಸಿಕೊಳ್ಳುವ ಸ್ವಾರ್ಥಕ್ಕೆ ಬಲಿಯಾಗಲಿಲ್ಲವಲ್ಲ ಎಂಬ ಸಮಾಧಾನವುಂಟಾಯಿತು.
- ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com