ತ.ಸು.ಶಾಮರಾಯರು ಅನೇಕರಿಗೆ ಮಾರ್ಗದರ್ಶಕರಾಗಿ, ವಿದ್ಯಾರ್ಥಿಗಳನ್ನು ತಮ್ಮ ಮಕ್ಕಳಂತೆ ಪೋಷಿಸಿಕೊಂಡು ಬಂದವರು. ಅನೇಕ ವಿದ್ಯಾರ್ಥಿಗಳ ಫೀಸು ಕಟ್ಟಿ, ಊಟಹಾಕಿ ಓದಿಸಿದವರು. ಅವರು ಶಾಲಾ ಶಿಕ್ಷಕರಾಗಿದ್ದಾಗ ಕಾರಣವಿಲ್ಲದೆ ಅವರನ್ನು ದುರುದ್ದೇಶದಿಂದ ಅಮಾನತ್ತಿನಲ್ಲಿಟ್ಟಾಗ ಅಭಿಮಾನಧನರಾದ ಶಾಮರಾಯರು ರಾಜೀನಾಮೆ ನೀಡಿ, ಮಹಾರಾಜ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಅವರ ಸಹಾಯ ಪಡೆದ ಎಷ್ಟೋ ಜನರು ಇಂದು ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಾರ್ವಜನಿಕ ಜೀವನದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. ಅವರ ಕೈ ಯಾವಾಗಲೂ ಕೊಡುವ ಕೈಯಾಗಿತ್ತೇ ಹೊರತು ಯಾರ ಮುಂದೆಯೂ ಬೇಡುವ ಕೈಯಾಗಿರಲಲ್ಲ. ಒಮ್ಮೆ ಕಾಸರಗೋಡಿನ ಒಂದು ಕಾರ್ಯಕ್ರಮಕ್ಕೆ ಶಾಮರಾಯರನ್ನು ಆಹ್ವಾನಿಸಲಾಗಿತ್ತು. ಅದೇ ಕಾರ್ಯಕ್ರಮಕ್ಕೆ ಆಹ್ವಾನಿತರಾಗಿದ್ದ ಸಿನಿಮಾ ನಟ ಉದಯಕುಮಾರ್ ಕಾರ್ಯಕ್ರಮದ ಹಿಂದಿನ ದಿನ ಶಾಮರಾಯರ ಮನೆಗೆ ಬಂದು ತಾವೂ ಸಹ ಕಾಸರಗೋಡಿನ ಕಾರ್ಯಕ್ರಮಕ್ಕೆ ಹೋಗುತ್ತಿರುವುದಾಗಿಯೂ, ಅದಕ್ಕಾಗಿ ಶಾಮರಾಯರನ್ನೂ ಕರೆದೊಯ್ಯಲು ಬಂದಿರುವುದಾಗಿ ತಿಳಿಸಿದರು. ಪ್ರಯಾಣಕ್ಕೆ ಇನ್ನೂ ಸಿದ್ಧತೆ ಮಾಡಿಕೊಳ್ಳದ ಶಾಮರಾಯರು ಅವಸರವಸರವಾಗಿ ಒಂದು ಕೈಪೆಟ್ಟಿಗೆಯಲ್ಲಿ ಕೆಲವು ಬಟ್ಟೆಗಳನ್ನು ತುಂಬಿಕೊಂಡು ಹೊರಡಲನುವಾದರು. ಗಡಿಬಿಡಿಯಲ್ಲಿ ತಾವು ಕೊಂಡೊಯ್ಯುವ ಕೈಪೆಟ್ಟಿಗೆಯನ್ನು ಮನೆಯಲ್ಲಿಯೇ ಬಿಟ್ಟು ಉದಯಕುಮಾರ್ ಅವರ ಜೊತೆ ಹೊರಟೇ ಬಿಟ್ಟರು. ರಾತ್ರಿ ಮಲಗುವಾಗ ನೋಡುತ್ತಾರೆ, ತಮ್ಮ ಬಟ್ಟೆಬರೆಗಳು ಯಾವುವೂ ಇಲ್ಲ. ತಾವು ಧರಿಸಿದ್ದ ಜುಬ್ಬವನ್ನು ಗೂಟಕ್ಕೆ ತಗಲಿಸಿ ಸುಖವಾಗಿ ನಿದ್ರೆಹೋದರು. ಬೆಳಿಗ್ಗೆ ತಮ್ಮ ಪ್ರಾತಃವಿಧಿಗಳನ್ನು ಮುಗಿಸಿ, ನೋಡಿದಾಗ ಅವರು ತಗಲಿಹಾಕಿದ್ದ ಜುಬ್ಬ ನಾಪತ್ತೆ! ಅಷ್ಟರಲ್ಲಿ ಅಲ್ಲಿಗೆ ಬಂದ ಉದಯಕುಮಾರ್ ಕೈಯಲ್ಲಿ ಒಂದು ಕಾಗದದ ಪೊಟ್ಟಣವಿತ್ತು. ಅದನ್ನು ಬಿಚ್ಚಿನೋಡಿದಾಗ ಅದರಲ್ಲಿ ಒಂದು ಹೊಸ ಪಂಚೆ, ವಲ್ಲಿ ಮತ್ತು ಬಿಳಿ ಜುಬ್ಬ. ಅದನ್ನು ಸಂಭ್ರಮದಿಂದ ಧರಿಸಿ ಕಾರ್ಯಕ್ರಮಕ್ಕೆ ಹೋದರು. ಎಲ್ಲ ಮುಗಿಸಿಕೊಂಡು ಕಾಸರಗೋಡಿನಿಂದ ಮನೆಗೆ ಹಿಂತಿರುಗಿದರು. ಉದಯಕುಮಾರ್ ಅವರನ್ನು ಒಳಕರೆದು, ಅವರು ಕೊಟ್ಟ ಬಟ್ಟೆಗಳಿಗೆ ಎಷ್ಟು ಖರ್ಚಾಯಿತು ಎಂದು ವಿಚಾರಿಸಿದ್ದಲ್ಲದೆ, ಅಷ್ಟು ಹಣವನ್ನೂ ಅವರ ಕೈಲಿಟ್ಟು ತೆಗೆದುಕೊಳ್ಳಲು ವಿನಂತಿಸಿದರು. ಉದಯಕುಮಾರ್ ಹಣ ತೆಗೆದುಕೊಳ್ಳಲು ನಿರಾಕರಿಸಿದರೂ ಸಹ ಬಿಡದೆ, ಪಟ್ಟು ಹಿಡಿದು, ಅವರು ತೋರಿದ ಪ್ರೀತಿ ಮತ್ತು ಶ್ರಮಕ್ಕೆ ಬೆಲೆ ಕಟ್ಟಲಾಗುವುದಿಲ್ಲವಾದರೂ ಅವರು ವೆಚ್ಚ ಮಾಡಿದ ಹಣವನ್ನಾದರೂ ತೆಗೆದುಕೊಳ್ಳಬೇಕೆಂದು ಸಾರಿ ಸಾರಿ ಹೇಳಿ ಅವರ ಕೈಗೆ ಬಲವಂತವಾಗಿ ಹಣವನ್ನು ಸೇರಿಸಿದರು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com