ತೋರಣ ಗಣಪತಿ ಸನ್ನಿಧಾನದಲ್ಲಿ ಒಡೆಯದ ಇಡುಗಾಯಿ: ನಿಖಿಲ್ ಗೆ ಅಪಶಕುನ

ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಶುಭ ಸೂಚನೆ ದೊರೆತಿಲ್ಲ.
ಶೃಂಗೇರಿ ಮಠದಲ್ಲಿ ದೇವೇಗೌಡರ ಕುಟುಂಬ
ಶೃಂಗೇರಿ ಮಠದಲ್ಲಿ ದೇವೇಗೌಡರ ಕುಟುಂಬ
ಶೃಂಗೇರಿ: ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ಶುಭ ಸೂಚನೆ ದೊರೆತಿಲ್ಲ.
ತೋರಣ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬಳಿಕ ಹರಕೆ ಸಲ್ಲಿಕೆಗಾಗಿ 9 ಇಡುಗಾಯಿ ಒಡೆಯಬೇಕಿತ್ತು. ಕುಮಾರಸ್ವಾಮಿ  ಹಾಗೂ ಪತ್ನಿ ಅನಿತಾ ಒಂದೊಂದು ಕಾಯಿಯನ್ನು ಒಡೆದರು. ಇದೇ ವೇಳೆ ನಿಖಿಲ್ 5 ತೆಂಗಿನ ಕಾಯಿ ಪೈಕಿ ಒಂದು ಕಾಯಿ ಒಡೆಯಲಿಲ್ಲ ಎನ್ನಲಾಗಿದೆ. ಬಳಿಕ ಅರ್ಚಕರು ಒಡೆಯದ ಕಾಯಿಯನ್ನು ತೆಗೆದುಕೊಂಡು ಮತ್ತೆ ಒಡೆದರು ಎನ್ನಲಾಗಿದೆ.
ಆದರೆ ಗಣಪತಿ ಸನ್ನಿಧಾನದಲ್ಲಿ ನಾಲ್ಕು ಒಡೆದರೂ ಒಂದು ಕಾಯಿ ಒಡೆಯದಿರುವುದು ಶುಭ ಸೂಚನೆಯಲ್ಲ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. 
ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆದು ತೋರಣ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಕಾಯಿ ಒಡೆದಾಗ ಒಂದು ಕಾಯಿ ಒಡೆದಿರಲಿಲ್ಲ. ಈಗ ಇತಿಹಾಸ ಮರುಕಳಿಸಿರುವುದು ತಳಮಳಕ್ಕೆ ಕಾರಣವಾಗಿದೆ. 
ಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಮಂಡ್ಯದಲ್ಲಿ ಎಲ್ಲಾ ರೀತಿಯ ಪ್ರಚಾರ ನಡೆಯುತ್ತಿದೆ. ಮಂಡ್ಯಕ್ಕೆ ಎಲ್ಲಾ ನಟರು ದಾಳಿ ಇಟ್ಟರೂ ಪರವಾಗಿಲ್ಲ. ಚಿತ್ರರಂಗದ ನಟರು ಬಂದು ದಾಳಿ ಮಾಡಿದರೂ ತಮಗೇನೂ ಆತಂಕ ಇಲ್ಲ. ತಾವು ಕಾಣದೆ ಇರೋ ಚಿತ್ರ ನಟರೇನೂ ಅವರಲ್ಲ. ನಾನು ಚಿತ್ರರಂಗದಿಂದಲೇ ಬಂದವನು. ಯಾರೇ ಬಂದು ಪ್ರಚಾರ ಮಾಡಿದರೂ ತಮಗೇನು ಆಂತಕವಿಲ್ಲ ಎಂದು ಅವರು ಬೇಸರದಿಂದಲೇ ನುಡಿದರು.
ಇದೆ ವೇಳೆ ಮಾತನಾಡಿದ ಮಂಡ್ಯ ಜೆಡಿಎಸ್ ಅಭ್ಯರ್ಥಿ ನಿಖಿಲ್‌, ಲೋಕಸಭಾ ಚುನಾವಣೆಯಲ್ಲಿ ತಮ್ಮ‌ ಪಕ್ಷದ ಅಭ್ಯರ್ಥಿಗಳ ಪರವಾಗಿ ಪೂಜೆ ಸಲ್ಲಿಸಿದ್ದೇವೆ‌. ಪಕ್ಷದ  ಬಿ.ಫಾರಂ ಅನ್ನು ಜಗದ್ಗುರುಗಳು ಹಾಗೂ ಶಾರದಾಂಬೆ ಮುಂದಿಟ್ಟು ಆಶೀರ್ವಾದ ಪಡೆದಿದ್ದೇವೆ ಎಂದರು.
ಸುಮಾಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಿಖಿಲ್, ಸುಮಾಲತಾ ಅವರಿಗೆ ಒಳ್ಳೆಯದಾಗಲಿ. ಮಂಡ್ಯ ಜಲ್ಲೆಯ ಜನತೆ ಹಾಗೂ ಕುಮಾರಸ್ವಾಮಿ ಅವರ ನಂಟು ಹೇಗಿದೆ ಎಲ್ಲರಿಗೂ ತಿಳಿದ ವಿಚಾರ. ಕುಮಾರಸ್ವಾಮಿ ಅವರ ಮೇಲೆ  ಮಂಡ್ಯದ ಜನ ಪ್ರೀತಿ, ವಿಶ್ವಾಸ ಇಟ್ಟಿದ್ದಾರೆ. ಜಿಲ್ಲೆಯ ಜನತೆಯ ವಿಶ್ವಾಸವನ್ನು ತಾವೂ ಗಳಿಸುವ ಪ್ರಯತ್ನ ನಡೆಸುತ್ತಿರುವುದಾಗಿ ನಿಖಿಲ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com