'ದೇಶವೇ ನಿಮ್ಮನ್ನು ನೋಡಿ ನಗುವ ಕಾಲ ಬರುತ್ತದೆ'; ಫಲಿತಾಂಶದ ಬೆನ್ನಲ್ಲೇ ವಾಜಪೇಯಿ ಸಂಸತ್ ಭಾಷಣ ವೈರಲ್!

ದಾಖಲೆ ಪ್ರಮಾಣದಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತಿದೆ. ಇದರ ನಡುವೆ 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ ನಲ್ಲಿ ಮಾಡಿದ್ದ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ದಾಖಲೆ ಪ್ರಮಾಣದಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತಿದೆ. ಇದರ ನಡುವೆ 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಸಂಸತ್ ನಲ್ಲಿ ಮಾಡಿದ್ದ ಭಾಷಣ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಲೋಕಸಭಾ ಚುನಾವಣೆಯಲ್ಲಿ 303 ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿರುವ ಬಿಜೆಪಿ ಸತತ 2ನೇ ಬಾರಿಗೆ ಸ್ವಂತ ಬಲದ ಮೇಲೆ ಅಧಿಕಾರಕ್ಕೇರುವ ಮೂಲಕ ದಾಖಲೆ ಬರೆದಿದೆ. ಆ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷವೊಂದು ಸತತ 2ನೇ ಬಾರಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುತ್ತಿದೆ. ಇನ್ನು ಇದೇ ಸಂದರ್ಭದಲ್ಲಿ 22 ವರ್ಷಗಳ ಹಿಂದೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಆಡಿದ್ದ ಮಾತುಗಳು ಇದೀಗ ವೈರಲ್ ಆಗುತ್ತಿದೆ. ಇಷ್ಟಕ್ಕೂ ಇಂದಿನ ಫಲಿತಾಂಶಕ್ಕೂ ಅಂದು ವಾಜಪೇಯಿ ಅವರು ಆಡಿದ್ದ ಮಾತಿಗೂ ಏನು ಸಂಬಂಧ? ಈಗೇಕೆ ಆ ಮಾತುಗಳು ವೈರಲ್ ಆಗುತ್ತಿದೆ...?
ವಾಜಪೇಯಿಯನ್ನು ಗೇಲಿ ಮಾಡಿದ್ದ ಕಾಂಗ್ರೆಸ್ ನಾಯಕರು
1996ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 161 ಕ್ಷೇತ್ರಗಳನ್ನು ಗೆದ್ದಿತ್ತು. ಹೀಗಾಗಿ ಅತಿ ದೊಡ್ಡ ಪಕ್ಷವಾಗಿದ್ದ ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಬಿಜೆಪಿಗೆ ಸರ್ಕಾರ ರಚನೆಗೆ ಆಹ್ವಾನ ನೀಡಲಾಗಿತ್ತು. ಇದು ಕೇಂದ್ರದಲ್ಲಿ ಬಿಜೆಪಿಯ ಮೊಟ್ಟಮೊದಲ ಸರ್ಕಾರವಾಗಿತ್ತು. ಆದರೆ, ಬಳಿಕ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಕೇವಲ 13 ದಿನಗಳಲ್ಲಿ ಸರ್ಕಾರ ಪತನಗೊಂಡಿತ್ತು. ವಾಜಪೇಯಿ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದರು. 
ಆಗ ಬಿಜೆಪಿ ಸಂಸದರ ಸಂಖ್ಯೆಯನ್ನು ಕಂಡು ಕಾಂಗ್ರೆಸ್ ನ ಕೆಲ ನಾಯಕರು ಗೇಲಿ ಮಾಡಿದ್ದರು. ಕೇವಲ ಒಬ್ಬ ಸಂಸದನ ಕೊರತೆಯಿಂದಾಗಿ ಸರ್ಕಾರ ಪತನವಾಗಿತ್ತು. ಇದೇ ವಿಚಾರವಾಗಿ ಕಾಂಗ್ರೆಸ್ ನಾಯಕರು ಒಬ್ಬ ಸಂಸದನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ವಾಜಪೇಯಿ ಅವರನ್ನು ಗೇಲಿ ಮಾಡಿದ್ದರು.
ಅಂದು ಪ್ರಧಾನಿ ಹುದ್ದೆಗೆ ರಾಜಿನಾಮೆ ನೀಡುವುದಕ್ಕೂ ಮುನ್ನ ಸಂಸತ್ ನಲ್ಲಿ ಭಾಷಣ ಮಾಡಿದ್ದ ವಾಜಪೇಯಿ ಅವರು, ಇಂದು ಒಬ್ಬ ಸಂಸದನ ಕೊರತೆಯಿಂದಾಗಿ ಸರ್ಕಾರ ಪತನವಾಗುತ್ತಿದೆ ಎಂದು ನೀವು (ಕಾಂಗ್ರೆಸ್) ಗೇಲಿ ಮಾಡುತ್ತಿದ್ದೀರಿ.. ಆದರೆ, ನನ್ನ ಮಾತು ಬರೆದಿಟ್ಟುಕೊಳ್ಳಿ. ಭಾರತದಾದ್ಯಂತ ನಾವು ಅತ್ಯಧಿಕ ಸಂಖ್ಯೆಯ ಸಂಸದರು ಮೂಲಕ ನಮ್ಮದೇ ಸರ್ಕಾರ ರಚಿಸುವ ದಿನ ಬರುತ್ತದೆ. ಆ ದಿನ ಇಡೀ ದೇಶ ನಿಮ್ಮತ್ತ ನೋಡಿ ನಗುತ್ತದೆ. ನಿಮ್ಮ ಬಗ್ಗೆ ಇಡೀ ದೇಶದ ಜನ ಹಾಸ್ಯ ಮಾಡುತ್ತಾರೆ' ಎಂದಿದ್ದರು. 
ಅಧಿಕಾರವಿಲ್ಲದೇ 40 ತಿಂಗಳೂ ಇರಲಾರರು
ಅಂತೆಯೇ ಅಂದು ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರವನ್ನೇ ನಡೆಸಿದ್ದ ವಾಜಪೇಯಿ ಅವರು, 'ಅಧಿಕಾರ ಬಿಟ್ಟು ಹೊರಗಿನ ಶಕ್ತಿಯಾಗಿ ಇರುವುದು ಕಾಂಗ್ರೆಸ್ ಗೆ ಬಹಳ ಕಷ್ಟ. ಅವರು ಮರಳಿ ಅಧಿಕಾರಕ್ಕೆ ಬರಲು ಏನು ಬೇಕಾದರೂ ಮಾಡುತ್ತಾರೆ. ನಾವು ಹಾಗಲ್ಲ. ನಾವು ವಿರೋಧಪಕ್ಷದಲ್ಲಿ 40 ವರ್ಷಗಳನ್ನು ಕಳೆದಿದ್ದೇವೆ. ಅಗತ್ಯಬಿದ್ದರೆ ಇನ್ನೂ 40 ವರ್ಷ ಇರುತ್ತೇವೆ. ಆದರೆ, ಕಾಂಗ್ರೆಸ್ ಪಕ್ಷ ಹಾಗಲ್ಲ. ಅಧಿಕಾರವನ್ನು ಮರುವಶಪಡಿಸಿಕೊಳ್ಳುವ ಪ್ರಯತ್ನಿಸಲು ರಾಜಕೀಯ ಆಟವಾಡದೆ ಕಾಂಗ್ರೆಸ್ 40 ತಿಂಗಳು ಕೂಡ ಇರಲಾರದು. ಏಕೆಂದರೆ ಅಧಿಕಾರವಿಲ್ಲದಿದ್ದರೆ ಅವರು ಏನೂ ಅಲ್ಲ ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com