ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಬುಧವಾರ ಅಪರಾಹ್ನ ಕೋಲ್ಕತ್ತಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದು ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಗರು ಸೇರಲು ನಾಲ್ಕು ವಿಶೇಷ ರೈಲುಗಳನ್ನು ಖರೀದಿಸಿದೆ.
ಝಾರ್ಗ್ರಾಮ್, ಲಾಲ್ಗೋಲಾ, ಪುರುಲಿಯಾ ಮತ್ತು ರಾಮ್ಪುರತ್ ನಿಂದ ಬರುವ ಬಿಜೆಪಿ ಬೆಂಬಲಿಗರಿಗೆ ಅನುಕೂಲವಾಗಲಿದ್ದು ಇದಕ್ಕೆ 53 ಲಕ್ಷ ರೂಪಾಯಿ ವ್ಯಯಿಸಿದೆ.
ಈ ಬಗ್ಗೆ ಬಂಗಾಳಿ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ರೈಲ್ವೆ ಅಧಿಕಾರಿ, ಚುನಾವಣಾ ಆಯೋಗದ ಮಾರ್ಗಸೂಚಿ ಪ್ರಕಾರ ಬಿಜೆಪಿ ನಾಲ್ಕು ವಿಶೇಷ ರೈಲುಗಳನ್ನು ಖರೀದಿಸಿದೆ. ನಿಶ್ಚಿತ ಟಿಕೆಟ್ ದರದಡಿ ರೈಲುಗಳನ್ನು ಬಿಜೆಪಿ ಕಾಯ್ದಿರಿಸಿದೆ ಎಂದು ಹೇಳಿದರು.
1972ರಲ್ಲಿ ಬಾಂಗ್ಲಾದೇಶ ವಿಮೋಚನಾ ರ್ಯಾಲಿ ನಡೆದಿದ್ದು ಇದೇ ಮೈದಾನದಲ್ಲಿ. ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ವಿರೋಧ ಪಕ್ಷಗಳೆಲ್ಲ ಒಟ್ಟಾಗಿ ಕೇಂದ್ರ ಸರ್ಕಾರದ ವಿರುದ್ಧ ಮಹಾಘಟಬಂಧನ ರಚಿಸಿದ್ದು ಕೂಡ ಇಲ್ಲಿಯೇ. ಇಂದಿನ ಮೋದಿ ರ್ಯಾಲಿಗೆ ಸುಮಾರು 8 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ.