ಲೋಕಸಭೆ ಚುನಾವಣೆ: ಬಿಜೆಪಿ ಪ್ರಣಾಳಿಕೆಗೆ 100ಕ್ಕೆ 200 ಅಂಕ ನೀಡಿದ ಶಿವಸೇನೆ

ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಮಿತ್ರ ಪಕ್ಷ ಶಿವಸೇನೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗುತ್ತಿರುವ...
ಮೋದಿ - ಉದ್ಧವ್ ಠಾಕ್ರೆ
ಮೋದಿ - ಉದ್ಧವ್ ಠಾಕ್ರೆ
ಮುಂಬೈ: ಲೋಕಸಭೆ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯನ್ನು ಹಾಡಿ ಹೊಗಳಿದ ಮಿತ್ರ ಪಕ್ಷ ಶಿವಸೇನೆ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗುತ್ತಿರುವ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಹಾಗೂ ರಾಮ ಮಂದಿರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿರುವ ಪ್ರಣಾಳಿಕೆಗೆ 100ಕ್ಕೆ 200 ಅಂಕಗಳನ್ನು ನೀಡಬಹುದು ಎಂದು ಹೇಳಿದೆ.
ಏಕರೂಪ ನಾಗರಿಕ ಸಂಹಿತೆ ಮತ್ತು ಕಲಂ 370ನೇ ವಿಧಿಯೊಂದಿಗೆ ರಾಜಿ ಮಾಡಿಕೊಳ್ಳುವವರನ್ನು ಇತಿಹಾಸ ಕ್ಷಮಿಸುವುದಿಲ್ಲ. ರಾಮ ಮಂದಿರ ನಿರ್ಮಿಸಲು ಬಿಜೆಪಿ 2019 ಕೊನೆಯ ಅವಕಾಶವಾಗಿದ್ದು, ದೇಶದ ಸಮಗ್ರತೆಯ ವಿಚಾರದಲ್ಲಿ ಯಾರೂ ರಾಜಿಯಾಗಬಾರದು ಎಂದು ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ತಿಳಿಸಿದೆ.
ಪ್ರಣಾಳಿಕೆಯಲ್ಲಿ ಬಿಜೆಪಿ ಉಲ್ಲೇಖಿಸಿರುವ ‘ಸಂಕಲ್ಪ ಪತ್ರ’ ರಾಷ್ಟ್ರದ ಭಾವನಾತ್ಮಕ ವಿಚಾರವಾಗಿದ್ದು, ಶಿವಸೇನೆ ಸಹ ಬಿಜೆಪಿಯ ಎದುರು ಈ ಬೆಡಿಕೆಯನ್ನು ಮುಂದಿಟ್ಟಿತ್ತು. ಇದೆ ಕಾರಣಕ್ಕಾಗಿ ಬಿಜೆಪಿ ಚುನಾವಣಾ ಪ್ರಣಾಳಿಕೆಗೆ 200 ಅಂಕಗಳನ್ನು ಕೊಡಬಯಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.
ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿದ್ದಂತೆ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿಗಳಾದ ನ್ಯಾಶನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಹಾಗೂ ಪಿಡಿಪಿ ಮುಖ್ಯಸ್ಥ ಮೆಹಬೂಬ ಮುಫ್ತಿ ಪ್ರಣಾಳಿಕೆಯಲ್ಲಿ ಉಲ್ಲೇಖವಾಗಿರುವ ಕಲಂ 370 ನ್ನು ರದ್ದುಗೊಳಿಸುವ ಬಿಜೆಪಿ ಆಶ್ವಾಸನೆಯನ್ನು ಕಟುವಾಗಿ ಟೀಕಿಸಿದ್ದರು. ಅಲ್ಲದೆ ಬಿಜೆಪಿಯ ಇಂತಹ ನಡೆ ಸ್ವತಂತ್ರ್ಯ ಕಾಶ್ಮೀರದ ಕೂಗಿಗೆ ಮತ್ತಷ್ಟು ಬಲ ತರಲಿದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಓಮರ್ ಅಬ್ದುಲ್ಲಾ ಹಾಗೂ ಮೆಹಬೂಬಾ ಮುಫ್ತಿ ಹೇಳಿಕೆಗೆ ತಮ್ಮ ಸಂಪಾದಕೀಯದಲ್ಲಿ ಖಾರವಾಗಿ ತಿರುಗೇಟು ನೀಡಿರುವ ಉದ್ಧವ್ ಠಾಕ್ರೆ, “ಕಣಿವೆ ರಾಜ್ಯಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನಗಳನ್ನು ಹಿಂದೆಗೆದುಕೊಂಡರೆ ಇಲ್ಲಿ ಭಾರತೀಯ ಧ್ವಜವನ್ನು ಯಾರು ಹಾರಿಸುತ್ತಾರೆ ಎಂಬರ್ಥದಲ್ಲಿ ಕಾಶ್ಮೀರದ ನಾಯಕರು ಬೆದರಿಕೆ ಒಡ್ಡುತ್ತಿದ್ದಾರೆ. ಆದರೆ, ಈ ರೀತಿ ಬೆದರಿಕೆ ಒಡ್ಡುವವರ ನಾಲಿಗೆಯನ್ನು ಕತ್ತರಿಸಬೇಕು” ಎಂದು ಶಿವಸೇನೆ ಆಕ್ರೋಶ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com