ಅಮೇಥಿ: ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಸ್ಮೃತಿ ಇರಾನಿ

ಕೇಂದ್ರ ಜವಳಿ ಖಾತೆ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಗುರುವಾರ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ...
ಸ್ಮೃತಿ ಇರಾನಿ
ಸ್ಮೃತಿ ಇರಾನಿ
ಲಖನೌ: ಕೇಂದ್ರ ಜವಳಿ ಖಾತೆ ಸಚಿವೆ ಹಾಗೂ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ ಅವರು ಗುರುವಾರ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಸ್ಮೃತಿ ಇರಾನಿ ಅವರು ತಮ್ಮ ಪತಿ ಜುಬಿನ್ ಇರಾನಿ ಜೊತೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಮೇಥಿ ನಗರದಲ್ಲಿ ರೋಡ್ ಶೋ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಉಮೇದುವಾರಿಕೆ ಸಲ್ಲಿಸಿದರು.
ಸ್ಮೃತಿ ಇರಾನಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸ್ಥಳೀಯ ಬಿಜೆಪಿ ಶಾಸಕರು, ಮುಖಂಡರು ಸಾಥ್ ನೀಡಿದರು.
ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಸ್ಮೃತಿ ಇರಾನಿ ಅವರು, ಈ ಭಾಗದ ಜನರ ಸೇವೆ ಮಾಡಲು ಹೆಚ್ಚಿನ ಆಕಾಂಕ್ಷೆ ಹೊಂದಿದ್ದೇನೆ. ಹೀಗಾಗಿ ಮತದಾರರು ಕೈಹಿಡಿಯುತ್ತಾರೆ ಎನ್ನುವ ವಿಶ್ವಾಸವಿದೆ. ದೇಶದ ಜನರ ಆಶೀರ್ವಾದದಿಂದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದರು.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿರುದ್ಧ ಮತ್ತೆ ಸ್ಪರ್ಧೆಗೆ ಇಳಿದ ಬಗ್ಗೆ ಪ್ರತಿಕ್ರಿಯಿಸಿದ ಇರಾನಿ, ಇದು ಪಕ್ಷದ ನಿರ್ಧಾರವಾಗಿದೆ. ಈ ಬಾರಿ ಅಮೇಥಿ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಹೀಗಾಗಿ ಭಾರೀ ಪೈಪೋಟಿ ನಡೆಯಲಿದೆ ಎಂದರು.
2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಇರಾನಿ, ರಾಹುಲ್ ಗಾಂಧಿ ವಿರುದ್ಧ ಸುಮಾರು 1 ಲಕ್ಷ ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಆದರೆ ಉತ್ತರ ಪ್ರದೇಶದ 2017ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆ. ಇತ್ತ ಅಮೇಥಿ ಲೋಕಸಭಾ ವ್ಯಾಪ್ತಿಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಜಯಗಳಿಸಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಮೃತಿ ಇರಾನಿ ಅವರು ಈ ಬಾರಿ ಗೆಲ್ಲುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹೀಗಾಗಿ ರಾಹುಲ್ ಗಾಂಧಿ ಅವರು ಅಮೇಥಿ ಜೊತೆಗೆ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎನ್ನುವ ವಿಚಾರ ಚರ್ಚೆಯಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com