ಪ್ರಧಾನಿ ಮೋದಿ, ಅಮಿತ್ ಶಾ ಜನರ ಅತಿದೊಡ್ಡ ಶತ್ರುಗಳು: ಫಾರೂಖ್ ಅಬ್ದುಲ್ಲಾ

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದು, ಜನರ ಅತಿದೊಡ್ಡ ಶತ್ರುಗಳಾಗಿದ್ದಾರೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ ಫಾರೂಖ್ ಅಬ್ದುಲ್ಲಾ ಆರೋಪಿಸಿದ್ದಾರೆ.
ಫಾರೂಖ್ ಅಬ್ದುಲ್ಲಾ
ಫಾರೂಖ್ ಅಬ್ದುಲ್ಲಾ

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದು, ಜನರ ಅತಿದೊಡ್ಡ ಶತ್ರುಗಳಾಗಿದ್ದಾರೆ ಎಂದು ನ್ಯಾಷನಲ್ ಕಾನ್ಪರೆನ್ಸ್ ಅಧ್ಯಕ್ಷ  ಫಾರೂಖ್ ಅಬ್ದುಲ್ಲಾ ಆರೋಪಿಸಿದ್ದಾರೆ.

ಜಮ್ಮು-ಕಾಶ್ಮೀರದ ಮಿರ್ ಬಹ್ರಿ ದಾಲ್ ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಫಾರೂಖ್ ಅಬ್ದುಲ್ಲಾ, ಜಾತಿ, ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸುವಲ್ಲಿ ನಂಬಿಕೆ ಹೊಂದಿರುವ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಜನರ ಅತಿದೊಡ್ಡ ಶತ್ರುಗಳಾಗಿದ್ದಾರೆ. ಆದರೆ, ಜನರು ಬಿಜೆಪಿಯ ವಿಭಜನೆಯ ಸಿದ್ಧಾಂತಕ್ಕೆ ಜೋತು ಬೀಳುವರಲ್ಲ ಎಂದರು.

ಭಾವನಾತ್ಮಕ ವಿವಾದಗಳನ್ನು ಮುನ್ನೆಲೆಗೆ ತರುವ ಮೂಲಕ ಬಿಜೆಪಿ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ. ಪ್ರತಿಯೊಬ್ಬರಿಗೂ ಸಮಾನ ಹಕ್ಕು, ಅವಕಾಶವನ್ನು ಒದಗಿಸಿರುವ ಹಾಗೂ ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿರುವ ಭಾರತೀಯ ಸಂವಿಧಾನವನ್ನು ಬದಲಾಯಿಸಲು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಬಯಸಿದ್ದಾರೆ ಎಂದು ಫಾರೂಖ್ ಅಬ್ದುಲ್ಲಾ ಆರೋಪಿಸಿದರು.

ಸಂವಿಧಾನದ 370 ಹಾಗೂ 35 ಎ ವಿಧಿಯನ್ವಯ ಜಮ್ಮು- ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ವಿನಾಯಿತಿಯನ್ನು ತೆಗೆದುಹಾಕಲು ಇವರಿಬ್ಬರೂ ಮುಂದಾಗಿದ್ದು, ಬಿಜೆಪಿ ಪ್ರಣಾಳಿಕೆಯಲ್ಲೂ ಸೇರಿಸಲಾಗಿದೆ. ಬಿಜೆಪಿ ಪ್ರಣಾಳಿಕೆ ಜಮ್ಮು ಕಾಶ್ಮೀರದ ಮೇಲಿನ ದ್ವೇಷವನ್ನು ಪ್ರತಿಬಿಂಬಿಸುತ್ತದೆ. ಅವರು ಬೆಂಕಿಯೊಂದಿಗೆ ಆಟವಾಡುತ್ತಿರುವುದಾಗಿ ಅವರು  ಹೇಳಿದರು.

ಜಮ್ಮು- ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನವನ್ನು ತೆಗೆದುಹಾಕಲು ಯಾರಿಗೂ ಅವಕಾಶ ನೀಡುವುದಿಲ್ಲ, ನಮ್ಮ ರಾಜ್ಯದ ಸಮಗ್ರತೆ, ಜನರ ಹಕ್ಕುಗಳನ್ನು  ಕಾಪಾಡುವ ನಿಟ್ಟಿನಲ್ಲಿ  ಹೋರಾಟ ನಡೆಸುವುದಾಗಿ ಫಾರೂಖ್ ಅಬ್ದುಲ್ಲಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com