ಮೋದಿ ಹೆಲಿಕಾಪ್ಟರ್ ಪರಿಶೀಲನೆಗೆ ಯತ್ನ: ಕರ್ನಾಟಕ ಕೇಡರ್ ಐಎಎಸ್ ಅಧಿಕಾರಿ ಸೇವೆಯಿಂದ ಅಮಾನತು

ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಲು ಯತ್ನಿಸಿದ ಚುನಾವಣಾ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭುವನೇಶ್ವರ: ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ತಪಾಸಣೆ ಮಾಡಲು ಯತ್ನಿಸಿದ ಚುನಾವಣಾ ಕರ್ತವ್ಯದಲ್ಲಿದ್ದ ಐಎಎಸ್ ಅಧಿಕಾರಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಂಬಲ್ ಪುರದ ಚುನಾವಣಾ ವೀಕ್ಷಕರಾಗಿ  ನೇಮಿಸಲಾಗಿದ್ದ ಕರ್ನಾಟಕ ಕೇಡರ್  ಅಧಿಕಾರಿ ಮೊಹಮ್ಮದ್ ಮೊಹ್ಸಿನ್, ಅವರನ್ನು ಸೇವೆಯನ್ನು ಅಮಾನತು ಮಾಡಲಾಗಿದೆ. ಮುಂದಿನ ಸೂಚನೆವರೆಗೂ ಜಿಲ್ಲಾ ಕೇಂದ್ರದಲ್ಲಿರುವಂತೆ ಭಾರತೀಯ ಚುನಾವಣಾ ಆಯೋಗ ಕಾರ್ಯದರ್ಶಿ ರಾಕೇಶ್ ಕುಮಾರ್ ಆದೇಶ  ಹೊರಡಿಸಿದ್ದಾರೆ.

ಮೂಲಗಳ ಪ್ರಕಾರ ,ಮಂಗಳವಾರ  ಎರಡನೇ ಹಂತದ ಚುನಾವಣೆ ನಿಮಿತ್ತ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲು ಸಂಬಲ್ ಪುರಕ್ಕೆ ಬಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್  ನ್ನು ಮೊಹ್ಸಿನ್ ಪರಿಶೀಲನೆ ನಡೆಸಲು ಯತ್ನಿಸಿದ್ದರು ಎಂಬ ಆರೋಪವಿದೆ

ಚುನಾವಣಾ ಆಯೋಗದ ಸೂಚನೆಗಳ ಪ್ರಕಾರ, ಚುನಾವಣಾ ಸಮಯದಲ್ಲಿ ಎಸ್ ಪಿಜಿ ಭದ್ರತೆಯಲ್ಲಿರುವವರನ್ನು ಪರಿಶೀಲಿಸುವ ಮೊದಲು ಪ್ರೊಟೊಕಾಲ್ ಅನ್ನು ನಿರ್ವಹಿಸಬೇಕು. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದ  ಮೊಹ್ಸಿನ್  ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಒಡಿಶಾದ ಮುಖ್ಯ ಚುನಾವಣಾ ಅಧಿಕಾರಿ ಸುರೇಂದ್ರ ಕುಮಾರ್ ಸಲ್ಲಿಸಿದ ವರದಿಯ ಪ್ರಕಾರ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಮೊಹ್ಸಿನ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com