ಬಿಜೆಪಿ, ಮೋದಿ ಜತೆ ಮಾತುಕತೆ ಸಾಬೀತು ಪಡಿಸಿದರೆ ರಾಜಕೀಯ ನಿವೃತ್ತಿ: ಸ್ಟಾಲಿನ್ ಸವಾಲು

ಬಿಜೆಪಿಯೊಂದಿಗೆ ಚುನಾವಣೋತ್ತರ ಸಂಭವನೀಯ ಮೈತ್ರಿ ಕುರಿತು ತಾವು ಮಾತುಕತೆ ನಡೆಸುತ್ತಿರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್...
ಸ್ಟಾಲಿನ್ - ತಮಿಳಿಸೈ
ಸ್ಟಾಲಿನ್ - ತಮಿಳಿಸೈ
ಚೆನ್ನೈ: ಬಿಜೆಪಿಯೊಂದಿಗೆ ಚುನಾವಣೋತ್ತರ ಸಂಭವನೀಯ ಮೈತ್ರಿ ಕುರಿತು ತಾವು ಮಾತುಕತೆ ನಡೆಸುತ್ತಿರುವುದಾಗಿ ರಾಜ್ಯ ಬಿಜೆಪಿ ಅಧ್ಯಕ್ಷೆ ತಮಿಳಿಸೈ ಸೌಂದರರಾಜನ್ ನೀಡಿರುವ ಹೇಳಿಕೆಯನ್ನು ಡಿಎಂಕೆ ಅಧ್ಯಕ್ಷ ಎಂಕೆ ಸ್ಟಾಲಿನ್ ತೀವ್ರವಾಗಿ ಖಂಡಿಸಿದ್ದು, ಅದನ್ನುಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿಪಡೆಯಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.
ಚುನಾವಣೋತ್ತರ ಮೈತ್ರಿ ಕುರಿತಂತೆ ಬಿಜೆಪಿಯೊಂದಿಗೆ ತಾನು ಮಾತುಕತೆ ನಡೆಸಿರುವೆ ಎಂಬುದನ್ನು  ಪ್ರಧಾನಿ ನರೇಂದ್ರ ಮೋದಿ ಅಥವಾ ತಮಿಳುಸೈ ಇಬ್ಬರಲ್ಲಿ ಒಬ್ಬರು ಸಾಬೀತುಪಡಿಸಿದರೆ, ರಾಜಕೀಯ ನಿವೃತ್ತಿ ಪಡೆಯಲು ಸಿದ್ಧ ಎಂದು ಸ್ಟಾಲಿನ್ ತಿಳಿಸಿದ್ದಾರೆ.
ಒಂದು ವೇಳೆ ಸಾಬೀತು ಪಡಿಸಲು ಅವರು ವಿಫಲರಾದರೆ ಮೋದಿ ಹಾಗೂ ತಮಿಳ್ ಸೈ ರಾಜಕೀಯ ನಿವೃತ್ತಿಪಡೆಯಲು ಸಿದ್ಧರಿದ್ದಾರೆಯೇ ಎಂದು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ತೂತುಕುಡಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ತಮಿಳಿಸೈ, ಡಿಎಂಕೆ ಮುಖ್ಯಸ್ಥ  ಸ್ಟಾಲಿನ್ ಬಿಜೆಪಿಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಗೆಲುವು ಸಾಧಿಸುವುದು ಎಲ್ಲರಿಗೂ ತಿಳಿದಿದ್ದು,  ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕೂಡಾ  ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬ ತಮಿಳಿಸೈ ಹೇಳಿಕೆ ಅಪ್ಪಟ ಸುಳ್ಳು ಎಂದಿರುವ ಸ್ಟಾಲಿನ್, ಸೋಲಿನ ಸುಳಿಯಲ್ಲಿರುವ ಬಿಜೆಪಿ ಗೊಂದಲ ಸೃಷ್ಟಿಸುವ ಪ್ರವೃತ್ತಿಯನ್ನು ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕ ರಾಜಕೀಯ ಕುಟುಂಬದಿಂದ ಬಂದಿರುವ ತಮಿಳಿಸೈ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದನ್ನು ನೋಡಿದರೆ ತಮಗೆ ತೀವ್ರ ನೋವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ  ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿ ಎಂದು ಮೊದಲು ಬಿಂಬಿಸಿದ್ದೇ ಡಿಎಂಕೆ ಪಕ್ಷ, ಕಳೆದ ಐದು ವರ್ಷಗಳಿಂದ ದೇಶದ ಜನರು ತೀವ್ರ ಯಾತನೆಗಳನ್ನು ಅನುಭವಿಸುತ್ತಿದ್ದು ಬಿಜೆಪಿ ನೇತೃತ್ವ  ಫ್ಯಾಸಿಸ್ಟ್, ಸ್ಯಾಡಿಸ್ಟ್  ಹಾಗೂ ಸರ್ವಾಧಿಕಾರದ ಕೇಂದ್ರ ಸರ್ಕಾರ ತೊಲಗಬೇಕು ಎಂದು ತಾವು ಪುನರುಚ್ಚರಿಸುವುದಾಗಿ ಹೇಳಿದರು.
ಚುನಾವಣೆಯಲ್ಲಿ ಡಿಎಂಕೆ ಹಾಗೂ ಅದರ ಮೈತ್ರಿ ಪಕ್ಷಗಳ ಜಯಗಳಿಸುವುದನ್ನು ಬಿಜೆಪಿ ಖಚಿತ ಪಡಿಸಿಕೊಂಡು ಹೆದರಿರುವ ಬಿಜೆಪಿ ನಾಯಕರು ಕೊನೆಯ ಯತ್ನವಾಗಿ ತಮಿಳಿಸೈ ಅವರನ್ನು  ಆಸ್ತ್ರವನ್ನಾಗಿ ಬಳಸುತ್ತಿದ್ದಾರೆ ಎಂದು ಆರೋಪಿಸಿದರು.
ಮೇ 19 ರಂದು ನಡೆಯಲಿರುವ ನಾಲ್ಕು ಕ್ಷೇತ್ರಗಳ ವಿಧಾನಸಭಾ ಉಪ ಚುನಾವಣೆಗಳಲ್ಲಿ ಡಿಎಂಕೆಗೆ  ಅಲ್ಪಸಂಖ್ಯಾತರ ಮತಗಳನ್ನು ತಪ್ಪಿಸುವ  ಹಾಗೂ ಲೋಕಸಭೆಯ ಅಂತಿಮ ಹಂತದ ಚುನಾವಣೆಗೆ ಮುನ್ನ ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಎಂದು ಬಿಂಬಿಸುವುದನ್ನು ತಡೆಯುವ  ಪ್ರಯತ್ನವಾಗಿ ತಮಿಳಿಸೈ ಇಂತಹ ಹೇಳಿಕೆ ನೀಡಿದ್ದಾರೆ ಎಂದರು. ಆದರೆ  ಬಿಜೆಪಿ ಈ ಎಲ್ಲ ಲೆಕ್ಕಾಚಾರಗಳು ತಲೆಕೆಳಗಾಗಲಿವೆ ಎಂದು ಸ್ಟಾಲಿನ್ ಭವಿಷ್ಯ ನುಡಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com