ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಗಳ ಯಶಸ್ಸಿನ ಸೂತ್ರದಾರ ಸಿದ್ದರಾಮಯ್ಯ?

ಕಾಂಗ್ರೆಸ್-ಜೆಡಿಎಸ್ ಉನ್ನತ ಮಟ್ಟದ ನಾಯಕರ ಮಧ್ಯೆ ಇರುವ ಸ್ನೇಹಪರತೆ ಮತ್ತು ಮೈತ್ರಿ ಇದೇ ರೀತಿ...
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಉನ್ನತ ಮಟ್ಟದ ನಾಯಕರ ಮಧ್ಯೆ ಇರುವ ಸ್ನೇಹಪರತೆ ಮತ್ತು ಮೈತ್ರಿ ಇದೇ ರೀತಿ ಮುಂದುವರಿದರೆ ಪಕ್ಷದ ಕಾರ್ಯಕರ್ತರಿಗೆ ಸರಿಯಾದ ಸಂದೇಶ ಸಾರುತ್ತಾರೆ ಎಂದು ವಿಶ್ಲೇಷಿಸಲಾಗಿದೆ. ಆದರೆ ನಾಯಕರ ಮಧ್ಯೆ ಇರುವ ಈ ಒಗ್ಗಟ್ಟು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದರಲ್ಲೂ ಎರಡೂ ಪಕ್ಷಗಳ ತಳಮಟ್ಟದ ಕಾರ್ಯಕರ್ತರಲ್ಲಿ ಹಾಸನ, ಮಂಡ್ಯ ಮತ್ತು ತುಮಕೂರುಗಳಲ್ಲಿ ಅಸಮಾಧಾನ ಹೊಗೆಯಾಡುತ್ತಲೇ ಇದೆ.
ಜೆಡಿಎಸ್ ಈ ಸಂಕಷ್ಟ ಪರಿಸ್ಥಿತಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯನವರ ಮೊರೆ ಹೋಗಿದೆ. ಕಾಂಗ್ರೆಸ್ ನ ಬಂಡಾಯ ನಾಯಕರನ್ನು ಶಮನಗೊಳಿಸಿ ಒಟ್ಟಿಗೆ ಕರೆತರುವ ಶಕ್ತಿ ಸದ್ಯಕ್ಕೆ ಇರುವುದು ಸಿದ್ದರಾಮಯ್ಯನವರಿಗೆ. ಅಹಿಂದ ವೋಟುಗಳನ್ನು ಸೆಳೆಯುವ ಶಕ್ತಿ ಕೂಡ ಅವರಲ್ಲಿದೆ. ಈ ಮೂರೂ ಕ್ಷೇತ್ರಗಳಲ್ಲಿ ಅಹಿಂದ ಮತಗಳು ಮುಖ್ಯವಾಗಿವೆ. ತುಮಕೂರಿನಲ್ಲಿ ಸಿದ್ದರಾಮಯ್ಯನವರ ಬೆಂಬಲ ಮುಖ್ಯ ಪಾತ್ರ ವಹಿಸಲಿದೆ. ತುಮಕೂರಿನಲ್ಲಿ ಹೆಚ್ ಡಿ ದೇವೇಗೌಡರಿಗೆ ಎದುರಾಗಿ ಪ್ರಮುಖ ಲಿಂಗಾಯತ ಮುಖಂಡ ಬಿಜೆಪಿಯ ಜಿ ಎಸ್ ಬಸವರಾಜು ಅವರ ಸ್ಪರ್ಧೆಯಿದೆ.
ದೇವೇಗೌಡರು ಹಾಸನದವರಾಗಿರುವುದರಿಂದ ತುಮಕೂರಿನ ಕೆಲವು ಒಕ್ಕಲಿಗರಿಗೆ ಅಸಮಾಧಾನವಿದ್ದರೂ ಕೂಡ ಅವರು ಬೆಂಬಲ ಪಡೆದು ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ. ಬಿಜೆಪಿ ಅಭ್ಯರ್ಥಿಗೆ ಲಿಂಗಾಯತರ ಬೆಂಬಲವಿದೆ. ಈ ಪರಿಸ್ಥಿತಿಯಲ್ಲಿ ಅಹಿಂದ ಮತಗಳು ಇಲ್ಲಿ ಶೇಕಡಾ 45ರಷ್ಟಿದ್ದು ಅದು ನಿರ್ಣಾಯಕ ಪಾತ್ರ ವಹಿಸುತ್ತದೆ. ಕಾಂಗ್ರೆಸ್-ಜೆಡಿಎಸ್ ಬೆಂಬಲದ ಅಲ್ಪಸಂಖ್ಯಾತ ಮತಗಳು ದೇವೇಗೌಡರ ಪಾಲಾದರೆ ಹಿಂದುಳಿದ ದಲಿತ ಮತಗಳು ಒಡೆದು ಹೋಗುವ ಸಾಧ್ಯತೆಯಿದೆ.
ತುಮಕೂರಿನಲ್ಲಿ ಕುರುಬ ಜನಾಂಗದವರು ದೇವೇಗೌಡರನ್ನು ವಿರೋಧಿಸುತ್ತಿರುವುದರಿಂದ ಸಿದ್ದರಾಮಯ್ಯನವರ ಬೆಂಬಲ ಅವರಿಗೆ ಬೇಕಾಗಿದೆ. ರಾಜಕೀಯ ವಿಶ್ಲೇಷಕ ಪ್ರೊ. ಮುಜಾಫರ್ ಅಸ್ಸದಿ ಹೇಳುವ ಪ್ರಕಾರ, ತುಮಕೂರಿನಲ್ಲಿ ಮುಖ್ಯ ಪಾತ್ರ ವಹಿಸುವುದು ಅಹಿಂದ ನಾಯಕ ಸಿದ್ದರಾಮಯ್ಯನವರು. ಮಂಡ್ಯ ಮತ್ತು ಹಾಸನದಲ್ಲಿ ನಿಖಿಲ್ ಮತ್ತು ಪ್ರಜ್ವಲ್ ರೇವಣ್ಣ ಪರ ಮತದಾರರನ್ನು ಸೆಳೆಯಲು ಪ್ರಮುಖ ಪಾತ್ರ ವಹಿಸುತ್ತಾರೆ. ಇಬ್ಬರೂ ಇತ್ತೀಚೆಗೆ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಕೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com