ಬೆಂಗಳೂರು ಉತ್ತರ: ಟಿಕೆಟ್ ಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಪೈಪೋಟಿ

ಮೊದಲ ಹಂತದ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕಣಕ್ಕಿಳಿಸಲು ಎಲ್ಲಾ ಸಿದ‍್ಧತೆಗಳನ್ನು ಮಾಡಿಕೊಂಡಿರುವ ಕಾಂಗ್ರೆಸ್....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಮೊದಲ ಹಂತದ ಚುನಾವಣೆಗೆ ರಾಜ್ಯದ 14 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಕಣಕ್ಕಿಳಿಸಲು ಎಲ್ಲಾ ಸಿದ‍್ಧತೆಗಳನ್ನು ಮಾಡಿಕೊಂಡಿರುವ ಕಾಂಗ್ರೆಸ್ ಗೆ ಬೆಂಗಳೂರು ಉತ್ತರ ನುಂಗಲಾರದ ತುತ್ತಾಗಿದೆ.
ದೋಸ್ತಿ ಒಪ್ಪಂದದಂತೆ ಬೆಂಗಳೂರು ಉತ್ತರ ಕ್ಷೇತ್ರವನ್ನು ಈ ಮೊದಲು ಜೆಡಿಎಸ್ ಗೆ ಬಿಟ್ಟುಕೊಡಲಾಗಿತ್ತು. ಆದರೆ, ಎಚ್.ಡಿ.ದೇವೇಗೌಡರು ತುಮಕೂರಿನಿಂದ ಸ್ಪರ್ಧಿಸಲು ನಿರ್ಧರಿಸಿದ್ದರಿಂದ ಕೊನೆ ಕ್ಷಣದಲ್ಲಿ ಈ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಡಲಾಗಿದ್ದು, ಬೆಂಗಳೂರು ಉತ್ತರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ಗೊಂದಲ ಸೃಷ್ಟಿಯಾಗಿದೆ.
ಬೆಂಗಳೂರು ಉತ್ತರ ಕ್ಷೇತ್ರದಿಂದ ತಮ್ಮನ್ನು ಕಣಕ್ಕಿಳಿಸಬೇಕು ಎಂದು ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜಕುಮಾರ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇತ್ತ, ಬಿ.ಎಲ್.ಶಂಕರ್ ಅವರನ್ನು ದೋಸ್ತಿ ಪಕ್ಷಗಳು ಒಮ್ಮತದಿಂದ ಕಣಕ್ಕಿಳಿಸಲು ನಿರ್ಧರಿಸಿದ್ದು, ಇಬ್ಬರ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ತುಮಕೂರು ಕ್ಷೇತ್ರದಿಂದ ಮತ್ತೊಮ್ಮೆ ಗೆದ್ದು ಬರುವ ವಿಶ್ವಾಸ  ಹಾಲಿ ಸಂಸದ ಮುದ್ದಹನುಮೇಗೌಡ ಹೊಂದಿದ್ದರು. ಆದರೆ, ತಮ್ಮ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದರಿಂದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕಾಂಗ್ರೆಸ್ ನಾಯಕರು ಮುದ್ದಹನುಮೇಗೌಡರ ಮನವೊಲಿಕೆಗೆ ಮುಂದಾಗಿದ್ದು, ಒಂದು ವೇಳೆ ನಿರಾಕರಿಸಿದರೆ ಬಿ.ಎಲ್.ಶಂಕರ್ ಈ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಸಹ ಬೆಂಗಳೂರು ಉತ್ತರ ಟಿಕೆಟ್ ಗೆ ಲಾಬಿ ಮಾಡುತ್ತಿದ್ದು, ಒಂದು ವೇಳೆ ಮುದ್ದಹನುಮೇಗೌಡರು ನಿರಾಕರಿಸಿದರೆ ನನಗೆ ಟಿಕೆಟ್ ನೀಡಿ ಎಂದು ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಮಧ್ಯೆ ಮುದ್ದಹನುಮೇಗೌಡ ಅಥವಾ ಬಿ.ಎಲ್.ಶಂಕರ್ ಅವರು ಅಭ್ಯರ್ಥಿಯಾಗಲಿ ಎಂದು ದೋಸ್ತಿ ಪಕ್ಷಗಳು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿವೆ.
ಬೆಂಗಳೂರು ಉತ್ತರದಲ್ಲಿ ಕಾಂಗ್ರೆಸ್ ನ 5 ಹಾಗೂ ಜೆಡಿಎಸ್ ನ ಇಬ್ಬರು ಸೇರಿದಂತೆ ಒಟ್ಟು 7 ಶಾಸಕರು ನಮ್ಮವರೆ ಇದ್ದಾರೆ. ಎಲ್ಲರೂ ಸೇರಿ ನಿಮ್ಮ ಗೆಲುವಿಗೆ ಶ್ರಮಿಸಲಿದ್ದಾರೆ. ಇಲ್ಲಿಂದ ಸ್ಪರ್ಧೆ ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮುದ್ದೆಹನುಮೇಗೌಡರನ್ನು ಆಹ್ವಾನಿಸಿದ್ದು, ಮನವೊಲಿಕೆಗೆ ಮುಂದಾಗಿದ್ದಾರೆ. ಒಂದು ವೇಳೆ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಿದರೆ ಅವರು ತುಮಕೂರಿನಲ್ಲಿ ದೇವೇಗೌಡರ ಗೆಲುವಿಗೆ ಬೆಂಬಲಿಸಲಿದ್ದಾರೆ ಎಂಬ ನಿರೀಕ್ಷೆ ದೋಸ್ತಿ ಪಕ್ಷಗಳು ಹೊಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com