ಗಬ್ಬರ್ ಸಿಂಗ್ ಟ್ಯಾಕ್ಸ್ ರದ್ದು, ಹೊಸ ಜಿಎಸ್ ಟಿ ಜಾರಿ ಮಾಡುತ್ತೇವೆ: ಬೆಂಗಳೂರಿನಲ್ಲಿ ರಾಹುಲ್ ಗಾಂಧಿ

ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ರದ್ದುಗೊಳಿಸುತ್ತೇವೆ ಮತ್ತು ಹೊಸ ಜಿಎಸ್ ಟಿ ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್....
ಕಾಂಗ್ರೆಸ್ - ಜೆಡಿಎಸ್ ನಾಯಕರು
ಕಾಂಗ್ರೆಸ್ - ಜೆಡಿಎಸ್ ನಾಯಕರು
Updated on
ಬೆಂಗಳೂರು: ಕಾಂಗ್ರೆಸ್ ಅಧಿಕಾರಿಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ರದ್ದುಗೊಳಿಸುತ್ತೇವೆ ಮತ್ತು ಹೊಸ ಜಿಎಸ್ ಟಿ ಜಾರಿಗೊಳಿಸುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾನುವಾರ ಭರವಸೆ ನೀಡಿದ್ದಾರೆ.
ರಾಜ್ಯದಲ್ಲೂ ಲೋಕಸಭಾ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇಂದು ನೆಲಮಂಗಲದಲ್ಲಿ ಕಾಂಗ್ರೆಸ್-ಜೆಡಿಎಸ್ ಬೃಹತ್​ ಮೈತ್ರಿ ಸಮಾವೇಶ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಒಡೆಯುವ ಕೆಲಸ ಮಾಡಿದರು. ಆದರೆ ನಾವು ದೇಶವನ್ನು ಜೋಡಿಸುವ ಕೆಲಸ ಮಾಡುತ್ತೇವೆ ಎಂದು ತೀವ್ರ ವಾಗ್ದಾಳಿ ನಡೆಸಿದರು.
ಮೋದಿ ತಮ್ಮನ್ನು ಚೌಕಿದಾರರು ಎಂದು ಹೇಳಿಕೊಂಡು ತಮ್ಮ 20-30 ಮಿತ್ರರಿಗೆ ಮಾತ್ರ ನೆರವು ನೀಡಿದರು. ಅನಿಲ್​ ಅಂಬಾನಿಗೆ 30 ಸಾವಿರ ಕೋಟಿ ರೂಪಾಯಿ ನೀಡಿದರು. ಇದು ಪ್ರಧಾನಿ ಮೋದಿಯ ನೀತಿಯಾಗಿದೆ. ಆದೇ ರೈತರ ಸಾಲ ಮನ್ನಾ ಮಾಡಿ ಎಂದರೆ ಹಣ ಎಲ್ಲಿಂದ ತರಬೇಕು? ಎಂದು ಪ್ರಶ್ನಿಸುತ್ತಾರೆ. ಅದೇ ಕರ್ನಾಟಕದಲ್ಲಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಿದೆ. ನಮ್ಮ ಇನ್ನೂ ಎರಡು ರಾಜ್ಯ ಸರ್ಕಾರಗಳು ಹೀಗೆ ರೈತರಿಗೆ ನೆರವಾಗಿವೆ. ದುಡ್ಡು ನಮಗೆಲ್ಲಿಂದ ಬಂತು? ನಾವು ರೈತರ ಪರವಾಗಿದ್ದೇವೆ ಎಂಬುದು ಗಮನಾರ್ಹ. ಆದರೆ ಅವರ ಬಳಿ ಅಂಬಾನಿ, ಅದಾನಿಗಳಿಗೆ ನೀಡಲು ಸಾಕಷ್ಟು ಹಣ ಇದೆಯಷ್ಟೆ ಎಂದು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರ ವಿರುದ್ಧವೂ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ಯಡಿಯೂರಪ್ಪ ಅವರು 1,800 ಕೋಟಿ ರೂ ಹಣವನ್ನು ಕೇಂದ್ರದ ನಾಯಕರುಗಳಿಗೆ ಸಂದಾಯ ಮಾಡಿದ್ದಾರೆ. ಅದೆಲ್ಲ ಎಲ್ಲಿಂದ ಬಂತು? ಅದೆಲ್ಲ ಯಾರಿಗೆ ಸೇರಿದ್ದು ಗೊತ್ತಾ? ಅದು ಕರ್ನಾಟಕದ ರೈತರ ಜೇಬಿಂದ ತೆಗೆದುಕೊಂಡ ಹಣ ಎಂದರು.
ಮೋದಿ ಕೆಲವು ಶ್ರೀಮಂತರಿಗೆ ಸಹಾಯ ಮಾಡಿದ್ರೆ, ನಮ್ಮ ನ್ಯಾಯ್ ಸ್ಕೀಂ ರೈತರ ಪರವಾಗಿದ್ದು, ಈ ಯೋಜನೆ ಮೂಲಕ ನಾವು ಬಡತನ ರೇಖೆಗಿಂತ ಕೆಳ ಸ್ಥರದಲ್ಲಿರೋ ಶೇ.20 ರಷ್ಟು ಕುಟುಂಬಗಳಿಗೆ ವಾರ್ಷಿಕ 72 ಸಾವಿರ ರೂ.ಹಣ ನೀಡೋದಾಗಿ ರಾಹುಲ್ ಗಾಂಧಿ ಭರವಸೆ ನೀಡಿದರು.
ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ ಜೆಡಿಎಸ್ ಅಭ್ಯರ್ಥಿಗಳು ಎಲ್ಲೆಲ್ಲಿ ಸ್ಪರ್ಧಿಸಿದ್ದಾರೋ ಅಲ್ಲೆಲ್ಲಾ ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಅವರನ್ನು ಬೆಂಬಲಿಸಿ, ಗೆಲ್ಲಿಸಬೇಕು. ಅದೇ ರೀತಿ, ಜಿಡಿಎಸ್ ಕಾರ್ಯತಕರ್ತರೂ ಅಷ್ಟೇ.. ನಮ್ಮ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕು. ಒಗ್ಗಟ್ಟು ಪ್ರದರ್ಶಿಸಬೇಕು. ಒಟ್ಟಿನಲ್ಲಿ ​​ನಮ್ಮೆಲ್ಲರ ಸಾಮಾನ್ಯ ಗುರಿ ಮೋದಿ ನೇತೃತ್ವದ ಬಿಜೆಪಿ ಪಕ್ಷವನ್ನು ಅಧಿಕಾರದಿಂದ ದೂರ ಇಡುವುದಾಗಿದೆ. ಈ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಮೈತ್ರಿಕೂಟದ ಜಂಟಿ ಸಮಾವೇಶದಲ್ಲಿ ರಾಹುಲ್​ ಗಾಂಧಿ ಕರೆ ನೀಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com